ಸಾರಾಂಶ
ಹಳಿಯಾಳ: ಶಾಲೆಗಳಲ್ಲಿ ಸಾಮಾನ್ಯವಾಗಿ ಆಟ- ಪಾಠದ ಜತೆಗೆ ಕೆಲವು ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದು ಸಾಮಾನ್ಯ. ಆದರೆ ಪಟ್ಟಣದ ಶ್ರೀ ವಿಆರ್‌ಡಿಎಂ ಟ್ರಸ್ಟ್‌ನ ವಿಮಲ ವಿ. ದೇಶಪಾಂಡೆ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯು ಮಕ್ಕಳನ್ನು ಗದ್ದೆಗೆ ಇಳಿಸಿ ಭತ್ತ ನಾಟಿ ಮಾಡಿಸುವ ಮೂಲಕ ಕೃಷಿಯ ಮಹತ್ವ ತಿಳಿಸಿದೆ.
ಶಾಲೆಯ ನಾಲ್ಕು ಗೋಡೆಗಳ ಮಧ್ಯೆ ಪಾಠ ಕೇಳುತ್ತಿದ್ದ 8ನೇ ತರಗತಿಯ ಮಕ್ಕಳನ್ನು ಶನಿವಾರ ಪಕ್ಕದ ಜೋಯಿಡಾ ತಾಲೂಕಿಗೆ ಕರೆದೊಯ್ದು ಗದ್ದೆ ಎಂದರೇ ಏನು? ಬೇಸಾಯ ಎಂದರೆ ಹೇಗೆ? ನಾಟಿ ಹೇಗೆ ಮಾಡಬೇಕು ಎಂದೆಲ್ಲಾ ಮಾಹಿತಿಯನ್ನು ನೀಡುತ್ತಾ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಲಾಯಿತು. ಸ್ವತಃ ಮಕ್ಕಳು ಭತ್ತ ನಾಟಿ ಮಾಡಿ ಸಂಭ್ರಮಿಸಿದರು.ಜೋಯಿಡಾ ತಾಲೂಕಿನ ಜಗಲಬೇಟದಲ್ಲಿರುವ ಪ್ರಗತಿಪರ ಕೃಷಿಕ ಮಹಾದೇವರ ಅವರ ಹೊಲಗದ್ದೆಯಲ್ಲಿ ಇಳಿದು ಭತ್ತದ ನಾಟಿ ಮಾಡಿದರು.
ರೈತರು ಎಂದರೆ ಯಾರು?: ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಶಿಕ್ಷಕ ನಿರಂಜನ್ ಕೆ. ರಾವ್ ಅವರು, ಎಲ್ಲ ಮಕ್ಕಳಿಗೂ ಡಾಕ್ಟರ್, ಎಂಜಿನಿಯರ್ ಆಗಬೇಕು, ಉನ್ನತ ಸ್ಥಾನಕ್ಕೆ ಹೋಗಬೇಕೆಂಬ ಗುರಿ ಇರುತ್ತದೆ. ಆದರೆ ಯಾರೂ ರೈತನಾಗಲೂ ಬಯಸುವುದಿಲ್ಲ. ರೈತರು ಎಂದರೆ ಯಾರು? ನಾವು ಸೇವಿಸುತ್ತಿರುವ ಈ ಅನ್ನ, ಆಹಾರ ಎಲ್ಲಿಂದ ಬರುತ್ತದೆ, ಅದರ ಹಿಂದೆ ಎಷ್ಟು ಜನರ ಶ್ರಮ ಇದೆ ಎಂದು ತಿಳಿಸುವ ಸಲುವಾಗಿ ಭತ್ತದ ನಾಟಿ ಮಾಡುವ ಪ್ರಾಯೋಗಿಕ ಅಭ್ಯಾಸವನ್ನು ವಿದ್ಯಾಸಂಸ್ಥೆ ಹಮ್ಮಿಕೊಂಡಿದೆ ಎಂದರು.ಕೃಷಿ ಪುಣ್ಯದ ಕಾಯಕ: ಭತ್ತ ನಾಟಿ ಮಾಡಿದ ವಿದ್ಯಾರ್ಥಿನಿ ಅನ್ವಿತಾ ಬಿಜಾಪುರ ಮಾತನಾಡಿ, ನಮ್ಮಿಂದ ಭತ್ತ ನಾಟಿ ಮಾಡಿಸಲಾಯಿತು. ಭತ್ತ ನಾಟಿ ಹೇಗೆ ಮಾಡಬೇಕು ಎಂದು ಹೇಳಿಕೊಟ್ಟರು. ನಿಜಕ್ಕೂ ಕೆಸರಿನಲ್ಲಿ ನಿಂತು ಬೇಸಾಯ ಮಾಡುವುದು ಕಷ್ಟದ ಕಾಯಕ, ನಮ್ಮ ರೈತರು ನಮಗಾಗಿ ಎಷ್ಟು ಕಷ್ಟಪಡುತ್ತಿದ್ದಾರೆ, ಬೇಸಾಯವು ಎಷ್ಟು ಶ್ರೇಷ್ಠವಾದ ಕಾಯಕವಾಗಿದೆ ಎಂಬ ಅರಿವು ನಮಗಾಯಿತು ಎಂದರು.
ಆಹಾರ ವ್ಯರ್ಥ ಮಾಡಬಾರದು: ಅನುಭವ ಹಂಚಿಕೊಂಡ ಇನ್ನೊರ್ವ ವಿದ್ಯಾರ್ಥಿ ದಕ್ಷ ಶೆಟ್ಟಿ, ಮಕ್ಕಳು ಲಂಚ್ ಬಾಕ್ಸ್‌ನಲ್ಲಿ ಹಾಕಿಕೊಟ್ಟ ಅನ್ನವನ್ನು ವ್ಯರ್ಥ ಮಾಡುತ್ತಾರೆ. ಹೀಗಾಗಿ ಅನ್ನದ ಮಹತ್ವವವೇನು? ಅದರ ಅರಿವು ನಮಗೆ ಮೂಡಿಸಲಾಯಿತು ಎಂದರು.ಜಗಲಬೇಟದ ಕೃಷಿ ಇಲಾಖೆಯ ಸಿಬ್ಬಂದಿ ತುಕಾರಾಮ ಗವಸ ಹಾಗೂ ರೈತ ಮಹಾದೇವ ಅವರು ಕೃಷಿಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿ ಅನುಮಾನಗಳನ್ನು ಪರಿಹರಿಸಿದರು. ಶಿಕ್ಷಕಿ ಮೀನಾಕ್ಷಿ ಉಂಡಿ ಉಪಸ್ಥಿತರಿದ್ದರು.