ಸಾರಾಂಶ
ಬಳ್ಳಾರಿ: ವಿದ್ಯಾರ್ಥಿಗಳು ಕೇವಲ ಪಠ್ಯ ವಿಷಯಕ್ಕೆ ಸೀಮಿತವಾಗದೇ ಉದ್ಯೋಗಾಧಾರಿತ ಕೌಶಲ್ಯಗಳನ್ನು ಕಲಿಯುವ ಅಗತ್ಯವಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಬಿ.ಮಹಾರುದ್ರಗೌಡ ಸಲಹೆ ನೀಡಿದರು.ತಾಲೂಕಿನ ಮೋಕಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಕಾಲೇಜು ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿಯ ತಿಳಿವಳಿಕೆಯ ಒಡಂಬಡಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪ್ರಸ್ತುತ ತಾಂತ್ರಿಕ ಯುಗದಲ್ಲಿ ಉದ್ಯೋಗಾಧಾರಿತ ಶಿಕ್ಷಣ ಅಗತ್ಯವಿದೆ. ಆದರೆ, ವಿದ್ಯಾರ್ಥಿಗಳು ಕೌಶಲ್ಯ ತರಬೇತಿಯ ಕೊರತೆ ಎದುರಿಸುತ್ತಿದ್ದಾರೆ. ಶೈಕ್ಷಣಿಕ ಪ್ರಗತಿ ಎಂದರೆ ಬರೀ ಪದವಿಗಳನ್ನು ಪೂರ್ಣಗೊಳಿಸುವುದಷ್ಟೇ ಅಲ್ಲ; ಜೊತೆಗೆ ಕೌಶಲ್ಯಗಳನ್ನು ಕಲಿಯಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅವರಿಗೆ ಸೂಕ್ತ ತರಬೇತಿ ನೀಡಲು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಸಿದ್ಧವಿದೆ ಎಂದು ಹೇಳಿದರು.ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಯಶವಂತ ರಾಜ್ ನಾಗಿರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಪ್ರತಿಯೊಂದು ಹಂತದಲ್ಲೂ ಸ್ಪರ್ಧೆಗಳನ್ನು ಎದುರಿಸಬೇಕಾಗಿದೆ. ನಿರ್ದಿಷ್ಟ ಪಠ್ಯಕ್ಕೆ ಸೀಮಿತಗೊಳ್ಳದೇ ಉದ್ಯೋಗಾಧಾರಿತ ನಾನಾ ಕೌಶಲ್ಯ ಕಲಿಕೆಗಳಲ್ಲಿ ಆಸಕ್ತಿ ವಹಿಸಬೇಕು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯಿಂದ ಟ್ಯಾಲಿ, ಜಿಎಸ್‌ಟಿ, ಡಾಟಾ ಎಂಟ್ರಿ, ಸ್ಪೋಕನ್ ಇಂಗ್ಲೀಷ್, ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಉಚಿತವಾಗಿ ನಡೆಸುತ್ತಿದ್ದು, ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಮಕಂದರ್ ಇಸ್ಮಾಯಿಲ್ ಮಾತನಾಡಿದರು.ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶ್ ಬಾಬು, ಜಂಟಿ ಕಾರ್ಯದರ್ಶಿ ವಿ.ರಾಮಚಂದ್ರ, ನಾಗಳ್ಳಿ ರಮೇಶ್ , ಟಿ.ಶ್ರೀನಿವಾಸ್ ರಾವ್,ಸಿ.ಎಸ್ ಸತ್ಯನಾರಾಯಣ,ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರಾದ ಅಮಲ್, ಕೆ.ಎನ್.ಆದರ್ಶ, ಕೆ.ಜಿ.ನವೀನ್, ಬಸವರಾಜ್, ಲಕ್ಷ್ಮಿ ಕಟ್ಟಾ, ಮಹ್ಮದ್ ಅಸ್ಲಾಂ, ವಿದ್ಯಾರ್ಥಿಗಳು ಇದ್ದರು.