ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

| Published : Nov 27 2024, 01:05 AM IST

ಸಾರಾಂಶ

ಪಟ್ಟಣದ ವಿದ್ಯಾನಂದ ಗುರುಕುಲದ ಅಂದಾನಪ್ಪ ಹೊಸಮನಿ ಗ್ರಾಮೀಣ ಪ್ರಥಮ ದರ್ಜೆ ಕಾಲೇಜಿನಲ್ಲಿ ಸರಿಯಾಗಿ ಶಿಕ್ಷಣ ನೀಡುತ್ತಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕುಕನೂರು

ಪಟ್ಟಣದ ವಿದ್ಯಾನಂದ ಗುರುಕುಲದ ಅಂದಾನಪ್ಪ ಹೊಸಮನಿ ಗ್ರಾಮೀಣ ಪ್ರಥಮ ದರ್ಜೆ ಕಾಲೇಜಿನಲ್ಲಿ ಸರಿಯಾಗಿ ಶಿಕ್ಷಣ ನೀಡುತ್ತಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಪ್ರಾಚಾರ್ಯರರು ಸೇರಿದಂತೆ ಸಂಪೂರ್ಣ ಆಡಳಿತ ಮಂಡಳಿಯವರು ವಿಫಲರಾಗಿದ್ದಾರೆ. ಕಾಲೇಜಿನಲ್ಲಿ ಬಿಎ, ಬಿಕಾಂ ಕೋರ್ಸ್ ಇದ್ದು, ನೂರಾರು ವಿದ್ಯಾರ್ಥಿಗಳು ಶಿಕ್ಷಣಕ್ಕೆಂದು ಕಾಲೇಜಿಗೆ ಪ್ರವೇಶ ಪಡೆದರೆ ಪ್ರತಿನಿತ್ಯ ಒಂದಿಲ್ಲ ಒಂದು ಸಮಸ್ಯೆಯಿಂದ ಇಲ್ಲಿ ನಾವು ಅಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರವೇಶಕ್ಕೆ ಪ್ರತಿಯೊಬ್ಬ ವಿದ್ಯಾರ್ಥಿಗಳಿಂದ ₹೮ ರಿಂದ ೯ ಸಾವಿರ ಶುಲ್ಕ ಪಡೆಯುತ್ತಾರೆ., ಶುಲ್ಕಕ್ಕೆ ತಕ್ಕಂತೆ ಪುಸ್ತಕ, ಗ್ರಂಥಾಲಯ, ಕಂಪ್ಯೂಟರ್ ಇತರೆ ಸೌಲಭ್ಯ ನೀಡುತ್ತಿಲ್ಲ. ಬರಿ ೩ ಜನ ಶಿಕ್ಷಕರು ಇದ್ದಾರೆ. ಉಳಿದ ವಿಷಯಗಳನ್ನು ನಾವೇ ಓದಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಬರುವ ೩ ಜನ ಶಿಕ್ಷಕರಿಗೆ ೬ ತಿಂಗಳಿಂದ ವೇತನ ಬಿಡುಗಡೆ ಮಾಡಿಲ್ಲ. ಅವರಿಗೆ ಜೀವನ ನಡೆಸಲು ತುಂಬಾ ಸಮಸ್ಯೆಯಾಗಿದೆ. ಕಾಲೇಜಿನಲ್ಲಿ ಎನ್‌ಎಸ್‌ಎಸ್, ಕ್ರೀಡಾಕೂಟಕ್ಕೆ ಅನುದಾನ ಬಂದರು ಯಾವುದೇ ಕಾರ್ಯಕ್ರಮ ಮಾಡುತ್ತಿಲ್ಲ. ಇದಕ್ಕೆ ಸಂಬಂಧಿಸಿದ ಮೇಲಾಧಿಕಾರಿಗಳು ನಮ್ಮ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು ಎಚ್ಚರಿಸಿದರು.