ಸಾರಾಂಶ
ಚಳ್ಳಕೆರೆ: ನಗರದ ಪಾವಗಡ ರಸ್ತೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಬಿಸಿಎಂ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿರುವ ವಿದ್ಯಾರ್ಥಿಗಳಿಗೆ ಹಾಸ್ಟಲ್ ವಾರ್ಡನ್ ಸರಿಯಾದ ಸೌಲಭ್ಯ ನೀಡದೆ ಯಾವುದೇ ವ್ಯವಸ್ಥೆ ಕಲ್ಪಿಸದೆ ದುಂಡಾವರ್ತನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಾಸ್ಟಲ್ ವಿದ್ಯಾರ್ಥಿಗಳು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ವಿದ್ಯಾರ್ಥಿಗಳು, ಪ್ರತಿನಿತ್ಯ ನಿಲಯ ಮೇಲ್ವಿಚಾರಕರೇ ಮದ್ಯ ಸೇವನೆ ಮಾಡಿ ನಿಲಯಕ್ಕೆ ಬಂದು ವಿದ್ಯಾರ್ಥಿಗಳ ಮೇಲೆ ವಿಕೇಟ್‌ನಿಂದ ಹಲ್ಲೆ ನಡೆಸುತ್ತಾರೆ. ಬೆದರಿಕೆ ಹಾಕುತ್ತಾರೆ, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಸೌಲಭ್ಯಗಳ ಬಗ್ಗೆ ಪ್ರಶ್ನಿಸಿದರೆ ಅಂತವರನ್ನೇ ಗುರಿಯಾಗಿಸಿ ಅವರಿಗೆ ಊಟ ನೀಡದೆ, ದೌರ್ಜನ್ಯವೆಸಗುತ್ತಾರೆ ಎಂದು ದೂರಿದರು.ನೀವು ಯಾರಿಗೆಬೇಕಾದರೂ ದೂರು ನೀಡಿ ನನ್ನ ಮುಂದೆನಡೆಯಲ್ಲ. ನನ್ನ ಸಂಬಂಧಿಯೇ ಹಿಂದುಳಿದವರ್ಗಗಳ ಜಿಲ್ಲಾ ಕಲ್ಯಾಣಾಧಿಕಾರಿಯಾಗಿದ್ದಾರೆ. ಎಂ.ಪಿ, ಎಂಎಲ್‌ಎಗೂ ನನ್ನ ಮೇಲೆ ದೂರು ನೀಡಿದರೂ ನಾನು ಎದರುವ ಮನುಷ್ಯನಲ್ಲ. ಇಲ್ಲಿ ನನ್ನ ಆಡಳಿತವೇ ನಡೆಯುತ್ತದೆ. ನಾನು ಹೇಳಿದಾಗೆ ಕೇಳಿಕೊಂಡು ಇರಬೇಕು ಇಲ್ಲವಾದರೆ ನಿಮ್ಮನ್ನು ಹಾಸ್ಟಲ್‌ನಿಂದ ಹೊರಹಾಕುತ್ತೇನೆಂದು ದಮ್ಕಿಹಾಕುತ್ತಾರೆಂದು ಆರೋಪಿಸಿದರು.
ವಿದ್ಯಾರ್ಥಿಗಳಿಂದ ಮಾಹಿತಿ ಪಡೆದ ತಹಶೀಲ್ದಾರ್ ರೇಹಾನ್‌ಪಾಷ ಮಾತನಾಡಿ, ಯಾವುದೇ ವಿದ್ಯಾರ್ಥಿಗಳು ಆತಂಕ ಪಡಬೇಡಿ, ಸಂಬಂಧಪಟ್ಟ ಅಧಿಕಾರಿಗೆ ಮಾಹಿತಿ ನೀಡಿ ಅವ್ಯವಸ್ಥೆಯನ್ನು ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದರು.ವಿದ್ಯಾರ್ಥಿಗಳಾದ ಸಿ.ಕಾರ್ತಿಕ್, ಜಿ.ಆರ್.ಉದಯ್, ಕರಿಬಸಣ್ಣ, ಕೆ.ಎಸ್.ಶೇಷಾದ್ರಿ ಬಿ.ಮಧು, ಸಂದೇಶ, ವಿ.ವಿಷ್ಣುಮೂರ್ತಿ, ಭಾಷ, ಸಂತೋಷ್, ಅಜಯ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.