ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಸಿ
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯಾರಣ್ಯಾಧಿಕಾರಿ ಹುದ್ದೆ ನೇರ ನೇಮಕಾತಿಯಲ್ಲಿ ಬಿಎಸ್ಸಿ ಅರಣ್ಯ ಶಾಸ್ತ್ರ ಪದವಿಯನ್ನೇ ಕನಿಷ್ಠ ವಿದ್ಯಾರ್ಹತೆಯನ್ನಾಗಿ ಮಾಡುವಂತೆ ಆಗ್ರಹಿಸಿ, ನಗರದ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದೆ.ತರಗತಿ ಬಹಿಷ್ಕರಿಸಿ, ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಂಡ ವಿದ್ಯಾರ್ಥಿಗಳು, ಎರಡನೇ ದಿನ ಅಣಕು ಶವಯಾತ್ರೆ ನಡೆಸಿ, ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.
ಕಾಲೇಜಿನ ಮೈದಾನದಲ್ಲಿ ಅಣಕು ಶವ ಇಟ್ಟು ಅದರ ಎದುರುಗಡೆ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಕುಳಿತು ಕಣ್ಣೀರು ಸುರಿಸಿ, ಸರ್ಕಾರದ ನೀತಿ ಖಂಡಿಸಿ, ಆಕ್ರೋಶ ವ್ಯಕ್ತಪಡಿಸಿದರು.ಅಣಕು ಶವಯಾತ್ರೆಯ ಉದ್ದೇಶವು ಸರ್ಕಾರವು ಆದೇಶ ಬದಲಾಯಿಸದಿದ್ದರೆ ಮತ್ತು ಸ್ಪಂದಿಸದಿದ್ದರೆ ಅರಣ್ಯ ವಿದ್ಯಾರ್ಥಿಗಳಿಗೆ ಮುಂದೆಯೂ ಇದೇ ಪರಿಸ್ಥಿತಿ ಬರುತ್ತದೆ. ಓದಿಗೆ ಬೆಲೆ ಇಲ್ಲದೇ ಮುಂದೊಂದು ದಿನ ಅರಣ್ಯ ವಿದ್ಯಾರ್ಥಿಗಳ ಭವಿಷ್ಯ ಈ ರೀತಿ ಆಗಲಿದೆ. ಶವರ ಮುಂದೆ ಕಣ್ಣೀರಿಡುವ ಸ್ಥಿತಿ ನಿರ್ಮಾಣವಾಗಲಿದ್ದು, ರಾಜ್ಯ ಸರ್ಕಾರ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಅರಣ್ಯಶಾಸ್ತ್ರ ವಿದ್ಯಾರ್ಥಿಗಳ ರೋಧನ ಆಲಿಸಿ, ಅರಣ್ಯಶಾಸ್ತ್ರ ಪದವಿಯನ್ನೇ ಕನಿಷ್ಠ ವಿದ್ಯಾರ್ಹತೆಯನ್ನಾಗಿ ಮಾಡಬೇಕೆಂದು ಶಿರಸಿ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಒತ್ತಾಯಿಸಿದರು.ಆರೋಗ್ಯ ತಪಾಸಣೆಗೆ ಬಂದ ಆರೋಪಿ ಪರಾರಿ:
ಕಳುವು ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾದ ಆರೋಪಿಗಳನ್ನು ಪೊಲೀಸರು ಆಸ್ಪತ್ರೆಗೆ ಆರೋಗ್ಯ ತಪಾಸಣೆಗೆ ಕರೆತಂದ ವೇಳೆ ಓರ್ವ ಆರೋಪಿ ತಪ್ಪಿಸಿಕೊಂಡ ಪರಾರಿಯಾದ ಘಟನೆ ಕುಮಟಾ ಪಟ್ಟಣದ ತಾಲೂಕಾಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಭಟ್ಕಳದ ಜಾಲಿಯ ತಗ್ಗರಗೋಡದ ಭದ್ರಿಯಾ ಕಾಲನಿಯ ನಿವಾಸಿ ಆಟೋ ಚಾಲಕ ವೃತ್ತಿಯ ಫೌಜಾನ್ ಮುಷ್ತಾಕ್ ಅಹಮದ್(೨೦) ಪರಾರಿಯಾದ ಆರೋಪಿ.ಇತ್ತೀಚೆಗೆ ಪಟ್ಟಣದಲ್ಲಿ ಅಂಗಡಿಯೊಂದರಿಂದ ಬ್ಯಾಟರಿಗಳನ್ನು ಕದ್ದ ಪ್ರಕರಣಕ್ಕೆ ಸಂಬಂಧಿಸಿ ಭಟ್ಕಳ ಜಾಲಿಯ ಫೌಜಾನ್ ಮುಷ್ತಾಕ್ ಅಹಮದ್, ಭಟ್ಕಳ ಗುಳ್ಮೆಯ ಅಬುಜಾರ್ ಕಾಲನಿಯ ಮಹಮದ್ ಸುಫಿಯಾನ ಸಾದಿಕ್ ಎಂಬ ಆರೋಪಿಗಳನ್ನು ತಾಲೂಕಾಸ್ಪತ್ರೆಗೆ ಆರೋಗ್ಯ ತಪಾಸಣೆಗಾಗಿ ಮೂವರು ಕಾನಸ್ಟೇಬಲ್‌ಗಳು ಕರೆತಂದಿದ್ದರು. ತಪಾಸಣೆ ಮುಗಿಸಿ ಮರಳುವಾಗ ಶೂ ಹಾಕುವ ನೆಪದಲ್ಲಿ ಬಗ್ಗಿದ ಆರೋಪಿ ಫೌಜಾನ್ ಮುಷ್ತಾಕ್ ಅಹಮದ್ ಒಮ್ಮೇಲೆ ಎದ್ದು ಕಾನಸ್ಟೇಬಲ್ ಆಂಜನೇಯ ವೀರಣ್ಣ ಸಣ್ಣಣ್ಣನವರ ಅವರ ಕೈಯಿಂದ ತಪ್ಪಿಸಿಕೊಂಡು ಆಸ್ಪತ್ರೆಯ ಕಾಂಪೌಂಡ್ ಹಾರಿ ಪರಾರಿಯಾಗಿದ್ದಾನೆ. ಆರೋಪಿಯನ್ನು ಬೆನ್ನಟ್ಟಿದ ಆಂಜನೇಯ ಕಾಂಪೌಂಡ್ ಹಾರಲು ಹೋಗಿ ಬಿದ್ದು ಸೊಂಟ ಹಾಗೂ ಕೈಕಾಲುಗಳಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಪರಾರಿಯಾದ ಆರೋಪಿಯ ಪತ್ತೆಗೆ ಪ್ರಯತ್ನ ಮುಂದುವರೆದಿದೆ. ಈ ಕುರಿತು ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.