ಹೊನ್ನಾವರ: ಹೊರಗಿನವರ ಮಾತು ಕೇಳಿ ನಮ್ಮ ಶಾಲೆಯ ಶಿಕ್ಷಕರಿಗೆ ಕಿರುಕುಳ ಕೊಡಬಾರದು ಎಂದು ಆಗ್ರಹಿಸಿ ತಾಲೂಕಿನ ಚಿಕ್ಕೊಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮತ್ತು ಪಾಲಕರು ಶುಕ್ರವಾರ ಪ್ರತಿಭಟನೆ ನಡೆಸಿ ಕ್ಷೇತ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು.ಚಿಕ್ಕೊಳ್ಳಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕ ವಸಂತ ನಾಗಪ್ಪ ದೇಶಭಂಡಾರಿ ಅವರಿಗೆ ವಿನಾಕಾರಣ ತೊಂದರೆ ನೀಡಲಾಗುತ್ತಿದೆ. ಪಾಲಕರಲ್ಲದ ಕಿಡಿಗೇಡಿಗಳು ಶಿಕ್ಷಕರ ವಿರುದ್ಧ ರಾಜಕೀಯ ಮಾಡಲು ಯತ್ನಿಸಿದ್ದಾರೆ ಎಂದು ಪಾಲಕರು ಆರೋಪಿಸಿದರು.ಸ್ಥಳಕ್ಕೆ ಆಗಮಿಸಿದ ಬಿಇಒ ಬಿ.ಎಸ್. ಭಜಂತ್ರಿ ಅವರಿಗೆ ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ ಭಂಡಾರಿ ಮತ್ತು ಪಾಲಕರು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಾತನಾಡಿ, ಶಿಕ್ಷಕರನ್ನು ವರ್ಗಾಯಿಸಿ ಎಂದು ಕೆಲವರು ಈ ಹಿಂದೆ ಮನವಿ ನೀಡಿದ್ದರು. ಅದನ್ನು ಪರಿಗಣಿಸಿ ಈ ಶಿಕ್ಷಕರಿಗೆ ನೋಟೀಸು ನೀಡಲಾಗಿತ್ತು ಎಂದರು.ಇದಕ್ಕೆ ಆಕ್ರೋಶಗೊಂಡ ಚಿಕ್ಕೊಳ್ಳಿ ಶಾಲೆಯ ವಿದ್ಯಾಥಿಗಳ ಪಾಲಕರು ಶಾಲೆ ಮತ್ತು ಶಿಕ್ಷಕರಿಗೆ ತೊಂದರೆ ನೀಡುವ ಹೊರಗಿನವರ ಮಾತಿಗೆ ಬೆಲೆ ನೀಡಬಾರದು. ಚಿಕ್ಕೊಳ್ಳಿಯ ಶಾಲೆಯಲ್ಲಿ ೧ರಿಂದ ೭ನೇ ತರಗತಿ ನಡೆಯುತ್ತಿದ್ದು ೨೧ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಶಾಲೆಯಲ್ಲಿ ಶಿಕ್ಷಕರಾದ ವಸಂತ ನಾಗಪ್ಪ ದೇಶಭಂಡಾರಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ಶಾಲೆ ತಾಲೂಕು ಕೇಂದ್ರದಿಂದ ದೂರದ ಹಳ್ಳಿಯಲ್ಲಿದ್ದರೂ ಸಮಯಕ್ಕೆ ಸರಿಯಾಗಿ ಬಂದು ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಆದರೆ ಇತ್ತೀಚೆಗೆ ಪಾಲಕರಲ್ಲದ ಕೆಲವು ಕಿಡಿಗೇಡಿಗಳು ಶಿಕ್ಷಕರ ವಿರುದ್ಧ ರಾಜಕೀಯ ಮಾಡಲು ಯತ್ನಿಸಿದ್ದಾರೆ. ಹೀಗಾಗಿ ನಮ್ಮ ಶಾಲೆಗೆ ಶಿಕ್ಷಕರಾದ ವಸಂತ ನಾಗಪ್ಪ ದೇಶಭಂಡಾರಿ ಬೇಕು. ಯಾರದೋ ಮಾತು ಕೇಳಿ ವಿನಾಕಾರಣ ಅವರಿಗೆ ತೊಂದರೆ ನೀಡಿದರೆ ತೀವ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಶಿಕ್ಷಕರ ಸಂಘದ ಸುಧೀಶ ನಾಯ್ಕ, ಎಂ.ಜಿ. ನಾಯ್ಕ ಇದ್ದರು.