ವಡ್ಡರಹಟ್ಟಿಯಲ್ಲಿ ಬಸ್ ನಿಲುಗಡೆಗೆ ಒತ್ತಾಯ, ವಿದ್ಯಾರ್ಥಿಗಳ ಪ್ರತಿಭಟನೆ

| Published : Nov 22 2024, 01:17 AM IST

ವಡ್ಡರಹಟ್ಟಿಯಲ್ಲಿ ಬಸ್ ನಿಲುಗಡೆಗೆ ಒತ್ತಾಯ, ವಿದ್ಯಾರ್ಥಿಗಳ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ಎಲ್ಲ ಬಸ್‌ಗಳನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ನಾಗರಿಕ ಸಮಿತಿ ನೇತೃತ್ವದಲ್ಲಿ ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು.

ನಾಗರಿಕ ಸಮಿತಿ ನೇತೃತ್ವದಲ್ಲಿ ಬಸ್ ಸಂಚಾರ ತಡೆ, ಆಕ್ರೋಶ

ಕನ್ನಡಪ್ರಭ ವಾರ್ತೆ ಗಂಗಾವತಿ

ತಾಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ಎಲ್ಲ ಬಸ್‌ಗಳನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ನಾಗರಿಕ ಸಮಿತಿ ನೇತೃತ್ವದಲ್ಲಿ ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು.

ವಡ್ಡರಹಟ್ಟಿ ಗ್ರಾಮದಲ್ಲಿ ಜನಸಂಖ್ಯೆ ಹೆಚ್ಚಿದ್ದರೂ ಸರಿಯಾದ ಬಸ್ ಸೌಲಭ್ಯ ಇಲ್ಲ. ಯಾವುದೇ ಬಸ್ ನಿಲುಗಡೆ ಮಾಡುತ್ತಿಲ್ಲ. ಯಲಬುರ್ಗಾ, ಕುಷ್ಟಗಿ, ಕೂಕನೂರಿಂದ ಬರುವ ಹಳ್ಳಿ ಮಾರ್ಗದ ಬಸ್‌ಗಳು ಪ್ರಯಾಣಿಕರನ್ನು ತುಂಬಿಕೊಂಡು ಬರುತ್ತಿದ್ದರಿಂದ ಗ್ರಾಮದಲ್ಲಿ ನಿಲ್ಲಿಸುವುದಿಲ್ಲ. ಕೊಪ್ಪಳ-ಗಂಗಾವತಿ ಮುಖ್ಯರಸ್ತೆಯಲ್ಲಿ ವಡ್ಡರಹಟ್ಟಿ ಗ್ರಾಮ ಇದ್ದು, ಗಂಗಾವತಿ ಹತ್ತಿರದಲ್ಲೇ ಇದ್ದರೂ ಸರಿಯಾದ ಬಸ್ ವ್ಯವಸ್ಥೆ ಇಲ್ಲ‌. ರಾಯಚೂರು, ಕೊಪ್ಪಳ, ಗಂಗಾವತಿ ಡಿಫೋ ಬಸ್‌ಗಳು ಗ್ರಾಮದಲ್ಲಿ ನಿಲುಗಡೆ ಮಾಡುತ್ತಿಲ್ಲ. ವಿದ್ಯಾರ್ಥಿಗಳು ನಿತ್ಯ ಖಾಸಗಿ ವಾಹನಕ್ಕೆ ಹೆಚ್ಚುವರಿ ಹಣ ನೀಡಿ ಗಂಗಾವತಿ ಕಾಲೇಜುಗಳಿಗೆ ತೆರಳಬೇಕಿದೆ ಎಂದು ಸಮಿತಿಯ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದಿಂದ ನೂರಾರು ವಿದ್ಯಾರ್ಥಿಗಳು ಗಂಗಾವತಿ ಹಾಗೂ ಕೊಪ್ಪಳ ಕಾಲೇಜಿಗೆ ತೆರಳುತ್ತಾರೆ. ಬಸ್ ಸಮಸ್ಯೆಯಿಂದ ವಿದ್ಯಾರ್ಥಿಗಳ ಕಾಲೇಜು ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ವೆಂಕಟಗಿರಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮನವಿ ಸಲ್ಲಿಸಿದರೂ, ಬಸ್‌ ನಿಲುಗಡೆ ಆಗುತ್ತಿಲ್ಲ. ವಡ್ಡರಹಟ್ಟಿ ಗ್ರಾಮದಲ್ಲಿ 15 ಸಾವಿರ ಜನಸಂಖ್ಯೆ ಇದ್ದು, ಬಸ್ ಸಮಸ್ಯೆಯಿಂದ ಖಾಸಗಿ ವಾಹನದಲ್ಲಿ ಓಡಾಡುವಂತಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಪರ್ಕದ ಎಲ್ಲ ಬಸ್‌ಗಳು ಹಾಗೂ ಕೊಪ್ಪಳ, ಗಂಗಾವತಿ, ರಾಯಚೂರು ಘಟಕದ ಎಲ್ಲ ಬಸ್‌ಗಳು ಗ್ರಾಮದಲ್ಲಿ ನಿಲುಗಡೆಗೆ ಮೇಲಧಿಕಾರಿಗಳು ಕ್ರಮವಹಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆ ಬಂದ್ ಮಾಡಿ ಎಲ್ಲ ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ನಾಗರಿಕ ಸಮಿತಿಯ ಸದಸ್ಯರು ಎಚ್ಚರಿಸಿದರು.

ಕೈ ಮುಗಿದ ವಿದ್ಯಾರ್ಥಿನಿಯರು:

ವಡ್ಡರಹಟ್ಟಿಯಲ್ಲಿ ಬಸ್ ನಿಲುಗಡೆಗಾಗಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಒಬ್ಬರನ್ನು ಕಳೆದ ಎರಡು ದಿನದಿಂದ ಗ್ರಾಮಕ್ಕೆ ನಿಯೋಜನೆ ಮಾಡಿದ್ದರೂ, ಬಸ್‌ ನಿಲುಗಡೆ ಆಗುತ್ತಿಲ್ಲ. ಕಾಲೇಜು ವಿದ್ಯಾರ್ಥಿನಿಯರು ಸಿಬ್ಬಂದಿಗೆ ಕೈ ಮುಗಿದು, ನಾವು ಬಡವರು, ನಿತ್ಯ ಕಾಲೇಜಿಗೆ ಹೋಗಿ ಬರಲು ₹40-50 ಖಾಸಗಿ ವಾಹನಕ್ಕೆ ನೀಡಬೇಕು‌. ದಯಮಾಡಿ ನಮಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಕೋರಿದರು‌.

ಗ್ರಾಪಂ ಸದಸ್ಯರಾದ ಮೇರಾಜ್ ದಳಪತಿ, ವಡ್ಡರಹಟ್ಟಿ ನಾಗರಿಕ ಸಮಿತಿಯ ಹರನಾಯಕ, ವೆಂಕಟೇಶ ತಳವಾರ, ಲಕ್ಷ್ಮಣ್ ವದ್ದಟ್ಟಿ, ಹನುಮಂತಪ್ಪ, ಯರಿಸ್ವಾಮಿಗೌಡ, ಶಿವರಾಜ ಡಂಬರ್, ಹುಲಗಪ್ಪ ಸಿರವಾರ, ಬಾರೀಮ್ ಸಾಬ್, ದಾವಲ್ ಸಾಬ್ ಮುಲ್ಲಾರ್, ಯಮನೂರಪ್ಪ, ನೀಲಪ್ಪ ದೋಟಿಹಾಳ, ಹನುಮೇಶ ಬಳ್ಳಾರಿ, ಖಾಸೀಂಸಾಬ್ ಕೃಷ್ಣಾಪುರ ಹಾಗೂ ಕಾಲೇಜು ವಿದ್ಯಾರ್ಥಿಗಳು ಇದ್ದರು.