ಸಾರಾಂಶ
ನಗರದ ಮಲೆನಾಡು ವಿದ್ಯಾಸಂಸ್ಥೆಯಲ್ಲಿ ಶ್ರದ್ಧಾ ಭಕ್ತಿಯಿಂದ ತ್ಯಾಗರಾಜರ ಆರಾಧನಾ ಮಹೋತ್ಸವಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಸಂತರು ಮತ್ತು ಮಹಾತ್ಮರ ಬದುಕಿನ ಬಗ್ಗೆ ನಮ್ಮ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಕಳೆದ ೪೩ ವರ್ಷಗಳಿಂದ ನಿರಂತರವಾಗಿ ಶ್ರೀ ತ್ಯಾಗರಾಜರು ಮತ್ತು ಪುರಂದರ ದಾಸರ ಆರಾಧನೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಮಲೆನಾಡು ವಿದ್ಯಾ ಸಂಸ್ಥೆಯ ಅಧ್ಯಕ್ಷ ಎನ್. ಕೇಶವಮೂರ್ತಿ ತಿಳಿಸಿದರು.ನಗರದ ಮಲೆನಾಡು ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಕರ್ನಾಟಕ ಸಂಗೀತದ ಪಿತಾಮಹ ಸಂತ ಶ್ರೀ ತ್ಯಾಗರಾಜರು ಮತ್ತು ದಾಸ ಶ್ರೇಷ್ಠ ಶ್ರೀ ಪುರಂದರ ದಾಸರ ಶ್ರದ್ಧಾ ಭಕ್ತಿಯ ಆರಾಧನಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ಪೀಳಿಗೆಗೆ ದಾಸ ಶ್ರೇಷ್ಠರ ವಿಚಾರ ತಿಳಿಸುವ ಅಗತ್ಯವಿದೆ ಎಂದರು.ಖ್ಯಾತ ಯಕ್ಷಗಾನ ಕಲಾವಿದ, ವಿದ್ವಾಂಸ ವಾಸುದೇವ ರಂಗಾಭಟ್ ಮಾತನಾಡಿ ಸಂತ ಶ್ರೀ ತ್ಯಾಗರಾಜರು ಅತ್ಯಂತ ಶ್ರೇಷ್ಠ ವಾಗ್ಗೇಯಕಾರರು. ಭಕ್ತಿಯ ಪ್ರತಿಪಾದಕರು ಅಖಂಡವಾದ ರಾಮ ಭಕ್ತಿ ಮತ್ತು ಆಚಲ ನಿಷ್ಠೆಗೆ ಹೆಸರಾದವರು ಎಂದರು.ತ್ಯಾಗರಾಜರು ಮತ್ತು ಪುರಂದರ ದಾಸರ ಕೃತಿಗಳು ಸರ್ವಮಾನ್ಯವಾಗಿವೆ. ಅವರಿಬ್ಬರೂ ಸಂಗೀತ ಕ್ಷೇತ್ರದ ಅಸಾಮಾನ್ಯ ಸಾಧಕರು. ದಾಸ ಪಂಥ ಬೆಳೆಯುವುದಕ್ಕೆ ಮಹತ್ತರವಾದ ಕೊಡುಗೆ ನೀಡಿದವರು ಪುರಂದರದಾಸರು ಎಂದು ಹೇಳಿದರು. ಶ್ರೀ ತ್ಯಾಗರಾಜರು- ಪುರಂದರ ದಾಸರ ಬದುಕು ಮತ್ತು ಅವರ ಕೃತಿಗಳ ಕುರಿತು ವಿವರಿಸಿದ ರಂಗಾಭಟ್ ಈ ಇಬ್ಬರೂ ಮಹಾತ್ಮರು ಭೌತಿಕವಾಗಿ ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಕೃತಿಗಳ ಮೂಲಕ ಜೀವಂತವಾಗಿದ್ದಾರೆ ಎಂದು ಪ್ರತಿಪಾದಿಸಿದರು.ಮಲೆನಾಡು ವಿದ್ಯಾಸಂಸ್ಥೆಯಲ್ಲಿ ನಡೆಯುತ್ತಿರುವ ಶ್ರೀ ತ್ಯಾಗರಾಜರು ಮತ್ತು ಪುರಂದರ ದಾಸರ ಆರಾಧನೆ ಕಾರ್ಯಕ್ರಮ ಉಳಿದ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.ಸಂಸ್ಥೆ ಉಪಾಧ್ಯಕ್ಷೆ ರಾಧಾ ಸುಂದರೇಶ್ ಮಾತನಾಡಿ, ಶ್ರೀ ತ್ಯಾಗರಾಜರು, ಪುರಂದರದಾಸರು ಮತ್ತು ಕನಕದಾಸರು ಸಮಾಜವನ್ನು ತಿದ್ದಿದವರು. ಸಮಾಜವನ್ನು ಉತ್ತಮ ಮಾರ್ಗದಡೆಗೆ ಕೊಂಡೊಯ್ಯಲು ಶ್ರಮಿಸಿದವರು. ಅಂತಹ ಮಹಾತ್ಮರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಬಾರದು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಆರಾಧನಾ ಮಹೋತ್ಸವ ಸಮಿತಿ ಅಧ್ಯಕ್ಷ ಎಸ್. ಶಂಕರನಾರಾಯಣ ಭಟ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.ಖ್ಯಾತ ಯಕ್ಷಗಾನ ಕಲಾವಿದ, ವಿದ್ವಾಂಸ. ವಾಸುದೇವ ರಂಗಾಭಟ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ. ಗೌರವಿಸಲಾಯಿತು. ಸ್ಥಳೀಯ ಸಂಗೀತಗಾರರಿಂದ ಶ್ರೀ ತ್ಯಾಗರಾಜ ಸ್ವಾಮಿಗಳ ಪಂಚರತ್ನ ಕೃತಿಗಳ ಗಾಯನ ಜರುಗಿತು.
ಆರಾಧನೆ ಅಂಗವಾಗಿ ಶ್ರೀ ತ್ಯಾಗರಾಜರು ಮತ್ತು ಪುರಂದರ ದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಈ ವೇಳೆ ಮಲೆನಾಡು ವಿದ್ಯಾಸಂಸ್ಥೆ ಆಡಳಿತ ಮಂಡಳಿ ಪದಾಧಿಕಾರಿಗಳು. ಬೋಧಕ, ಬೋಧಕೇತರ ಸಿಬ್ಬಂದಿ, ಗಣ್ಯರು ಮತ್ತು ಅತಿಥಿಗಳು ಸಾಮೂಹಿಕವಾಗಿ ಪುಷ್ಪ ನಮನ ಸಲ್ಲಿಸಿದರು. ಮಲೆನಾಡು ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಡಿ. ಎಲ್. ವಿಜಯ ಕುಮಾರ್. ನಿರ್ದೇಶಕಿ ಜಯಶ್ರೀ ಜೋಶಿ. ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಕೆ.ಎನ್. ಮಂಜುನಾಥ ಭಟ್. ಕಚೇರಿ ಕಾರ್ಯದರ್ಶಿ ಶ್ರೀ ಲಕ್ಷ್ಮಿ ಉಪಸ್ಥಿತರಿದ್ದರು.