ಆಳ್ವಾಸ್‌ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ವಿದ್ಯಾರ್ಥಿಗಳೇ ಎಂಸಿ!

| Published : Dec 14 2024, 12:49 AM IST

ಸಾರಾಂಶ

ಸಂಸ್ಥೆಯ ಮುಖ್ಯಸ್ಥ ಡಾ. ಮೋಹನ ಆಳ್ವರ ಪರಿಕಲ್ಪನೆ, ಸಂಸ್ಥೆಯ ಟ್ರಸ್ಟಿ ವಿವೇಕ್‌ ಆಳ್ವರ ಕಾಳಜಿಯಲ್ಲಿ ಮೂರು ಭಾಷೆಗಳಲ್ಲಿ ಕಾರ್ಯಕ್ರಮ ನಿರೂಪಣೆಗೆ ಅವಕಾಶ ನೀಡಲಾಗಿದೆ. ಆಕರ್ಷಕ ದಿರಿಸಿನಲ್ಲಿ ವಿದ್ಯಾರ್ಥಿಗಳು ಅರಳುಹುರಿದಂತೆ ಕಾರ್ಯಕ್ರಮ ನಿರೂಪಿಸುವುದು ಪ್ರೇಕ್ಷಕರನ್ನು ಹುಬ್ಬೇರುವಂತೆ ಮಾಡುತ್ತದೆ ಎನ್ನುವುದು ಅತಿಶಯೋಕ್ತಿಯಲ್ಲ.

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ವಿದ್ಯಾಗಿರಿ, ಮೂಡುಬಿದಿರೆ ಆಳ್ವಾಸ್‌ ವಿರಾಸತ್‌ನಂತಹ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಿಸುವುದು ಎಷ್ಟು ದೊಡ್ಡ ಸವಾಲು ಆಗಿದೆಯೋ ಅಷ್ಟೇ ಸವಾಲು ಅದರ ನಿರೂಪಣೆ. ಸಹಸ್ರಾರು ಮಂದಿ ಪ್ರೇಕ್ಷಕರು, ಖ್ಯಾತಿವೆತ್ತ ಕಲಾವಿದರು, ದಿಗ್ಗಜರ ನಡುವೆ ಕಾರ್ಯಕ್ರಮ ನಿರೂಪಣೆ ಮಾಡುವುದು ಸುಲಭವಲ್ಲ. ಆದರೆ ಆಳ್ವಾಸ್‌ ವಿರಾಸತ್‌ನಲ್ಲಿ ಕಾರ್ಯಕ್ರಮ ನಿರೂಪಣೆ ಮಾಡುವುದು ಬಹಳ ಸಲೀಸು ಆಗಿಬಿಟ್ಟಿದೆ. ಅದು ಕೂಡ ಅಧ್ಯಾಪಕರು, ನುರಿತವರು ಅಲ್ಲ, ಕೇವಲ ವಿದ್ಯಾರ್ಥಿಗಳು ಎಂಬುದು ಗಮನಾರ್ಹ.

ಆಳ್ವಾಸ್‌ ವಿರಾಸತ್‌ನಲ್ಲಿ ಕಾರ್ಯಕ್ರಮ ನಿರೂಪಣೆ (ಮಾಸ್ಟರ್‌ ಆಫ್‌ ಸೆರಮನಿ-ಎಂಸಿ) ಮಾಡುವುದೇ ಒಂದು ಸವಾಲು, ಅದುವೇ ಭಾಗ್ಯ. ಇದನ್ನು ಸಾಧಿಸಿ ತೋರಿಸುತ್ತಿದ್ದಾರೆ ವಿದ್ಯಾರ್ಥಿಗಳು. ಇದರಲ್ಲಿ ಪ್ರಾಥಮಿಕದಿಂದ ತೊಡಗಿ ಸ್ನಾತಕೋತ್ತರ ಪದವಿ ವರೆಗೆ ವಿದ್ಯಾರ್ಥಿಗಳು ಇದ್ದಾರೆ ಎಂಬುದು ವಿಶೇಷ. ಕಾರ್ಯಕ್ರಮ ನಿರೂಪಣೆ ಮಾಡುವ ವಿದ್ಯಾರ್ಥಿಗಳ ಆಯ್ಕೆಯೂ ಅಷ್ಟೇ ಕ್ರಮಬದ್ಧವಾಗಿ ನಡೆಯುತ್ತದೆ. ವಿದ್ಯಾರ್ಥಿಗಳ ಆಯ್ಕೆ ಹೇಗೆ?: ಆಳ್ವಾಸ್‌ನಡಿ 21 ಶಿಕ್ಷಣ ಸಂಸ್ಥೆಗಳಿವೆ. ವಿರಾಸತ್‌ಗೆ ಒಂದು ತಿಂಗಳು ಇರುವಾಗ ಎಲ್ಲ ಶಿಕ್ಷಣ ಸಂಸ್ಥೆಗಳಿಂದ ಕಾರ್ಯಕ್ರಮ ನಿರೂಪಣೆಗೆ ಆಸಕ್ತಿಯುಳ್ಳ ವಿದ್ಯಾರ್ಥಿಗಳನ್ನು ಆಹ್ವಾನಿಸುತ್ತಾರೆ. ಪ್ರಾಥಮಿಕದಿಂದ ಎಂಜಿನಿಯರಿಂಗ್‌, ಮೆಡಿಕಲ್‌ ವರೆಗಿನ ವಿದ್ಯಾರ್ಥಿಗಳಿಗೆ ಅವಕಾಶ ಇರುತ್ತದೆ. ಹೆಸರು ಕೊಟ್ಟ ವಿದ್ಯಾರ್ಥಿಗಳ ಹೆಸರನ್ನು ಎಕ್ಸ್‌ಪರ್ಟ್‌ ಕಮಿಟಿ ಪರಿಶೀಲಿಸುತ್ತದೆ. ಅಂತಿಮವಾಗಿ ಕನ್ನಡ, ಹಿಂದಿ ಮತ್ತು ಇಂಗ್ಲಿಷ್‌ ಬಲ್ಲ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತಾರೆ. ಈ ಬಾರಿ ಸುಮಾರು 10ಕ್ಕೂ ಅಧಿಕ ಮಂದಿಯನ್ನು ತರಬೇತುಗೊಳಿಸಲಾಗಿದೆ. ಬಳಿಕ ಅವರಿಗೆ ಪ್ರತಿದಿನ ಸಂಜೆ 4 ರಿಂದ 6 ಗಂಟೆ ವರೆಗೆ 3 ಗಂಟೆಗಳ ಕಾಲ ತರಬೇತಿ ನೀಡುತ್ತಾರೆ.

ದೇಶ, ವಿದೇಶದ ಗಣ್ಯರು ಪಾಲ್ಗೊಳ್ಳುವುದರಿಂದ ಭಾಷಾ ತೊಡಕು, ಕಲೆಯ ಆಸ್ವಾದನೆಗೆ ತೊಡಕು ಉಂಟಾಗಬಾರದು ಎಂಬ ಕಾರಣಕ್ಕೆ ಸಂಸ್ಥೆಯ ಮುಖ್ಯಸ್ಥ ಡಾ. ಮೋಹನ ಆಳ್ವರ ಪರಿಕಲ್ಪನೆ, ಸಂಸ್ಥೆಯ ಟ್ರಸ್ಟಿ ವಿವೇಕ್‌ ಆಳ್ವರ ಕಾಳಜಿಯಲ್ಲಿ ಮೂರು ಭಾಷೆಗಳಲ್ಲಿ ಕಾರ್ಯಕ್ರಮ ನಿರೂಪಣೆಗೆ ಅವಕಾಶ ನೀಡಲಾಗಿದೆ. ಆಕರ್ಷಕ ದಿರಿಸಿನಲ್ಲಿ ವಿದ್ಯಾರ್ಥಿಗಳು ಅರಳುಹುರಿದಂತೆ ಕಾರ್ಯಕ್ರಮ ನಿರೂಪಿಸುವುದು ಪ್ರೇಕ್ಷಕರನ್ನು ಹುಬ್ಬೇರುವಂತೆ ಮಾಡುತ್ತದೆ ಎನ್ನುವುದು ಅತಿಶಯೋಕ್ತಿಯಲ್ಲ.

ವಿರಾಸತ್‌ನಲ್ಲಿ ನಿರೂಪಣೆ ಮಾಡಿ ರಾಷ್ಟ್ರ ಮಟ್ಟದಲ್ಲಿ ಮಿಂಚಿದವರು!

ಆಳ್ವಾಸ್‌ ವಿರಾಸತ್‌ನಲ್ಲಿ ಕಾರ್ಯಕ್ರಮ ನಿರೂಪಣೆ ಮಾಡುವುದು ವಿದ್ಯಾರ್ಥಿಗಳ ಪಾಲಿಗೆ ಅತ್ಯಂತ ಪ್ರತಿಷ್ಠೆಯ ಸಂಗತಿ. ಇಲ್ಲಿ ಕಾರ್ಯಕ್ರಮ ನಿರೂಪಿಸಿದವರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. ಡಾಕ್ಯುಮೆಂಟರಿ, ಸಾಕ್ಷಾಚಿತ್ರಗಳಿಗೂ ದನಿಗೂಡಿಸಿದ್ದಾರೆ. ರಾಜ್ಯ, ರಾಷ್ಟ್ರೀಯ ಚಾನೆಲ್‌ಗಳಲ್ಲೂ ನಿರೂಪಕರಾಗಿ, ವಾರ್ತಾ ವಾಚಕರಾಗಿ ತಮ್ಮದೇ ಛಾಪು ಬೀರಿದ್ದಾರೆ.

ಮೂಡುಬಿದಿರೆಯ ಆರಾಧನಾ ಭಟ್‌ ಅವರು ಪ್ರಾಥಮಿಕ ತರಗತಿಯಲ್ಲಿ ಇರುವಾಗಲೇ ವಿರಾಸತ್‌ನಲ್ಲಿ ಕಾರ್ಯಕ್ರಮ ನಿರೂಪಿಸುತ್ತಿದ್ದರು. ಈಗ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿದ್ದಾರೆ. ಶಮೀರ ಬೆಳುವಾಯಿ, ನಿತೇಶ್‌ ಮಾರ್ನಾಡು ಅವರು ಕೂಡ ವಿರಾಸತ್‌ನಲ್ಲಿ ಕಾರ್ಯಕ್ರಮ ನಿರೂಪಿಸಿ ಗುರುತಿಸಿಕೊಂಡ ಕಾರ್ಯಕ್ರಮ ನಿರೂಪಕಿ, ವಾರ್ತಾ ವಾಚಕಿ ಎಂಬುದು ಗಮನಾರ್ಹ.ಇಷ್ಟು ದೊಡ್ಡ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುವುದು ದೊಡ್ಡ ಸವಾಲಿನ ಸಂಗತಿ. ನಮಗೆ ಉಪನ್ಯಾಸಕರು ಸಾಕಷ್ಟು ತರಬೇತಿ ನೀಡಿದ್ದಾರೆ. ಮೊದಲ ಬಾರಿಗೆ ದೊಡ್ಡ ವೇದಿಕೆಯಲ್ಲಿ ಕಾರ್ಯಕ್ರಮ ನಿರೂಪಿಸುವಾಗ ಅಂಜಿಕೆಯಾಗಿಲ್ಲ. ಜಾಲತಾಣಗಳಲ್ಲಿ ಲೈವ್‌ ಆಗುತ್ತಿರುವಾಗ ಸಾಕಷ್ಟು ಜಾಗರೂಕತೆಯಿಂದ ನಿರೂಪಿಸಬೇಕಾಗುತ್ತದೆ. ಅಂತಹ ಧೈರ್ಯವನ್ನು ಆಳ್ವಾಸ್‌ ಶಿಕ್ಷಣ ಸಂಸ್ಥೆ ನೀಡಿದೆ.

-ಶ್ರಾವ್ಯ, ಕಾರ್ಯಕ್ರಮ ನಿರೂಪಕಿ, ಪದವಿ ವಿದ್ಯಾರ್ಥಿನಿ, ಆಳ್ವಾಸ್‌ ಮೂಡುಬಿದಿರೆ