ಸಾರಾಂಶ
ಶಿರಹಟ್ಟಿ: ಜೀವನದಲ್ಲಿ ಮುಖ್ಯ ಘಟ್ಟ ಅಂದರೆ ಪ್ರೌಢ ಶಿಕ್ಷಣ. ಇಂತಹ ಶಿಕ್ಷಣ ಪಡೆಯುವಾಗ ವಿದ್ಯಾರ್ಥಿಗಳು ಶಾಲೆಯ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅದರಲ್ಲಿ ಯಶಸ್ಸು ಪಡೆಯಬೇಕು. ಪಠ್ಯದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಅಲ್ಲಿನ ಸೋಲು ಗೆಲುವನ್ನು ನೋಡದೇ ಅದರಲ್ಲಿ ಭಾಗವಹಿಸುವುದು ಅವಶ್ಯ ಎಂದು ಸಿಸಿಎನ್ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಚಂದ್ರಕಾಂತ ನೂರಶೆಟ್ಟರ ಹೇಳಿದರು.
ಪಟ್ಟಣದ ಎಸ್‌ಎಫ್‌ಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ೨೦೨೩-೨೪ನೇ ಸಾಲಿನ ೨೧ನೇ ವರ್ಷದ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ ಮಾಡಿ ಮಾತನಾಡಿದರು. ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೇಹಕ್ಕೆ ಸಾಮರ್ಥ್ಯ ಹೆಚ್ಚಾಗುತ್ತದೆ. ಇದರಿಂದ ಪ್ರೌಢಾವಸ್ಥೆಯಲ್ಲಿರುವ ವಿದ್ಯಾರ್ಥಿಗಳು ದೈಹಿಕವಾಗಿ ಬಲಿಷ್ಠರಾಗಲು ಅನುಕೂಲವಾಗುತ್ತದೆ. ಇಂದಿನ ದಿನಮಾನಗಳಲ್ಲಿ ಗ್ರಾಮೀಣ ಕ್ರೀಡೆಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಆದರ್ಶವಾಗಿಟ್ಟುಕೊಂಡು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಾಧನೆ ಮಾಡಬೇಕೆಂದರು.ಕ್ರೀಡೆಯು ಮನುಷ್ಯನ ಅವಿಭಾಜ್ಯ ಅಂಗವಾಗಿದ್ದು, ಇದರಿಂದ ಸೋಮಾರಿತನ ಹೋಗುತ್ತದೆ. ದೇಹದ ಆರೋಗ್ಯ ಸ್ಥಿತಿ ಉತ್ತಮವಾಗಿರುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ. ಇದರಿಂದಾಗಿ ಬಾಂಧವ್ಯ, ಸಹೋದರತ್ವ ಬೆಳೆಯುತ್ತದೆ. ಕ್ರೀಡೆಯಲ್ಲಿ ಭಾಗವಹಿಸುವವರು ಮತ್ತು ಕ್ರೀಡಾ ಆಯೋಜಕರು ಯಾವುದೇ ಗದ್ದಲ, ಗಲಾಟೆಗಳಿಗೆ ಅವಕಾಶ ನೀಡದೇ ಯಶಸ್ವಿಯಾಗಿ ಕ್ರೀಡಾಕೂಟವನ್ನು ನಡೆಸಬೇಕೆಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಎಂ. ಹವಳದ ಮಾತನಾಡಿ, ಇಂದಿನ ಯುವಕರಲ್ಲಿ ಕ್ರೀಡೆಗಳಲ್ಲಿ ಆಸಕ್ತಿ ಕುಂಠಿತಗೊಂಡಿರುವುದರಿಂದ ಗ್ರಾಮೀಣ ಪ್ರತಿಭೆಗಳು ಹೊರಹೊಮ್ಮುತ್ತಿಲ್ಲ. ಇದಕ್ಕಾಗಿ ಶಾಲೆಗಳಲ್ಲಿ ಪ್ರತಿ ವರ್ಷ ಹಮ್ಮಿಕೊಳ್ಳುವ ಕ್ರೀಡೆಗಳಲ್ಲಿ ಆಸಕ್ತಿ ವಹಿಸಿ ಭಾಗವಹಿಸಿ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುವ ಗುರಿಯನ್ನು ವಿದ್ಯಾರ್ಥಿಗಳು ಹೊಂದಬೇಕು ಎಂದು ಕರೆ ನೀಡಿದರು.ವಿದ್ಯಾರ್ಥಿಗಳು ಪ್ರೌಢ ವ್ಯವಸ್ಥೆಯಲ್ಲಿ ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮುಂದಿನ ಶಿಕ್ಷಣಕ್ಕೆ ಅನುಕೂಲವಾಗುತ್ತದೆ. ಶಾಲಾ ಜೀವನದಲ್ಲಿ ಪಾಠ ಎಷ್ಟು ಮುಖ್ಯವೋ ಅಷ್ಟೇ ಕ್ರೀಡೆಗಳು ಮುಖ್ಯವಾಗಿವೆ. ವಿದ್ಯಾರ್ಥಿಗಳು ಪಾಠದ ಜೊತೆಗೆ ಆಟದಲ್ಲಿ ಹೆಚ್ಚು ಭಾಗವಹಿಸಬೇಕು. ಆಟಗಳು ದೇಹದ ಸದೃಢತೆ ಹೆಚ್ಚಿಸಲು ನೆರವಾಗುವುದು. ಆ ಕಾರಣದಿಂದ ಪಾಠದ ಜೊತೆಗೆ ಆಟವು ಅತಿ ಅವಶ್ಯವಾಗಿದೆ. ಶಾಲಾ ವಾತಾವರಣದಲ್ಲಿರುವ ಎಲ್ಲ ವಿದ್ಯಾರ್ಥಿಗಳು ಸೋಲು ಗೆಲುವಿನ ಬಗ್ಗೆ ಚಿಂತಿಸದೆ ಭಾಗವಹಿಸಬೇಕು ಎಂದರು.
ಕ್ರೀಡೆ ಹಾಗೂ ಸಂಸ್ಕೃತಿ ಬಗ್ಗೆ ನಮ್ಮ ಜನರಲ್ಲಿ ಪ್ರೀತಿ ಇದೆ. ಕ್ರೀಡೆಯಲ್ಲಿ ಪೈಪೋಟಿಯಿದ್ದಂತೆ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕು. ಕ್ರೀಡೆಯು ಮನುಷ್ಯನ ಜೀವನದಲ್ಲಿ ಅತೀ ಅವಶ್ಯಕವಾಗಿದ್ದು, ದೈಹಿಕ ಮಾನಸಿಕವಾಗಿ ಬೆಳೆಯಲು ಕ್ರೀಡೆಗಳು ಸಹಕಾರಿಯಾಗಲಿದೆ. ಭಾರತದ ಪ್ರತಿಯೊಬ್ಬ ಪ್ರಜೆಯೂ ಕ್ರೀಡೆಯಲ್ಲಿ ಪ್ರತಿನಿಧಿಸುವ ನಿಟ್ಟಿನಲ್ಲಿ ಗುರಿಯನ್ನು ಹೊಂದಿ. ಅಂದಾಗ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ತಿಳಿಸಿದರು.ಶಾಲೆಯ ದೈಹಿಕ ಶಿಕ್ಷಕ ಇಮ್ರಾನ್ ಸುಂಕದ ಹಾಗೂ ಇತರರು ಇದ್ದರು. ನಯನ ದೊಡ್ಡಮನಿ ಸ್ವಾಗತಿಸಿದರು. ಕೃತಿಕಾ ಕೊಪ್ಪದ, ಅಕ್ಷತಾ ಅರ್ಕಸಾಲಿ ನಿರೂಪಣೆ ಮಾಡಿದರು. ಪೂಜಾ ಸ್ವಾಮಿ ಹಾಗೂ ಸಂಗಡಿಗರಿಂದ ಪ್ರಾರ್ಥನಾ ಗೀತೆ ನಡೆಯಿತು. ತೇಜಸ್ವಿನಿ ಮಾಬಳಿ ವಂದಿಸಿದರು.