ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನದ ಅರಿವು ಅವಶ್ಯ

| Published : May 15 2024, 01:40 AM IST

ಸಾರಾಂಶ

ಕನ್ನಡ ನಾಡು-ನುಡಿ, ಭಾಷೆ, ಸಂಸ್ಕೃತಿ,ಸಾಹಿತ್ಯ, ಇತಿಹಾಸದ ಅರಿವು ಅವಶ್ಯಕವಾಗಿ ಇರಬೇಕು

ಮುಂಡರಗಿ: ವಿದ್ಯಾರ್ಥಿಗಳು ಪಠ್ಯಪುಸ್ತಕದಿಂದ ಹೊರ‌ಬಂದು ಬೌದ್ಧಿಕವಾಗಿ ಬೆಳೆಯಬೇಕು. ಅಂದಾಗ ಅವರು ಸಾಮಾನ್ಯ ಜ್ಞಾನದಿಂದ ಇನ್ನಷ್ಠು ಕ್ರಿಯಾಶೀಲರಾಗುತ್ತಾರೆ ಎಂದು ಕ.ರಾ.ಬೆಲ್ಲದ ಮಹಾ ವಿದ್ಯಾಲಯದ ಕಾಲೇಜು ಮೇಲ್ವಿಚಾರಣಾ ಸಮೀತಿ ಅಧ್ಯಕ್ಷ ಪ್ರೊ. ಆರ್.ಎಲ್.ಪೊಲೀಸ್ ಪಾಟೀಲ ಹೇಳಿದರು.

ಅವರು ಈಚಗೆ ಜೆ.ಅ.ವಿದ್ಯಾ ಸಮಿತಿಯ ಶತಮಾನೋತ್ಸವ ಸಂಭ್ರಮ ಕ.ರಾ.ಬೆಲ್ಲದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ,ಕಸಾಪ ವಿದ್ಯಾರ್ಥಿ ಘಟಕ, ಕರ್ನಾಟಕ ಸಂಘ, ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮುಂಡರಗಿ ಸಂಯುಕ್ತ ಆಶ್ರಯದಲ್ಲಿ ಜರುಗಿದ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡ ನಾಡು-ನುಡಿ, ಭಾಷೆ, ಸಂಸ್ಕೃತಿ,ಸಾಹಿತ್ಯ, ಇತಿಹಾಸದ ಅರಿವು ಅವಶ್ಯಕವಾಗಿ ಇರಬೇಕು. ಕನ್ನಡ ಸಾಹಿತ್ಯ ಪರಿಷತ್ತು ಇಂದಿಗೆ 109 ವರ್ಷವಾಯಿತು.ಬೆಂಗಳೂರಿನಿಂದ ತಾಲೂಕು ಮಟ್ಟದವರೆಗೆ ಸರ್ವರಿಗೂ ಉಪಯುಕ್ತವಾಗಿರುವ ಕಾರ್ಯಕ್ರಮಗಳ ಮೂಲಕ ಮನೆ ಮನೆಗೆ ತಲುಪುವ ಕಾರ್ಯ ಮಾಡಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೆಲವರು ಇದು ಜಾತ್ರೆ, ಮೋಜು ಅಂತಾರೆ,ಅದು ತಪ್ಪು. ಸಮ್ಮೇಳನ ಇರುವುದು ಈ ನಾಡನ್ನು ಕಟ್ಟಲು.ಅನೇಕ ವಿದ್ವಾಂಸರು, ಸಾಹಿತಿಗಳು ಸೇರಿ ಚಿಂತನ-ಮಂಥನ ಮಾಡುವ ವೇದಿಕೆಯಾಗಿದೆ. ಇದು ಬರಿ ಕರ್ನಾಟಕ ಅಷ್ಠೆ ಅಲ್ಲ ದೇಶ ವಿದೇಶಗಳಲ್ಲಿ ಕನ್ನಡದ ಕಂಪನ್ನು ಪಸರಿಸಿದೆ ಎಂದರು.

ಹೊಳೆ ಆಲೂರಿನ ನಿವೃತ್ತ ಪ್ರಾಧ್ಯಾಪಕ ಎನ್.ಎಸ್. ಹುಣಸಿಕಟ್ಟಿ ಮಾತನಾಡಿ, ವಿದ್ಯಾರ್ಥಿ ಜೀವನ ಬಹಳ ಸುಂದರವಾದದ್ದು. ಈ ಜೀವನ ಸರಿ ದಾರಿಗೆ ತೆಗೆದುಕೊಂಡು ಹೋಗುವ ಮೂಲಕ ಏನಾದರೂ ಸಾಧಿಸಬೇಕು. ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಸರ್ವರಿಗೂ ಮಾದರಿಯಾಗಿವೆ. ಈ ನಾಡು-ನುಡಿ, ಸಂಸ್ಕೃತಿಗಾಗಿ ಸದಾ ತನ್ನ ಕಾರ್ಯಕ್ರಮಗಳ ಮೂಲಕ ಹೆಸರಾಗಿದೆ. ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿ ಶಾಸನಗಳು, ಕೃತಿಗಳು, ಕಾವ್ಯಗಳ ಕುರಿತು ವಿವರಿಸಿದರು.

ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ.ಗಚ್ವಣ್ಣವರ ಮಾತನಾಡಿ,ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ.ವಿಶ್ವೆಶ್ವರಯ್ಯ, ಸರ್ ಮುರ್ಜಾಇಸ್ಮಾಯಿಲ್ ಅವರನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ಇವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೋಡುಗೆ ಅಪಾರವಾದದ್ದು. ಕರ್ನಾಟಕ ಏಕಿಕರಣಕ್ಕಾಗಿ ಹೋರಾಡುವ ಉದ್ದೇಶದಿಂದಲೇ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿದ್ದು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಗದಗ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಚಟುವಟಿಕೆ ಮಾಡುತ್ತಿದೆ ಎಂದರು.ಪ್ರಾ. ಡಾ.ಡಿ.ಸಿ. ಮಠ, ಸಂತೋಷ ಹಿರೇಮಠ, ಅಶೋಕ ಅಂಗಡಿ, ಕಸಾಪ ವಿದ್ಯಾರ್ಥಿ ಘಟಕದ ಅಧ್ಯಕ್ಷೆ ದಾನೇಶ್ವರಿ ಶೆಟ್ಟರ್, ಸುರೇಶ ಭಾವಿಹಳ್ಳಿ, ಕೃಷ್ಣಮೂರ್ತಿ ಸಾಹುಕಾರ, ಕಾಶಿನಾಥ ಶಿರಬಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.