ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಗಳು ಕಾವಲುಗಾರ ಎಚ್.ಎಂ. ಸಿದ್ದಲಿಂಗಸ್ವಾಮಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಕಂಪ್ಲಿ: ಸಮೀಪದ ಪಂಪಾವಿದ್ಯಾಪೀಠದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಹೊರಗುತ್ತಿಗೆ ಕಾವಲುಗಾರನ ಅಸಭ್ಯ ವರ್ತನೆ ಖಂಡಿಸಿ ಶಾಲೆಯ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಸೋಮವಾರ ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಗಳು ಕಾವಲುಗಾರ ಎಚ್.ಎಂ. ಸಿದ್ದಲಿಂಗಸ್ವಾಮಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕಾವಲುಗಾರ ರಾತ್ರಿ ವೇಳೆಯಲ್ಲಿ ವಸತಿ ನಿಲಯದಲ್ಲಿ ಮಲಗಿರುವ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಿಸುವುದು, ಮುಖಕ್ಕೆ ವಿಭೂತಿ ಹಾಗೂ ಕರಿಮಸಿ ಬಳಿದುಕೊಂಡು ವಿದ್ಯಾರ್ಥಿನಿಯರ ವಸತಿ ಗೃಹದ ಕಿಟಕಿ, ಬಾಗಿಲುಗಳ ಬಳಿ ತೆರಳಿ ಅವರನ್ನು ಹೆದರಿಸುವುದು, ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ದೂರಿದರು.ಸಂಜೆ ವೇಳೆ ಮದ್ಯಪಾನ, ಧೂಮಪಾನ ಮಾಡಿ ಶಾಲಾ ಆವರಣದಲ್ಲಿ ಅಸಭ್ಯ ವರ್ತನೆ ತೋರುವುದು, ಶಿಕ್ಷಕರು, ಪ್ರಾಚಾರ್ಯರು ಹಾಗೂ ವಿದ್ಯಾರ್ಥಿಗಳನ್ನು ಏಕವಚನದಲ್ಲಿ, ಅವಾಚ್ಯ ಶಬ್ದಗಳಿಂದ ನಿಂದಿಸುವುದು ಸಾಮಾನ್ಯವಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪೋಷಕರಾದ ಪ್ರಶಾಂತ ದೂಪದ, ಎ.ಜಿ. ತಿಪ್ಪೇಸ್ವಾಮಿ, ವಿರೂಪಾಕ್ಷಗೌಡ, ಡಾ. ಸಿದ್ದಲಿಂಗಸ್ವಾಮಿ ಅರಳೆಲೆಮಠ, ರಾಜಾರಾಮ ಚಿತ್ರಗಾರ ಹಾಗೂ ದೇವರಾಜ ಮಾತನಾಡಿ, ಶಾಲೆಗೆ ಭೇಟಿ ನೀಡುವ ಪಾಲಕರಿಂದ ಹಣ ಕೇಳುವುದು ಸೇರಿದಂತೆ ಹಲವು ದೂರುಗಳು ಕಾವಲುಗಾರ ವಿರುದ್ಧ ಕೇಳಿಬಂದಿವೆ. ಹಗಲು ವೇಳೆಯ ಕಾವಲುಗಾರನಾಗಿರುವ ವ್ಯಕ್ತಿ ರಾತ್ರಿ ವೇಳೆ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ತಂಗಲು ಅವಕಾಶ ನೀಡಿರುವುದು ಏಕೆ ಎಂಬ ಪ್ರಶ್ನೆ ಎತ್ತಿದರು.ಇದೇ ವೇಳೆ ಕಾವಲುಗಾರ ತನ್ನ ಹೋಮ್‌ಗಾರ್ಡ್ ಕರ್ತವ್ಯದ ನೆಪದಲ್ಲಿ ತಾನಿಲ್ಲದ ಸಂದರ್ಭಗಳಲ್ಲಿ ತನ್ನ ಪತ್ನಿಯನ್ನು ಶಾಲೆಯಲ್ಲೇ ಇರಿಸುತ್ತಿದ್ದಾನೆ. ಈ ಬಗ್ಗೆ ಪ್ರಶ್ನಿಸಿದಾಗ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿರುವುದಾಗಿ ಪೋಷಕರು ಆರೋಪಿಸಿದರು. ವಿದ್ಯಾರ್ಥಿನಿಯರ ಸುರಕ್ಷತೆ ಹಾಗೂ ಹಿತದೃಷ್ಟಿಯಿಂದ ತಕ್ಷಣವೇ ಕಾವಲುಗಾರನನ್ನು ಶಾಲೆಯಿಂದ ತೆರವುಗೊಳಿಸಿ, ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನನ್ನ ವಿರುದ್ಧ ಪಿತೂರಿ: ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಕಾವಲುಗಾರ ಎಚ್. ಸಿದ್ದಲಿಂಗಯ್ಯಸ್ವಾಮಿ, ತನ್ನ ವಿರುದ್ಧ ಮಾಡಲಾಗಿರುವ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದರು. ಶಾಲೆಯ ಪ್ರಾಚಾರ್ಯರು, ಕೆಲ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿ ತನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.ಕಳೆದ 18 ವರ್ಷಗಳಿಂದ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕಾವಲುಗಾರನ ಕರ್ತವ್ಯಗಳ ಜತೆ ಶಾಲೆಯ ವಿವಿಧ ಕೆಲಸಗಳನ್ನು ನಿರ್ವಹಿಸುತ್ತಿದ್ದೇನೆ. ನನ್ನ ಪತ್ನಿ ಪಲ್ಲವಿಯನ್ನು ಹೊರಗುತ್ತಿಗೆ ಆಧಾರದಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ನೇಮಕ ಮಾಡುವ ವಿಚಾರದಲ್ಲಿ ಒಂದು ₹1ಲಕ್ಷ ಬೇಡಿಕೆ ಇಡಲಾಗಿತ್ತು. ಅದನ್ನು ನೀಡದ ಕಾರಣ ಹಾಗೂ ಶಾಲೆಯ ಕೆಲ ಅವ್ಯವಹಾರಗಳ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದ ಕಾರಣಕ್ಕೆ ತನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ ಎಂದು ದೂರಿದರು.
ಆರೋಪಗಳಲ್ಲಿ ಸತ್ಯಾಂಶವಿಲ್ಲ: ಕಾವಲುಗಾರನ ವರ್ತನೆ ಕುರಿತು ವಿದ್ಯಾರ್ಥಿಗಳು ಹಾಗೂ ಪೋಷಕರು ನೀಡಿರುವ ದೂರುಗಳನ್ನು ಸಂಬಂಧಿಸಿದ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ತಮ್ಮ ವಿರುದ್ಧ ಕಾವಲುಗಾರ ಮಾಡಿರುವ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎನ್ನುತ್ತಾರೆ ಶಾಲೆಯ ಪ್ರಾಚಾರ್ಯ ಮರಿಯಪ್ಪ ತಳವಾರ.