ಸಾರಾಂಶ
ವಿದ್ಯಾರ್ಥಿಗಳು ಕೂಡ ವಿಚಾರ ವಿನಿಮಯ ಮಾಡುವುದರಿಂದ ಸಮಸ್ಯೆಗಳು ನಿಮ್ಮಲ್ಲಿ ಉದ್ಭವಿಸುವುದಿಲ್ಲ
ಗದಗ: ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ಅವಶ್ಯ ಎಂದು ಡಾ.ಸುಜಾತಾ.ಎಸ್. ಬರದೂರ ಹೇಳಿದರು.
ಅವರು ನಗರದ ಆರ್ಯಭಟ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಜಿಲ್ಲಾ ಮತ್ತು ತಾಲೂಕು ಕದಳಿ ಮಹಿಳಾ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿಗಳ ಬದುಕಿಗೆ ವಚನಗಳು ದಾರಿದೀಪ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.ಕೇವಲ ಶಿಕ್ಷಣ ಪದವಿಯಿಂದ ಮಾತ್ರ ಸುಂದರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಸಂಸ್ಕಾರಯುತ ಶಿಕ್ಷಣದಿಂದ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಶಿಕ್ಷಣ ಪದವಿ ಭವಿಷ್ಯದ ಬದುಕಿನಲ್ಲಿ ಆಸರೆ ಮಾತ್ರ. ಆದರೆ ಸಂತೃಪ್ತ ಜೀವನ ನಡೆಸಲು ವಚನಗಳು ದಾರಿ ದೀಪವಾಗಿವೆ. ೧೨ನೇ ಶತಮಾನದಲ್ಲಿ ಶರಣರು ಅನುಭವ ಮಂಟಪ ನಿರ್ಮಿಸಿ, ಅದರಲ್ಲಿ ಎಲ್ಲರೂ ಸೇರಿ ವಿಚಾರಗಳ ವಿನಿಮಯ ಮಾಡಿಕೊಳ್ಳುತ್ತಿದ್ದರು. ಹಾಗೆಯೇ ವಿದ್ಯಾರ್ಥಿಗಳು ಕೂಡ ವಿಚಾರ ವಿನಿಮಯ ಮಾಡುವುದರಿಂದ ಸಮಸ್ಯೆಗಳು ನಿಮ್ಮಲ್ಲಿ ಉದ್ಭವಿಸುವುದಿಲ್ಲ ಎಂದರು.
ಪ್ರಾ. ಪ್ರಶಾಂತ ದೊಡ್ಡಮನಿ ಮಾತನಾಡಿ, ವಿದ್ಯಾರ್ಥಿಗಳ ಜೀವನಕ್ಕೆ ಮೌಲ್ಯ ಕಟ್ಟಿಕೊಡುವಂತ ಶಕ್ತಿ ವಚನ ಸಾಹಿತ್ಯದಲ್ಲಿದೆ. ವಿದ್ಯಾರ್ಥಿಗಳು ಸಂಸ್ಕಾರಯುತ ಜೀವನ ನಡೆಸಬೇಕಾದರೆ ಬಸವಾದಿ ಶರಣರ ವಚನಗಳು ನಿಮ್ಮ ಬದುಕಿಗೆ ದಾರಿ ದೀಪವಾಗುತ್ತವೆ. ಕದಳಿ ಮಹಿಳಾ ವೇದಿಕೆಯಿಂದ ಶಾಲಾ-ಕಾಲೇಜುಗಳಲ್ಲಿ ಶ್ರಾವಣ ಮಾಸದಲ್ಲಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸುತ್ತಿರುವದು ಶ್ಲಾಘನೀಯ ಕಾರ್ಯವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ವಚನಗಳ ಮಹತ್ವ ಅರಿವಾಗುವುದು ಎಂದು ತಿಳಿಸಿದರು.ಈ ವೇಳೆ ತಾಲೂಕು ಕದಳಿ ಮಹಿಳಾ ವೇದಿಕೆ ಗೌರವಾಧ್ಯಕ್ಷೆ ರತ್ನಕ್ಕ ಪಾಟೀಲ ಹಾಗೂ ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ಅಧ್ಯಕ್ಷೆ ಸುಲೋಚನಾ.ಎಂ. ಐಹೊಳ್ಳಿ ಮಾತನಾಡಿದರು.
ಲಕ್ಷ್ಮೀ ದೊಡ್ಡಮನಿ ಹಾಗೂ ಸಿಬ್ಬಂದಿ ವರ್ಗದವರು ಇದ್ದರು. ಶಿಕ್ಷಕಿ ರೇಣುಕಾ ಕುರುಗೋಡ ನಿರೂಪಿಸಿ ವಂದಿಸಿದರು.