ಸಾರಾಂಶ
ಅಶೋಕ ಡಿ. ಸೊರಟೂರ
ಲಕ್ಷ್ಮೇಶ್ವರ: ಪಟ್ಟಣದಲ್ಲಿನ ಅಲ್ಪಸಂಖ್ಯಾತರ ಮಕ್ಕಳಿಗಾಗಿ 2018ರಲ್ಲಿ ಆರಂಭವಾಗಿರುವ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಶಾಲೆಯಲ್ಲಿ ಶೌಚಾಲಯ ಸೇರಿದಂತೆ ಯಾವುದೇ ಮೂಲ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.ರಾಜ್ಯ ಸರ್ಕಾರ ಪಟ್ಟಣದಲ್ಲಿ ಕಳೆದ 7-8 ವರ್ಷಗಳ ಹಿಂದೆ ಅಲ್ಪ ಸಂಖ್ಯಾತರ ಇಲಾಖೆಯು ಅಡಿಯಲ್ಲಿ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಎಂಬ ಹೆಸರಿನಲ್ಲಿ ಆಂಗ್ಲ ಮಾಧ್ಯಮ ಶಾಲೆಯ ಆರಂಭಗೊಂಡಿತ್ತು. ಇಲ್ಲಿ 6ನೇ ತರಗತಿಯಿಂದ 10ನೇ ತರಗತಿ ವರೆಗೆ ನಡೆಯುತ್ತಿವೆ.
ಪಟ್ಟಣದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಕಟ್ಟಡದಲ್ಲಿ ಮೌಲಾನಾ ಶಾಲೆಯ ತರಗತಿಗಳು ನಡೆಯುತ್ತಿದ್ದು. 6ರಿಂದ 10ನೇ ತರಗತಿ ವರೆಗೆ ಒಟ್ಟು 280ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.ಈ ಕಟ್ಟಡದಲ್ಲಿ 5 ತರಗತಿಗಳು ನಡೆಯುತ್ತಿವೆ. ಕೊಠಡಿಗಳ ಕೊರತೆಯಿಂದ ಮುಖ್ಯೋಪಾಧ್ಯಾಯರ ಕಚೇರಿ, ಶಿಕ್ಷಕ ಸಿಬ್ಬಂದಿ ವಿಶ್ರಾಂತಿ ಕೊಠಡಿಗಳು ಸೇರಿ 8ನೇ ತರಗತಿಯ ಸೇರಿ ಒಂದೇ ಕೊಠಡಿಯಲ್ಲಿ ಪಾಠ ಪ್ರವಚನಗಳು ನಡೆಯುತ್ತಿರುವುದು ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
ಈ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಶಾಲೆಯಲ್ಲಿ ಮುಖ್ಯ ಶಿಕ್ಷಕರನ್ನು ಹೊರತುಪಡಿಸಿದರೆ ಉಳಿದ 5 ಜನ ಅತಿಥಿ ಶಿಕ್ಷಕರು ಎಂಬುದು ಗಮನಾರ್ಹ ಸಂಗತಿಯಾಗಿದೆ. ಮುಖ್ಯ ಶಿಕ್ಷಕರು ವಾರದಲ್ಲಿ 3 ದಿನ ಇಲ್ಲಿ ಕರ್ತವ್ಯ ನಿರ್ವಹಿಸಿದರೆ, ಉಳಿದ 3 ದಿನ ಗದುಗಿನ ಮೌಲಾನಾ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬುದು ದುರಂತದ ಸಂಗತಿಯಾಗಿದೆ.ಮೌಲಾನಾ ಶಾಲೆ ಕಟ್ಟಡ ಕಟ್ಟಲು ಪಟ್ಟಣದ ಭರಮಪ್ಪನ ವೃತ್ತದ ಹತ್ತಿರ ಹಳೆಯ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಕಟ್ಟಡವನ್ನು ತೆರವುಗೊಳಿಸಿದ ಜಾಗದಲ್ಲಿ ಕಟ್ಟಲು ಸರ್ಕಾರ ಕೆಆರ್‌ಐಡಿಎಲ್ ಮೂಲಕ ಕೋಟ್ಯಂತರ ರು. ಬಿಡುಗಡೆ ಮಾಡಿತ್ತು. ಆದರೆ ಮೌಲಾನಾ ಶಾಲೆಯ ಕಟ್ಟಡ ಕಟ್ಟಲು ಆರಂಭಿಸಿದ ಸರ್ಕಾರದ ಇಲಾಖೆಯು ಬೇಕಾಬಿಟ್ಟಿ ಕಟ್ಟಡ ಕಟ್ಟಿದ್ದು, ಕಟ್ಟಡ ಕಳಪೆಯಾಗಿದೆ ಎಂಬ ಆರೋಪ ಕೂಡಾ ಕೇಳಿ ಬಂದಿತ್ತು. ಕಳೆದ 3-4 ವರ್ಷಗಳಿಂದ ಅರ್ಧಕ್ಕೆ ನಿಂತ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಮೌಲಾನಾ ಶಾಲೆಯ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಮರೀಚಿಕೆಯಾಗಿದೆ ಎಂಬುದು ಪಾಲಕರ ಆರೋಪವಾಗಿದೆ. ಬಡ ಅಲ್ಪಸಂಖ್ಯಾತರ ಮಕ್ಕಳು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಭ್ಯಾಸ ಮಾಡುವ ಆಸೆಯಿಂದ ಇಲ್ಲಿ ತಮ್ಮ ಮಕ್ಕಳನ್ನು ಓದಿಸಲು ಬಯಸುತ್ತಾರೆ. ಆದರೆ ಈ ಶಾಲೆಯಲ್ಲಿ ಶೌಚಾಲಯ ಇಲ್ಲ. ಶುದ್ಧ ಕುಡಿಯುವ ನೀರು ಇಲ್ಲ, ಆಟದ ಬಯಲು ಇಲ್ಲ, ಮೊದಲು ಕಾಯಂ ಶಿಕ್ಷಕರು ಇಲ್ಲದೆ ಇರುವುದರಿಂದ ಮಕ್ಕಳ ಬೋಧನೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಸರ್ಕಾರ ಈಗಲಾದರೂ ಎಚ್ಚೆತ್ತು ಮೌಲಾನಾ ಶಾಲೆಗೆ ಸ್ವಂತ ಕಟ್ಟಡ ಕಟ್ಟಲು ಮುಂದಾಗಿ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗಬೇಕು ಎಂದು ಜಾಕೀರ್‌ಹುಸೇನೆ ಹವಾಲ್ದಾರ ಹೇಳಿದರು.
ಮೌಲಾನಾ ಅಬ್ದುಲ್ ಕಲಾಂ ಆಜಾದ್ ಶಾಲೆಯು ಅಲ್ಪಸಂಖ್ಯಾತರ ಇಲಾಖೆಗೆ ಒಳಪಡುತ್ತಿರುವುದರಿಂದ ಅದರ ಶೈಕ್ಷಣಿಕ ಚಟುವಟಿಕೆ ಮೇಲೆ ಮಾತ್ರ ನಮ್ಮ ಗುರಿ ಇರುತ್ತದೆ. ಕಟ್ಟಡ, ಮೂಲ ಸೌಲಭ್ಯ ಹಾಗೂ ಇನ್ನಿತರ ವಿಷಯಗಳ ಕುರಿತು ಸೌಲಭ್ಯ ಒದಗಿಸುವ ಕಾರ್ಯವನ್ನು ಅಲ್ಪಸಂಖ್ಯಾತ ಇಲಾಖೆಯು ನೋಡಿಕೊಳ್ಳುತ್ತದೆ ಎಂದು ಬಿಇಒ ಎಚ್.ಎನ್. ನಾಯಕ್ ಹೇಳಿದರು.