ಡಂಬಳ: ಅಕ್ಷರ ದಾಸೋಹ ಸಿಬ್ಬಂದಿ ಕೊರತೆ ಹಾಗೂ ಇರುವ ಸಿಬ್ಬಂದಿ ಗೈರು ಹಾಜರಾಗಿದ್ದರಿಂದ ಬಿಸಿಯೂಟ ಸಿಗದೇ 200ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿರುವ ಘಟನೆ ಮುಂಡರಗಿ ತಾಲೂಕಿನ ಬರದೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದಿದೆ.

ಈ ಶಾಲೆಯಲ್ಲಿ ಒಟ್ಟು 207 ವಿದ್ಯಾರ್ಥಿಗಳಿದ್ದಾರೆ. ನಿಯಮದ ಪ್ರಕಾರ ಇಲ್ಲಿ ಮೂವರು ಅಡುಗೆ ಸಿಬ್ಬಂದಿ ಇರಬೇಕು. ಆದರೆ, ಇಬ್ಬರು ಸಿಬ್ಬಂದಿ ನಿವೃತ್ತಿ ಹೊಂದಿ ಎರಡು ವರ್ಷ ಕಳೆದಿದ್ದರೂ ಅವರ ಸ್ಥಾನಕ್ಕೆ ಹೊಸಬರ ನೇಮಕವಾಗಿಲ್ಲ. ಕಳೆದ ಎರಡು ವರ್ಷಗಳಿಂದ ಒಬ್ಬರೇ ಅಡುಗೆ ಸಿಬ್ಬಂದಿ 200 ಮಕ್ಕಳ ಜವಾಬ್ದಾರಿ ಹೊತ್ತಿದ್ದರು. ಆಕಸ್ಮಿಕವಾಗಿ ಸೋಮವಾರ ಆ ಸಿಬ್ಬಂದಿಯೂ ಆರೋಗ್ಯದ ಕಾರಣದಿಂದ ಕೆಲಸಕ್ಕೆ ಬಾರದಿದ್ದಾಗ, ಇಡೀ ಬಿಸಿಯೂಟ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.

​ಖಾಲಿ ತಟ್ಟೆ ಹಿಡಿದು ಘೋಷಣೆ: ​ಮಧ್ಯಾಹ್ನ 1 ಗಂಟೆಯಾದರೂ ಶಾಲೆಗೆ ಊಟ ತಯಾರಾಗಿರಲಿಲ್ಲ. ಹಸಿವಿನಿಂದ ಕಂಗಾಲಾದ ಪುಟ್ಟ ಕಂದಮ್ಮಗಳು ಕೈಯಲ್ಲಿ ಖಾಲಿ ತಟ್ಟೆಗಳನ್ನು ಹಿಡಿದು ಶಾಲೆಯ ಮುಂದೆ ಸಾಲುಗಟ್ಟಿ ನಿಂತು ಊಟ ಬೇಕು.. ಊಟ ಬೇಕು. ಎಂದು ಘೋಷಣೆ ಕೂಗಿದರು. ಮಕ್ಕಳ ಈ ಆಕ್ರಂದನ ಕಂಡು ಗ್ರಾಮಸ್ಥರ ಮನಸ್ಸು ಕರಗಿದ್ದು, ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಸರ್ಕಾರ ಅಕ್ಕಿ- ಬೇಳೆ ಕೊಡುತ್ತಿದೆ. ಆದರೆ ಅದನ್ನು ಬೇಯಿಸಿ ಬಡಿಸಲು ಸಿಬ್ಬಂದಿ ಇಲ್ಲದ ಮೇಲೆ ಈ ಯೋಜನೆಗೆ ಬೆಲೆ ಎಲ್ಲಿದೆ? ಎಂದು ಪೋಷಕರು ಪ್ರಶ್ನಿಸಿದ್ದಾರೆ. ಎರಡು ವರ್ಷಗಳಿಂದ ಸಿಬ್ಬಂದಿ ಕೊರತೆ ಇರುವುದು ತಿಳಿದಿದ್ದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಯಾಕೆ ಎಂದು ಸಾರ್ವಜನಿಕರ ಪ್ರಶ್ನಿಸಿದರು.

ವಿಷಯ ತಿಳಿದ ತಾಲೂಕು ಅಕ್ಷರದಾಸೋಹದ ಸಹಾಯಕ ನಿರ್ದೇಶಕ ಎಸ್.ವಿ. ವಿಭೂತಿ ಅವರು ಶಾಲೆಗೆ ಆಗಮಿಸಿ ಸಮಸ್ಯೆ ಪರಿಹರಿಸಿದ್ದು, ಶಾಲೆಯಲ್ಲಿ ಮತ್ತೆ ಬಿಸಿಯೂಟ ಪ್ರಾರಂಭಗೊಂಡಿದೆ.


ತಾತ್ಕಾಲಿಕವಾಗಿ ನೇಮಕ: ಕಳೆದ ಎರಡು ವರ್ಷದಿಂದ ಎರಡು ಅಡುಗೆ ಸಹಾಯಕರ ಹುದ್ದೆ ಖಾಲಿ ಇವೆ. ನೇಮಕ ಮಾಡಿಕೊಳ್ಳುವಂತೆ ಗ್ರಾಮ ಪಂಚಾಯಿತಿ ಹಾಗೂ ಎಸ್ಡಿಎಂಸಿ ಪದಾಧಿಕಾರಿಗಳಿಗೂ ತಿಳಿಸಿದ್ದೇನೆ. ಆದರೆ ನೇಮಕ ಮಾಡಿಕೊಂಡಿಲ್ಲ. ಇಒ ವಿಶ್ವನಾಥ ಹೊಸಮನಿ ಅವರು ಅರ್ಜಿ ಸಲ್ಲಿಸಿದ 27 ಅಭ್ಯರ್ಥಿಗಳ ಪೈಕಿ ಅರ್ಹ ದಾಖಲೆ ಪರಿಶೀಲಿಸಿ ತಾತ್ಕಾಲಿಕವಾಗಿ ಇಬ್ಬರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಹೊಸದಾಗಿ ನೇಮಕವಾದ ಅಡುಗೆ ಸಹಾಯಕರ ಮೂಲಕ ಅಡುಗೆ ಮಾಡಿಸಿ ಮಕ್ಕಳಿಗೆ ಊಟ ನೀಡಲಾಗಿದೆ ಎಂದು ತಾಲೂಕು ಅಕ್ಷರದಾಸೋಹದ ಸಹಾಯಕ ನಿರ್ದೇಶಕ ಎಸ್.ವಿ. ವಿಭೂತಿ ತಿಳಿಸಿದರು.