ಸಾರಾಂಶ
ಬಸವನಹಳ್ಳಿ ಸರ್ಕಾರಿ ಬಾಲಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಐಐಪಿ ಡಿಜಿಟಲ್ ಕೊಠಡಿ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಆಧುನಿಕ ತಂತ್ರಜ್ಞಾನವನ್ನು ವಿದ್ಯಾರ್ಥಿಗಳು ಮತ್ತು ಯುವ ಜನತೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಸಲಹೆ ನೀಡಿದರು.
ನಗರದ ಬಸವನಹಳ್ಳಿ ಸರ್ಕಾರಿ ಬಾಲಿಕಾ ಪದವಿ ಪೂರ್ವ ಕಾಲೇಜಿನಲ್ಲಿ ನೂತನವಾಗಿ ನಿರ್ಮಿಸಿರುವ ಐ.ಐ.ಪಿ.ಡಿಜಿಟಲ್ ಕ್ಲಾಸ್ ಕೊಠಡಿ ಉದ್ಘಾಟಿಸಿ ಮಾತನಾಡಿದರು. ಆಧುನಿಕ ತಂತ್ರಜ್ಞಾನದ ಆವಿಷ್ಕಾರ ಗಳಿಂದ ನಮ್ಮ ಬದುಕು ಮೇಲ್ದರ್ಜೆಗೆರಲು ಸಾಧ್ಯವಾಗುತ್ತದೆ. ಅದನ್ನು ಒಳ್ಳೆಯದಕ್ಕೆ ಬಳಸಿಕೊಂಡರೆ ನಮ್ಮ ಜೀವನ ಸುಧಾರಿಸುತ್ತದೆ. ದುರ್ಬಳಕೆ ಮಾಡಿಕೊಂಡರೆ ನಮ್ಮ ಸರ್ವನಾಶವನ್ನು ನಾವೇ ಮಾಡಿಕೊಂಡಂ ತಾಗುತ್ತದೆ ಎಂದು ಕಿವಿ ಮಾತು ಹೇಳಿದರು.ಬಡತನವೆಂಬ ಶತ್ರುವನ್ನು ನಿಗ್ರಹಿಸಲು ಶಿಕ್ಷಣ ಅತ್ಯಂತ ಪ್ರಬಲವಾದ ಅಸ್ತ್ರ. ನಾವು ಶಿಕ್ಷಣವಂತರಾದರೆ ಮಾತ್ರ ಸಮಾಜ ನಮ್ಮನ್ನು ಗುರುತಿಸಿ ಗೌರವಿಸುತ್ತದೆ. ಸೂಕ್ತ ಸ್ಥಾನಮಾನ ನೀಡುತ್ತದೆ ಹಾಗಾಗಿ ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಬೇಕು ಎಂದರು.ವಿದ್ಯಾರ್ಥಿ ದಿಸೆಯಲ್ಲಿ ಬಹಳಷ್ಟು ಆಕರ್ಷಣೆಗಳಿರುತ್ತವೆ. ಅವುಗಳ ಹಿಂದೆ ಹೋದರೆ ವಿದ್ಯಾಭ್ಯಾಸ ಮೊಟಕು ಗೊಂಡು ನಮ್ಮ ಬದುಕಿನ ಹಾದಿ ತಪ್ಪುತ್ತದೆ. ವಿದ್ಯಾರ್ಥಿಗಳು ಇದನ್ನು ಅರಿತು ಓದಿಗಷ್ಟೇ ಪ್ರಾಮುಖ್ಯತೆ ನೀಡಬೇಕು ಎಂದು ಸಲಹೆ ಮಾಡಿದರು. ಕಾಲೇಜಿನ ಪ್ರಾಚಾರ್ಯ ಕೆ.ಜಿ. ಸತೀಶ್ ಶಾಸ್ತ್ರಿ, ದಾನಿಗಳ ಸಹಕಾರದಿಂದ ನಿರ್ಮಿಸಿರುವ ಈ ಹವಾ ನಿಯಂತ್ರಿತ ಡಿಜಿಟಲ್ ಕ್ಲಾಸ್ ಕೊಠಡಿ ರಾಜ್ಯದ ಸರ್ಕಾರಿ ಕಾಲೇಜುಗಳಲ್ಲೇ ಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದರು.ವೃತ್ತಿಪರ ಕೋರ್ಸ್ ಗಳಿಗೆ ಹೋಗಬಯಸುವ ವಿದ್ಯಾರ್ಥಿಗಳಿಗೆ ಇದರಿಂದ ಬಹಳಷ್ಟು ಅನುಕೂಲವಾಗಲಿದೆ ಎಂದ ಅವರು, ಡಿಜಿಟಲ್ ಕ್ಲಾಸ್ ಕೊಠಡಿ ನಿರ್ಮಾಣಕ್ಕೆ ದೇಣಿಗೆ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದರು.ಇದೇ ವೇಳೆ ಶಾಸಕ ಎಚ್.ಡಿ. ತಮ್ಮಯ್ಯ ಕಾಲೇಜಿನ ಪ್ರಸಕ್ತ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಚಾಲನೆ ನೀಡಿದರು.ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪುಟ್ಟಾನಾಯ್ಕ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಎಜಿಎಂ ಅನಿಲ್ ಕುಮಾರ್, ವ್ಯವಸ್ಥಾಪಕ ಭೀಷಂ ನವಲಾನಿ, ದಾನಿಗಳಾದ ಹಾಲಪ್ಪ ರುಕ್ಮಿಣಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಸುಭಾನ್, ಉಪನ್ಯಾಸಕ ನಾಗರಾಜ್ ಉಪಸ್ಥಿತರಿದ್ದರು.
20 ಕೆಸಿಕೆಎಂ 2ಚಿಕ್ಕಮಗಳೂರಿನ ಬಸವನಹಳ್ಳಿಯ ಸರ್ಕಾರಿ ಬಾಲಿಕಾ ಪದವಿ ಪೂರ್ವ ಕಾಲೇಜಿನಲ್ಲಿ ನೂತನವಾಗಿ ನಿರ್ಮಿಸಿರುವ ಡಿಜಿಟಲ್ ಕ್ಲಾಸ್ ಕೊಠಡಿಯನ್ನು ಶಾಸಕ ಎಚ್.ಡಿ. ತಮ್ಮಯ್ಯ ಉದ್ಘಾಟಿಸಿದರು. ಪ್ರಾರ್ಚಾಯ ಕೆ.ಜಿ. ಸತೀಶ್ ಶಾಸ್ತ್ರಿ, ಪಿಯು ಡಿಡಿ ಪುಟ್ಟಾನಾಯ್ಕ, ಕೆನರಾ ಬ್ಯಾಂಕ್ ಎಜಿಎಂ ಅನಿಲ್ ಕುಮಾರ್ ಇದ್ದರು.