ಸಾರಾಂಶ
ಮಾನವೀಯ ಮೌಲ್ಯಗಳಿಗೆ ಒತ್ತು ನೀಡಿ ದೀಪಾವಳಿ ಆಚರಿಸಿದ್ದಾರೆ. ಇದು ಮಾದರಿ ಕಾರ್ಯವಾಗಿದೆ
ಸಂಡೂರು: ಪಟ್ಟಣದ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಪರಿಸರಕ್ಕೆ ಹಾನಿ ಮಾಡುವ ಪಟಾಕಿಗಳನ್ನು ಸುಡುವ ಬದಲು ತಮ್ಮ ಪಟಾಕಿ ಹಣವನ್ನು ಉಳಿಸಿ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಸಂಡೂರು, ಕೂಡ್ಲಿಗಿ, ಕೊಟ್ಟೂರಿನ ಮೂರು ಪ್ರತ್ಯೇಕ ವೃದ್ಧಾಶ್ರಮಗಳಿಗೆ ಕೊಟ್ಟು ಶ್ಲಾಘನೆಗೆ ಒಳಗಾದರು.
ವಿದ್ಯಾಕೇಂದ್ರದ ಆಡಳಿತಾಧಿಕಾರಿ ಕುಮಾರ್ ಎಸ್. ನಾನಾವಟೆ ಮಾತನಾಡಿ, ಸಂಸ್ಥೆಯ ವಿದ್ಯಾರ್ಥಿಗಳು ಪಟಾಕಿಗೆ ವ್ಯಯಿಸಬೇಕಿದ್ದ ಹಣವನ್ನು ಉಳಿಸಿ, ಅದರಿಂದ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ, ಅವುಗಳನ್ನು ವೃದ್ಧಾಶ್ರಮಗಳಲ್ಲಿನ ಹಿರಿಯರಿಗೆ ವಿತರಿಸಿದರು. ಈ ಮೂಲಕ ನಿಜವಾದ ದೀಪಾವಳಿಯ ಬೆಳಕಿನ ಸಂದೇಶವನ್ನು ಸಾರಿದರು. ಮಾನವೀಯ ಮೌಲ್ಯಗಳಿಗೆ ಒತ್ತು ನೀಡಿ ದೀಪಾವಳಿ ಆಚರಿಸಿದ್ದಾರೆ. ಇದು ಮಾದರಿ ಕಾರ್ಯವಾಗಿದೆ ಎಂದು ತಿಳಿಸಿದರು.ವಿದ್ಯಾಕೇಂದ್ರದ ಪ್ರಾಚಾರ್ಯ ಸನಾಉಲ್ಲಾ ಮಾತನಾಡಿ, ದೀಪಾವಳಿ ಎಂದರೆ ಪಟಾಕಿಗಳ ಸದ್ದು ಮತ್ತು ಹೊಗೆ ಎಂಬ ಭಾವನೆಯನ್ನು ಧಿಕ್ಕರಿಸಿ, ನಮ್ಮ ಶಾಲೆಯ ಮಕ್ಕಳು ಮಹತ್ವದ ನಿರ್ಧಾರವೊಂದನ್ನು ಕೈಗೊಂಡು ಪಟಾಕಿ ಸಿಡಿತದಿಂದ ಉಂಟಾಗುವ ವಾಯು ಮತ್ತು ಶಬ್ದ ಮಾಲಿನ್ಯವನ್ನು ತಡೆಯಲು ಅವರು ಈ ವರ್ಷ ಪಟಾಕಿಗಳನ್ನು ಹಚ್ಚದಿರಲು ಶಪಥ ಮಾಡಿದರು. ಇದರ ಬದಲಾಗಿ ಪಟಾಕಿಗಳಿಗಾಗಿ ಖರ್ಚು ಮಾಡುವ ಹಣವನ್ನು ಸಾರ್ಥಕ ಕಾರ್ಯಕ್ಕೆ ಬಳಸಿದರು. ಮಕ್ಕಳು ತೋರಿಸಿದ ಪ್ರೀತಿ ಮತ್ತು ಕಳಕಳಿಯಿಂದ ವೃದ್ಧಾಶ್ರಮಗಳಲ್ಲಿದ್ದ ಹಿರಿಯರ ಮುಖದಲ್ಲಿ ಸಂತೋಷದ ನಗೆ ಮೂಡಿತು. ತಾವು ಕಳೆದುಕೊಂಡ ಮಕ್ಕಳ ಪ್ರೀತಿಯನ್ನು ನಮ್ಮ ವಿದ್ಯಾರ್ಥಿಗಳಲ್ಲಿ ಕಂಡುಕೊಂಡರು ಎಂದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿಯರಾದ ಸುಜಾತಾ ಘೋರ್ಪಡೆ, ರುಕ್ಮಿಣಿ ಕದಮ್, ದಿವಾಕರ್ ಬೇಲೇರಿ ಮುಂತಾದವರು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))