ಸಾರಾಂಶ
ಹಾವೇರಿ: ದೇವಗಿರಿ ಗ್ರಾಮದ ವಸತಿನಿಲಯ ವಿದ್ಯಾರ್ಥಿಗಳು ಮೂಲ ಸೌಕರ್ಯ ಕಲ್ಪಿಸುವಂತೆ ಹಾಗೂ ಉತ್ತಮ ಗುಣಮಟ್ಟದ ಆಹಾರ ನೀಡುವಂತೆ ಒತ್ತಾಯಿಸಿ ಎಸ್ಎಫ್ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿರುವ ಬಿಸಿಎಂ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿನಿಲಯದ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಆಹಾರ ನೀಡುತ್ತಿಲ್ಲ. ಅಲ್ಲದೇ ಮೂಲ ಸೌಕರ್ಯಗಳಿಂದ ವಂಚನೆ ಮಾಡುತ್ತಿರುವುದು ಖಂಡನೀಯ. ಅನೇಕ ವಿದ್ಯಾರ್ಥಿಗಳಿಗೆ ಆಶ್ರಯವಾಗಿರುವ ಈ ವಸತಿನಿಲಯದಲ್ಲಿ ಸರ್ಕಾರ ನೀಡುವ ಸೌಲಭ್ಯ ಸರಿಯಾಗಿ ಸಿಗುತ್ತಿಲ್ಲ. ಮೆನು ಚಾರ್ಟ್ ಪ್ರಕಾರವಾಗಿ ಊಟ, ಉಪಚಾರ, ಸೌಲಭ್ಯಗಳು ಸಿಗುತ್ತಿಲ್ಲವೆಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.ಸರಿಯಾದ ಸಮಯಕ್ಕೆ ಗುಣಮಟ್ಟದ ಆಹಾರ ನೀಡುವಂತೆ ಅನೇಕ ಬಾರಿ ಹೇಳಿದ್ದರೂ ಗಮನ ಹರಿಸುತ್ತಿಲ್ಲ. ಕಳೆದ ಕೆಲವು ತಿಂಗಳಿನಿಂದ ವಿದ್ಯಾರ್ಥಿಗಳಿಗೆ ಊಟದ ಸಮಸ್ಯೆ ಎದುರಾಗಿದೆ. ಮೆನು ಚಾರ್ಟ್ ಪ್ರಕಾರ ತಮ್ಮಿಂದ ಅಡುಗೆ ಮಾಡಲು ಸಾಧ್ಯವಿಲ್ಲ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಕರೆಂಟ್ ಇಲ್ಲದ ಸಮಯದಲ್ಲಿ ಯುಪಿಎಸ್ ಅಳವಡಿಕೆ, ಉಚಿತ ವೈಫೈ, ಹೊಸ ಕಾಟ್, ಬೆಡ್, ತಟ್ಟೆ, ಉಪಕರಣಗಳು ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸುತ್ತೇವೆ ಎಂದು ಕೇವಲ ಭರವಸೆ ನೀಡುತ್ತಾರೆ. ಅಡುಗೆ ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು. ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, ಕೂಡಲೆ ಹಾಸ್ಟೆಲ್ ಅವ್ಯವಸ್ಥೆ ಸರಿಪಡಿಸಬೇಕು. ವಸತಿ ನಿಲಯದಲ್ಲಿನ ಕೆಲ ಸಮಸ್ಯೆಗಳ ಜತೆಗೆ ಸೂಕ್ತ ಆಹಾರದ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ತೊಂದರೆಯಾಗಿದೆ. ಕೂಡಲೇ ಊಟದ ವ್ಯವಸ್ಥೆ ಸರಿಪಡಿಸಿ, ಉತ್ತಮ ಗುಣಮಟ್ಟದ ಆಹಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಸುನಿಲ್ ಕುಮಾರ್, ಪ್ರಶಾಂತ್ ಎಚ್., ಗುಡ್ಡಪ್ಪ ಎನ್. ಜಿ., ಪ್ರವೀಣ ಕೆ., ಕೃಷ್ಣ ಎಸ್., ಬಸವನಗೌಡ ಕೆ., ಮಧುಸೂದನ್, ಸಿದ್ದಲಿಂಗೇಶ, ಕಲ್ಲನಗೌಡ, ವಿನಯ, ಸುನೀಲಗೌಡ್ರು ಇತರರು ಇದ್ದರು. ದ್ಯಾಮವ್ವದೇವಿಯ 33ನೇ ವಾರ್ಷಿಕೋತ್ಸವ ನಾಳೆಹಾವೇರಿ: ಸ್ಥಳೀಯ ಬಸವೇಶ್ವರನಗರ ಬಿ ಬ್ಲಾಕ್ ಒಂದನೇ ಕ್ರಾಸ್‌ನಲ್ಲಿರುವ ದ್ಯಾಮವ್ವದೇವಿಯ 33ನೇ ವಾರ್ಷಿಕೋತ್ಸವ ಕಾರ್ಯಕ್ರಮ ಏ. 8ರಂದು ನಡೆಯಲಿದೆ.
ಅಂದು ಬೆಳಗ್ಗೆ ದೇವಿಗೆ ಪಂಚಾಮೃತ ಅಭಿಷೇಕ, ನಂತರ ಬೆಳಗ್ಗೆ 8 ಗಂಟೆಗೆ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 9ಕ್ಕೆ ಮಹಾಮಂಗಳಾರತಿ ಜರುಗಲಿದೆ ಎಂದು ದೇವಸ್ಥಾನದ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.