ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ಅಗತ್ಯ

| Published : Apr 19 2025, 12:46 AM IST

ಸಾರಾಂಶ

ದ್ಯಾರ್ಥಿಗಳು ದೇಶದ ಸಂಪತ್ತು. ವಿದ್ಯಾರ್ಥಿಗಳು ಸರಿಯಾದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ದೊರಕಿದಾಗ ಅವರು ಉನ್ನತವಾದ ಸಾಧನೆ ಮಾಡಲು ಸಾಧ್ಯವಾಗುವುದು

ಹೊನ್ನಾವರ: ವಿದ್ಯಾರ್ಥಿಗಳು ದೇಶದ ಸಂಪತ್ತು. ವಿದ್ಯಾರ್ಥಿಗಳು ಸರಿಯಾದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ದೊರಕಿದಾಗ ಅವರು ಉನ್ನತವಾದ ಸಾಧನೆ ಮಾಡಲು ಸಾಧ್ಯವಾಗುವುದು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ಡಾ. ಜಿ.ಜಿ.ಸಭಾಹಿತ ಹೇಳಿದರು.

ತಾಲೂಕಿನ ಮೂರುಕಟ್ಟೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಾವಿತ್ರಿಬಾಯಿ ಪುಲೆ ಪ್ರಶಸ್ತಿಗೆ ಭಾಜನರಾದ ಶಿಕ್ಷಕಿ ಶಾರದಾ ಹೆಗಡೆ, ಸ್ಕೌಟ್ಸ್ ಬುಲ್‌ಬುಲ್ ವಿಭಾಗದಲ್ಲಿ ರಾಜ್ಯಪಾಲರಿಂದ ಬಹುಮಾನ ಪಡೆದ ವಿದ್ಯಾರ್ಥಿಗಳಾದ ಆರಾಧ್ಯ ಮೇಸ್ತ, ಸನ್ನಿಧಿ ಶೇಟ್ ಮತ್ತು ನಾಗಶ್ರೀ ಮೇಸ್ತ ಅವರನ್ನು ಸನ್ಮಾನಿಸಲಾಯಿತು.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಆರ್.ಟಿ.ಹೆಬ್ಬಾರ ಮಾತನಾಡಿ, ಸ್ಕೌಟ್ಸ್ ಬುಲ್ ಬುಲ್ ವಿಭಾಗದಲ್ಲಿ ಮೂರುಕಟ್ಟೆ ಶಾಲೆಯ ಮೂರು ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿರುವುದು ತಾಲೂಕಿಗೆ ಮತ್ತು ಜಿಲ್ಲೆಗೆ ಹೆಮ್ಮೆಯ ವಿಷಯ. ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಈ ಶಾಲೆಯ ಎಸ್‌ಡಿಎಂಸಿಯವರು ಅತ್ಯಂತ ಆತ್ಮೀಯವಾಗಿ ಅಭಿನಂದಿಸಿ ಪ್ರೋತ್ಸಾಹಿಸಿ ಮುಂದಿನ ಸಾಧನೆಗೆ ಪ್ರೇರಣೆಯಾಗಿದ್ದಾರೆ ಎಂದರು.ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ ಮಾತನಾಡಿ, ಶಿಕ್ಷಕಿ ಶಾರದಾ ಹೆಗಡೆ ಅವರು ಸಾವಿತ್ರಿಬಾಯಿ ಪುಲೆ ಪ್ರಶಸ್ತಿಗೆ ಭಾಜನರಾಗಿರುವುದು ನಮಗೆಲ್ಲರಿಗೂ ಹೆಮ್ಮೆ ತಂದಿದೆ. ಅವರ ಮಾರ್ಗದರ್ಶನದಲ್ಲಿ ಬುಲ್‌ಬುಲ್ ವಿಭಾಗದಲ್ಲಿ ವಿದ್ಯಾರ್ಥಿಗಳು ಸಿದ್ದಗೊಂಡು ತಾಲೂಕಿಗೆ ಕೀರ್ತಿ ತಂದಿದ್ದಾರೆ. ಮೂರುಕಟ್ಟೆ ಶಾಲೆಯಲ್ಲಿ ಶಿಕ್ಷಕರಾದ ಶಾರದಾ ಹೆಗಡೆ ಮತ್ತು ನಿರ್ಮಲಾ ನಾಯ್ಕ ಅವರು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ವಿದ್ಯಾರ್ಥಿಗಳು ಪ್ರತಿಭಾವಂತರಾಗಿ ಹೊರಹೊಮ್ಮುತ್ತಿದ್ದಾರೆ ಎಂದರು.ಎಸ್‌ಡಿಎಂಸಿ ಅಧ್ಯಕ್ಷ ಮಾರುತಿ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಗೈಡ್ ಆಯುಕ್ತರಾದ ಶೋಭಾ ಕುಲಕರ್ಣಿ, ಡಿಸ್ಟಿಂಕ್ಟ್ ಲೀಡರ್ ಟ್ರೇನರ್ ಬಿ.ಡಿ.ಫರ್ನಾಂಡಿಸ್, ಎಸ್‌ಡಿಎಂಸಿ ಸದಸ್ಯರು ಸಾಧಕರಿಗೆ ಶುಭ ಹಾರೈಸಿದರು. ಮುಖ್ಯಾಧ್ಯಾಪಕಿ ಶಾರದಾ ಹೆಗಡೆ ಸ್ವಾಗತಿಸಿದರು. ಶಿಕ್ಷಕಿ ನಿರ್ಮಲಾ ನಾಯ್ಕ ಧನ್ಯವಾದ ಸಮರ್ಪಿಸಿದರು.