ಮತ ಎಣಿಕೆಗೆ ವಿಜ್ಞಾನ ಕಾಲೇಜು ಬಳಕೆಗೆ ವಿದ್ಯಾರ್ಥಿಗಳ ಆಕ್ಷೇಪ

| Published : May 29 2024, 12:50 AM IST

ಸಾರಾಂಶ

ಪ್ರತಿ ಬಾರಿ ಚುನಾವಣೆ ಮತಗಳ ಎಣಿಕೆಗೆ ಬಳಕೆ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಅಡ್ಡ ಪರಿಣಾಮ ಬೀರುವುದರ ಜೊತೆಗೆ ತಿಂಗಳಾನುಗಟ್ಟಲೆ ಪಾಠ ಪ್ರವಚನೆಗಳಿಗೆ ಧಕ್ಕೆತಾಗುತ್ತದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಚಿತ್ರದುರ್ಗದ ಸರ್ಕಾರ ವಿಜ್ಞಾನ ಕಾಲೇಜು ಕಟ್ಟಡವನ್ನು ಪ್ರತಿ ಬಾರಿ ಚುನಾವಣೆ ಮತಗಳ ಎಣಿಕೆಗೆ ಬಳಕೆ ಮಾಡುತ್ತಿರುವುದಕ್ಕೆ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಹಿ ಸಂಗ್ರಹದ ಮನವಿ ಸಲ್ಲಿಸಿ ಕಲಿಕೆಗೆ ಆಗುತ್ತಿರುವ ತೊಂದರೆ ನಿವಾರಿಸುವಂತೆ ವಿನಂತಿಸಿದ್ದಾರೆ.

ಲೋಕಸಭೆ ಚುನಾವಣೆಯ ಮತಯಂತ್ರಗಳನ್ನು ಕಳೆದ 25 ದಿನಗಳಿಂದ ಕಾಲೇಜಿನ ಕಟ್ಟಡದಲ್ಲಿ ಇಡಲಾಗಿದೆ. ಕಟ್ಟಡವನ್ನು ತಿಂಗಳಾನುಗಟ್ಟಲೆ ಬಳಕೆ ಮಾಡುವುದರಿಂದ ಪ್ರಯೋಗಗಳು, ಸೆಮಿನಾರ್‌ಗಳು, ಪಾಠ ಪ್ರವಚನಗಳು ವ್ಯತ್ಯಯವಾಗುತ್ತಿದ್ದು, ಆರೋಗ್ಯದ ಮೇಲೂ ಸಹ ದುಷ್ಪರಿಣಾಮ ಬೀರುತ್ತಿದೆ ಎಂದು ಪೋಷಕರು ಮತ್ತು ವಿದ್ಯಾರ್ಥಿ ಗಳು ಅಳಲು ತೋಡಿಕೊಂಡಿದ್ದಾರೆ.

ಸರಿಯಾದ ನೀರು, ಶೌಚಾಲಯ, ವಿಶ್ರಾಂತಿ ಕೊಠಡಿ ಇಲ್ಲದೆ ಹೆಣ್ಣು ಮಕ್ಕಳಿಗೆ ಅತಿಯಾದ ಮಾನಸಿಕ ಕಿರಿಕಿರಿಯಾಗುತ್ತಿದ್ದು, ಕೊಠಡಿಗಳಿಂದ ಕೊಠಡಿಗಳಿಗೆ, ಕಟ್ಟಡಗಳನ್ನು ಸುತ್ತಿಸುತ್ತಿ ಬಳಲಿದ್ದಾರೆ, ತರಗತಿಗಳು ಬೆಳಿಗ್ಗೆ 8 ರಿಂದ ಪ್ರಾರಂಭವಾಗಿ ಸಂಜೆ 6.30ರ ವರೆಗೂ ನಡೆಯುತ್ತಿದ್ದು, ಅವರಿಗೆ ವಿಶ್ರಾಂತಿ ಇಲ್ಲದೆ ಬರುವ ಪರೀಕ್ಷೆಗಳನ್ನು ಎದುರಿಸಲು ಅಸಮರ್ಥರಾಗುತ್ತಿದ್ದಾರೆ. ವಿಶ್ವವಿದ್ಯಾಲಯ ಏರ್ಪಡಿಸುವ ಪರೀಕ್ಷೆಗಳನ್ನು ಎದುರಿಸಲು ವಿದ್ಯಾರ್ಥಿಗಳಿಗೆ ಸಮಯದ ಅಭಾವ ಉಂಟಾಗುತ್ತಿದೆ.

ಪ್ರತಿ ಸಾರಿ ಎಂಎಲ್ಎ, ಎಂಪಿ, ಜಿಲ್ಲಾ ಪಂಚಾಯಿತಿ ಚುನಾವಣೆ ಗಳಿಗೆ ವಿಜ್ಞಾನ ಕಾಲೇಜು ಕಟ್ಟಡವನ್ನು ಬಳಕೆ ಮಾಡುತ್ತಿರುವುದರಿಂದ, ಒಳಗಿರುವ ಪ್ರತಿಯೊಂದು ಪೀಠೋಪ ಕರಣ, ಪ್ರಯೋಗಾಲಯದ ವಸ್ತುಗಳು, ಕ್ರೀಡಾ ಸಾಮಗ್ರಿ, ಕಚೇರಿಯ ಕಡತಗಳನ್ನು ಸ್ಥಳಾಂತರಿಸುವಾಗ ಅವುಗಳಿಗೆ ಹಾನಿಯಾಗಿ ಉಪಯೋಗವಿಲ್ಲದಂತೆ ಆಗುತ್ತಿವೆ. ಪ್ರತಿ ಚುನಾವಣೆಯಲ್ಲೂ ಕಿಟಕಿಗಳು, ಬಾಗಿಲುಗಳು, ಸೆಮಿನಾರ್ ಕೊಠಡಿ ಸಹ ಘಾಸಿಗೊಳಗಾಗುತ್ತಿದ್ದು, ಅವುಗಳ ರಿಪೇರಿ ವೆಚ್ಚ ಹೆಚ್ಚುತ್ತಲೇ ಇದೆ.

ಕಾಲೇಜಿನ ಸುತ್ತಮುತ್ತ ಕಟ್ಟಿರುವ ಬ್ಯಾರಿಕೇಡುಗಳು ಮತ್ತು ಭದ್ರತೆಗಾಗಿ ಆಯೋಜಿಸಿರುವ ಪೊಲೀಸ್ ಸಿಬ್ಬಂದಿ ಕಲಿಕಾ ವಾತಾವರಣದ ಮೇಲೆ ಪರಿಣಾಮ ಬೀರಿವೆ. ವಿದ್ಯಾರ್ಥಿ ಗಳಿಗೆ ನಿಷೇಧಾಜ್ಞೆ ವಾತಾವರಣ ಎಂಬ ಭಾವನೆ ಮೂಡುತ್ತಿದೆ. ಸುತ್ತಮುತ್ತ, ಅಕ್ಕಪಕ್ಕದಲ್ಲಿರುವ ಕಾಲೇಜುಗಳ ಕೊಠಡಿಗಳಲ್ಲಿ ತರಗತಿಗಳು ನಡೆಸುತ್ತಿರುವುದರಿಂದ ಉಪನ್ಯಾಸಕರುಗಳಿಗೆ ವಿದ್ಯಾರ್ಥಿಗಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಂಡು, ಕಲಿಕೆಯ ಮಾರ್ಗದಲ್ಲಿ ಮುನ್ನಡೆಸಲು ತೊಂದರೆಯಾಗುತ್ತಿದೆ. ಕೊಠಡಿಗಳ ಅಭಾವದಿಂದ ಆಂತರಿಕ ಪರೀಕ್ಷೆಗಳನ್ನು ಸಹ ಮುಂದೂಡಿಕೊಂಡು, ಕಟ್ಟಡ ಖಾಲಿ ಮಾಡಿದಾಗ ಪರೀಕ್ಷೆ ನಡೆಸುವಂತಹ ಪರಿಸ್ಥಿತಿ ಎದುರಾಗಿದೆ.

ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷೆಗಳು ಏಕಕಾಲದಲ್ಲಿ ಎರಡು ಜಿಲ್ಲೆಯ ಕಾಲೇಜುಗಳಲ್ಲಿ ನಡೆಸುತ್ತಿರುವುದರಿಂದ, ಈ ಕಾಲೇಜಿನ ವಿದ್ಯಾರ್ಥಿಗಳು ಹಿಂದೆ ಬಿದ್ದಿದ್ದು, ಪರೀಕ್ಷೆ ಗಳನ್ನು ಎದುರಿಸುವ ಶಕ್ತಿಯನ್ನು ಕಳೆದುಕೊಂಡಿದ್ದಾರೆ, ಅದಕ್ಕಾಗಿ ವಿಶ್ವವಿದ್ಯಾಲಯವು ಪರೀಕ್ಷೆಯ ದಿನಾಂಕವನ್ನು ಕನಿಷ್ಠ ಪಕ್ಷ 15 ದಿವಸ ಮುಂದೂಡಬೇಕೆಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.