ಬಸ್‌ ಸೌಲಭ್ಯಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

| Published : Dec 10 2024, 12:32 AM IST

ಸಾರಾಂಶ

ಗ್ರಾಮೀಣ ಪ್ರದೇಶಗಳಲ್ಲಿ ಬಸ್‌ಗಳ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಅದರಲ್ಲೂ ಪ್ರತಿನಿತ್ಯ ಶಾಲೆ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಬಸ್​ ಸಮಸ್ಯೆಯಾದರೆ ಅವರು ತರಗತಿಗೂ ಹೋಗುವುದಾದೂ ಹೇಗೆ. ಅದೇ ರೀತಿ ಸಾರ್ವಜನಿಕರಿಗೂ ಅದರಲ್ಲೂ ವಯೋ ವೃದ್ಧರು ಆಸ್ಪತ್ರೆಗೆ ತೆರಳಲು ಸಮಸ್ಯೆ ಎದುರಾಗಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಶಾಲಾ ಕಾಲೇಜು ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಶಾಲಾ- ಕಾಲೇಜುಗಳಿಗೆ ತೆರಳಲು ಬಸ್ ನಿಲ್ಲಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೋಮವಾರ ಬೆಳಗ್ಗೆ ತಾಲೂಕಿನ ಅರೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಕೆಎಸ್ಆರ್ ಟಿಸಿ ಬಸ್ಸುಗಳನ್ನು ತಡೆದು ದಿಢೀರ್ ಪ್ರತಿಭಟನೆ ನಡೆಸಿದರು. ಶಕ್ತಿ ಯೋಜನೆಯ ಬಿಸಿ

ಶಕ್ತಿ ಯೋಜನೆ ಜಾರಿ ಬಳಿಕ ಉಚಿತ ಬಸ್​ ಪ್ರಯಾಣದ ಬಿಸಿ ವಿದ್ಯಾರ್ಥಿಗಳಿಗೆ ಸಾಕಷ್ಟು ಬಾರಿ ತಟ್ಟಿದೆ. ಈ ಬಸ್ ಸಮಸ್ಯೆಯಿಂದ ರೋಸಿಹೋದ ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಚಿಕ್ಕಬಳ್ಳಾಪುರದತ್ತ ಸಂಚರಿಸುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಗಳನ್ನು ತಡೆದು ಪ್ರತಿಭಟನೆ ಮಾಡಿದರು. ನಮಗೆ ಸಮರ್ಪಕ ಬಸ್ ಸೇವೆ ನೀಡಬೇಕೆಂದು ಒತ್ತಾಯಿಸಿ, ಬೇಕೇ ಬೇಕು ಬಸ್ ಬೇಕು ಎಂದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳಿಗೆ ಗ್ರಾಮಸ್ಥರು ಸಾಥ್ ನೀಡಿದರು.​

ತರಗತಿಗೆ ತೆರಳಲು ವಿಳಂಬ

ಈ ವೇಳೆ ಮಾತನಾಡಿದ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳಲ್ಲಿ ಬಸ್‌ಗಳ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಅದರಲ್ಲೂ ಪ್ರತಿನಿತ್ಯ ಶಾಲೆ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಬಸ್​ ಸಮಸ್ಯೆಯಾದರೆ ಅವರು ತರಗತಿಗೂ ಹೋಗುವುದಾದೂ ಹೇಗೆ. ಅದೇ ರೀತಿ ಸಾರ್ವಜನಿಕರಿಗೂ ಅದರಲ್ಲೂ ವಯೋ ವೃದ್ಧರು ಆಸ್ಪತ್ರೆಗೆ ತೆರಳಲು ಸಮಸ್ಯೆ ಎದುರಾಗಿದೆ ಎಂದರು.

ಪಕ್ಕದ ಪೆರೇಸಂದ್ರ, ಅರೂರು ಮತ್ತಿತರ ಗ್ರಾಮಗಳಲ್ಲಿಯೂ ಪ್ರತಿದಿನ ಕೆಎಸ್ಆರ್ ಟಿಸಿ ಬಸ್ ಗಳು ಬರುತ್ತವೆ. ಬಸ್ಸಿನಲ್ಲಿ ನಿಲ್ಲಲು ಸಾಕಷ್ಟು ಜಾಗವಿದ್ದರೂ ಕೇವಲ ನಾಲ್ಕೈದು ಜನ ಹತ್ತುವಷ್ಟರಲ್ಲೆ ಬಸ್ ಚಲಾಯಿಸುತ್ತಾರೆ. ವಿದ್ಯಾರ್ಥಿಗಳು ಮಾತ್ರವಲ್ಲ ಸಾರ್ವಜನಿಕರಿಗೂ ಇದರಿಂದ ತೊಂದರೆಯಾಗುತ್ತಿದೆ. ಆದ್ದರಿಂದ ಸಂಬಂಧಿಸಿದ ಸಾರಿಗೆ ಅಧಿಕಾರಿಗಳು ಹೆಚ್ಚಿನ ಬಸ್ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿದ್ಯಾರ್ಥಿಗಳ ಮನವೊಲಿಕೆಗೆ ಯತ್ನ

ಸ್ಥಳಕ್ಕೆ ಆಗಮಿಸಿದ ಪೊಲೀಸರು, ಸಾರಿಗೆ ಬಸ್ಸುಗಳನ್ನು ತಡೆದು ಪ್ರತಿಭಟನೆ ನಡೆಸಬಾರದೆಂದು ಎಚ್ಚರಿಕೆ ನೀಡಿದರು. ಆದರೂ ಪೊಲೀಸರ ಎಚ್ಚರಿಕೆಗೆ ಜಗ್ಗದ ವಿದ್ಯಾರ್ಥಿಗಳು, ರಾಷ್ಟ್ರೀಯ ಹೆದ್ದಾರಿ 44 ರಲ್ಲಿ 10ಮಕ್ಕೂ ಹೆಚ್ಚು ಸಾರಿಗೆ ಬಸ್ ಗಳ ತಡೆದು ಪ್ರತಿಭಟನೆ ಮುಂದುವರೆಸಿದರು. ಬಳಿಕ ಸ್ಥಳಕ್ಕೆ ಬಂದ ಸಾರಿಗೆ ಅಧಿಕಾರಿಗಳು ಮತ್ತು ಪೊಲೀಸರು ವಿದ್ಯಾರ್ಥಿಗಳ ಮನವೊಲಿಸುವಲ್ಲಿ ಯಶಸ್ವಿಯಾದರು.