ಶಾಲೆಯಲ್ಲಿ ಮೂಲಭೂತ ಸೌಲಭ್ಯಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು, ಪೋಷಕರಿಂದ ಪ್ರತಿಭಟನೆ

| Published : Aug 03 2025, 11:45 PM IST

ಸಾರಾಂಶ

ವಸತಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದ್ದು ಶೈಕ್ಷಣಿಕ ವಾತಾವರಣಕ್ಕೆ ಪೂರಕ ಚಟುವಟಿಕೆ ನಡೆಯುತ್ತಿಲ್ಲ. ಇನ್ನು ವಸತಿ ಶಾಲೆಯಲ್ಲಿ ಮಕ್ಕಳಿಗೆ ಹಳಸಿದ ಪದಾರ್ಥ ನೀಡಲಾಗುತ್ತಿದ್ದು ಹಲವು ಮಂದಿ ವಿದ್ಯಾರ್ಥಿಗಳು ಚರ್ಮರೋಗದಿಂದ ಬಳಲುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ನಂಜನಗೂಡುವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಮೂಲಭೂತ ಸೌಕರ್ಯ ಒದಗಿಸಿಲ್ಲ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರತಿ ನಿಧಿಸುವ ಕ್ಷೇತ್ರ ವ್ಯಾಪ್ತಿಗೆ ಸೇರಿದ ವಸತಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾನುವಾರ ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ತಾಲೂಕಿನ ತಗಡೂರು ಸಮೀಪದ ಕೊಂತಯ್ಯನಹುಂಡಿಯ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕನಿಷ್ಠ ಸೇವಿಸಲು ಯೋಗ್ಯವಾಗಿರುವ ರೀತಿಯ ಆಹಾರ ಪದಾರ್ಥ ನೀಡುತ್ತಿಲ್ಲ, ಶೌಚಾಲಯಗಳನ್ನು ಸ್ವಚ್ಚಗೊಳಿಸುತ್ತಿಲ್ಲ ಹಾಗೂ ಕುಡಿಯಲು ಶುದ್ಧ ನೀರು ಪೂರೈಸುತ್ತಿಲ್ಲ ಎಂದು ಆರೋಪಿಸಿ ಭಾನುವಾರ ಶಾಲೆಯ ಪೋಷಕರು ಹಾಗೂ ಮಕ್ಕಳು ಬೆಳಗಿನ ಉಪಹಾರ ಸೇವಿಸದೆ ಎ.ಐ.ಡಿ.ಎಸ್.ಒ (ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ) ವಿದ್ಯಾರ್ಥಿ ಸಂಘಟನೆ ಕಾರ್ಯಕರ್ತರೊಡಗೂಡಿ ವಸತಿ ಶಾಲೆ ಮುಂಭಾಗ ದಿಡೀರ್ ಪ್ರತಿಭಟನೆ ನಡೆಸಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು.ಈ ವೇಳೆ ಮಾತನಾಡಿದ ಹಲವರು ವಸತಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದ್ದು ಶೈಕ್ಷಣಿಕ ವಾತಾವರಣಕ್ಕೆ ಪೂರಕ ಚಟುವಟಿಕೆ ನಡೆಯುತ್ತಿಲ್ಲ. ಇನ್ನು ವಸತಿ ಶಾಲೆಯಲ್ಲಿ ಮಕ್ಕಳಿಗೆ ಹಳಸಿದ ಪದಾರ್ಥ ನೀಡಲಾಗುತ್ತಿದ್ದು ಹಲವು ಮಂದಿ ವಿದ್ಯಾರ್ಥಿಗಳು ಚರ್ಮರೋಗದಿಂದ ಬಳಲುತ್ತಿದ್ದಾರೆ. ಮಕ್ಕಳಿಗೆ ಸ್ನಾನಕ್ಕೆ ಬಿಸಿ ನೀರಿನ ಸೌಕರ್ಯ ಲಭ್ಯವಿಲ್ಲ. ಜೊತೆಗೆ ಶಾಲೆಯಲ್ಲಿನ ಸಮಸ್ಯೆಗಳನ್ನು ಪ್ರಶ್ನಿಸುವ ವಿದ್ಯಾರ್ಥಿಗಳಿಗೆ ಥಳಿಸಲಾಗುತ್ತಿದೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಪರಿಹಾರಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ಮಕ್ಕಳನ್ನು ವಾಪಸ್ ಕರೆದೊಯ್ಯುವುದಾಗಿ ಎಚ್ಚರಿಸಿದರು.ಬಳಿಕ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಉಪ ವಿಭಾಗಾಧಿಕಾರಿ ಆಶಪ್ಪ, ಕ್ರೈಸ್ಟ್ ಸಂಸ್ಥೆಯ ರಂಗೇಗೌಡ ಹಾಗೂ ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ಪ್ರತಿಭಟನಾನಿರತ ಮಕ್ಕಳು ಹಾಗೂ ಪೋಷಕರೊಡನೆ ಸಮಾಲೋಚನೆ ನಡೆಸಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಯನ್ನು ಇನ್ನು ಒಂದು ವಾರದಲ್ಲಿ ಬಗೆ ಹರಿಸುವ ಭರವಸೆ ನೀಡಿದರು.ಬಳಿಕ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.ಪ್ರತಿಭಟನೆಯಲ್ಲಿ ಎ.ಐ.ಡಿ.ಎಸ್.ಒ ಜಿಲ್ಲಾ ಕಾರ್ಯದರ್ಶಿ ಅಭಿಷೇಕ್, ಕಾರ್ಯ ಗ್ರಾಪಂ ಸದಸ್ಯ ಗುರುಸ್ವಾಮಿ, ಪೋಷಕರಾದ ಮಹದೇವ್, ನಾಗರಾಜು, ಕೊಂತಯ್ಯನಹುಂಡಿ ಗುರುಸ್ವಾಮಿ ಮೊದಲಾದವರು ಪಾಲ್ಗೊಂಡಿದ್ದರು.