ನಿತ್ಯ ಪಟ್ಟಣಕ್ಕೆ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೊಳಗುಂದಿ ಗ್ರಾಮದಿಂದ ಶಾಲಾ ಕಾಲೇಜುಗಳಿಗೆ ಹೋಗುತ್ತಿದ್ದಾರೆ

ಹೂವಿನಹಡಗಲಿ: ಗ್ರಾಮೀಣ ಪ್ರದೇಶದಿಂದ ಪಟ್ಟಣದ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಹೋಗಲು ಪ್ರತ್ಯೇಕ ಬಸ್ಸಿನ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಬಸ್‌ ತಡೆದು ಪ್ರತಿಭಟನೆ ಮಾಡಿದ ಘಟನೆ ಹೊಳಗುಂದಿ ಬಾವಿಹಳ್ಳಿ ಗ್ರಾಮದಲ್ಲಿ ಜರುಗಿದೆ.

ಶಕ್ತಿ ಯೋಜನೆಯಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಹಳಷ್ಟು ಸಮಸ್ಯೆಯಾಗಿದೆ. ಪ್ರತ್ಯೇಕ ಬಸ್ಸಿನ ವ್ಯವಸ್ಥೆ ಮಾಡಬೇಕು, ನಿತ್ಯ ಬಸ್ಸಿನ ಕಿರಿಕಿರಿ ಹೆಚ್ಚಾಗಿದೆ. ಬಸ್ಸಿನ ಬಾಗಿಲಿಗೆ ಜೋತು ಬಿದ್ದು ಪ್ರಯಾಣಿಸುವ ಪರಿಸ್ಥಿತಿ ಇದೆ. ಈ ವೇಳೆ ಗ್ರಾಮಸ್ಥರು ಸಹ ಸಹಕಾರ ನೀಡಿ ಬಸ್‌ ನಿಲ್ಲಿಸಿ ಸಾರಿಗೆ ವ್ಯವಸ್ಥಾಪಕರಿಗೆ ದೂರವಾಣಿ ಮೂಲಕ ಮಾತನಾಡಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಬಸ್‌ ಬಿಡುವಂತೆ ಮನವಿ ಮಾಡಿದರು.

ನಿತ್ಯ ಪಟ್ಟಣಕ್ಕೆ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೊಳಗುಂದಿ ಗ್ರಾಮದಿಂದ ಶಾಲಾ ಕಾಲೇಜುಗಳಿಗೆ ಹೋಗುತ್ತಿದ್ದಾರೆ. ಪ್ರತ್ಯೇಕ ಬಸ್ ಬಿಡಬೇಕು ಇಲ್ಲದಿದ್ದರೇ ಈ ಮಾರ್ಗದಿಂದ ಸಂಚರಿಸುವ ಎಲ್ಲ ಬಸ್‌ ತಡೆದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಾರಿಗೆ ವ್ಯವಸ್ಥಾಪಕರು ಕರೆ ಮಾಡಿದಾಗ ಬಸ್‌ ಬಿಡುವ ವ್ಯವಸ್ಥೆ ಮಾಡುತ್ತೇವೆಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯಿಂದ ಹಿಂದೆ ಸರಿದರು.

ಈ ಸಂದರ್ಭದಲ್ಲಿ ಪ್ರಕಾಶ, ಎಚ್.ಕರಿಬಸಪ್ಪ, ಪ್ರಶಾಂತ, ಪ್ರವೀಣ, ಕೆ.ಕೆ.ರಾಜ್, ಎಂ.ಎಸ್.ವಿಜಯ ಲಕ್ಷ್ಮಿ, ಲತಾ, ಮಾನಸ, ಚಂದ್ರಮ್ಮ, ಜಯಶ್ರೀ, ತೇಜು ಸೇರಿದಂತೆ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿದ್ದರು.