ಅರಣ್ಯ ಪದವೀಧರರಿಗೆ ಹುದ್ದೆ ಮೀಸಲಿಡಲು ವಿದ್ಯಾರ್ಥಿಗಳ ಪ್ರತಿಭಟನೆ

| Published : Feb 11 2024, 01:55 AM IST / Updated: Feb 11 2024, 04:14 PM IST

ಅರಣ್ಯ ಪದವೀಧರರಿಗೆ ಹುದ್ದೆ ಮೀಸಲಿಡಲು ವಿದ್ಯಾರ್ಥಿಗಳ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಉಪವಲಯ ಅರಣ್ಯಾಧಿಕಾರಿ, ವಲಯಾರಣ್ಯಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳನ್ನು ಸಂಪೂರ್ಣ ಅರಣ್ಯ ಪದವೀಧರರಿಗೆ ಮೀಸಲಿರಿಸಬೇಕು ಎಂದು ಒತ್ತಾಯಿಸಿ ಶಿರಸಿ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಶಿರಸಿ: ಉಪವಲಯ ಅರಣ್ಯಾಧಿಕಾರಿ, ವಲಯಾರಣ್ಯಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳನ್ನು ಸಂಪೂರ್ಣ ಅರಣ್ಯ ಪದವೀಧರರಿಗೆ ಮೀಸಲಿರಿಸಬೇಕು ಎಂದು ಒತ್ತಾಯಿಸಿ ಶಿರಸಿ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಕಾಲೇಜಿನ ಆವರಣದಲ್ಲಿ ಪ್ರತಿಭಟನೆ ನಡೆಸಿದ ೩೦೦ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ಅರಣ್ಯ ಇಲಾಖೆಯ ಉಪವಲಯ ಅರಣ್ಯ ಅಧಿಕಾರಿಗಳ ನೇರ ನೇಮಕಾತಿಯಿಂದ ಅರಣ್ಯ ವೀಕ್ಷಕರು ಹಾಗೂ ಅರಣ್ಯ ರಕ್ಷಕರಿಗೆ ಮುಂಬಡ್ತಿ ಅವಕಾಶದಿಂದ ವಂಚಿತರಾಗಿ, ಇರುವ ಜಾಗದಲ್ಲಿಯೇ ಕೆಲಸ ನಿರ್ವಹಿಸಬೇಕಾಗುತ್ತದೆ. 

ಇದೇ ಕಾರಣಕ್ಕೆ ವಿಜಯ ಭಾಸ್ಕರ ವರದಿಯ ಆಧಾರದ ಮೇಲೆ ಈಗ ಅರಣ್ಯ ಇಲಾಖೆಯಲ್ಲಿ ನೂರರ ಮುಂಬಡ್ತಿ ಮಾಡಲು ಶಿಫಾರಸು ಮಾಡಿರುವುದು ಅವೈಜ್ಞಾನಿಕವಾಗಿದೆಯಲ್ಲದೇ, ಅರಣ್ಯ ಸಂರಕ್ಷಣೆಗೆ ಬೇಕಾಗುವ ನುರಿತ ಮಾನವ ಸಂಪನ್ಮೂಲಗಳ ಸೇವೆ ಪಡೆಯುವುದರಿಂದ ಇಲಾಖೆ ವಂಚಿತವಾಗಲಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ವೃತ್ತಿಪರ ಅರಣ್ಯ ಶಾಸ್ತ್ರ ಪದವೀಧರರ ಸಾಮರ್ಥ್ಯ ಮತ್ತು ಅಗತ್ಯ ಅರಿತುಕೊಂಡ ರಾಜ್ಯ ಸರ್ಕಾರವು ೨೦೦೩ರಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವಲಯ ಅರಣ್ಯಾಧಿಕಾರಿ ಹುದ್ದೆಗೆ ಶೇ. ೫೦ರಷ್ಟು ಮೀಸಲಾತಿ ಒದಗಿಸಿ ೨೦೧೨ರಲ್ಲಿ ವಲಯ ಅರಣ್ಯಾಧಿಕಾರಿ ಹುದ್ದೆಗೆ ಶೇ. ೭೫ರಷ್ಟು ಹೆಚ್ಚಿಸಿತ್ತು. 

ಕರ್ನಾಟಕ ಅರಣ್ಯ ಇಲಾಖೆಯ ಸೇವೆಗಳ (ನೇಮಕಾತಿ) ತಿದ್ದುಪಡಿ ನಿಯಮಗಳ ಅಡಿಯಲ್ಲಿ ೨೦೧೮ರಲ್ಲಿ ಪ್ರಸ್ತಾಪಿಸಿದ ಹೊಸ ಕರಡು ನಿಯಮಗಳು, ಬಿಎಸ್‌ಸಿ ಅರಣ್ಯ ಶಾಸ್ತ್ರ, ಪದವೀಧರರಿಗೆ ವಲಯ ಅರಣ್ಯ ಅಧಿಕಾರಿ ಹುದ್ದೆಯ ನೇರ ನೇಮಕಾತಿಯಲ್ಲಿ ಮೊದಲೇ ಶೇ. ೭೫ರಷ್ಟಿದ ಮೀಸಲಾತಿಯನ್ನು ಶೇ. ೫೦ಕ್ಕೆ ಕಡಿಮೆಗೊಳಿಸಿದೆ. 

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯಾಧಿಕಾರಿ ಹುದ್ದೆಗಳಿಗೆ ಅರಣ್ಯ ವಿದ್ಯಾರ್ಥಿಗಳನ್ನೇ ನೇರ ನೇಮಕಾತಿ ಮಾಡುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಿಸಬಹುದು. 

ಇದರ ಕುರಿತು ಸರ್ಕಾರ ಇಚ್ಛಾಶಕ್ತಿ ತೋರಿಸಬೇಕು ಎಂದು ಆಗ್ರಹಿಸಿದ್ದಾರೆ.ಪ್ರತಿಭಟನಾ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಆಗಮಿಸಿ, ವಿದ್ಯಾರ್ಥಿಗಳ ಬೇಡಿಕೆಯ ಮನವಿ ಪತ್ರ ಸ್ವೀಕರಿಸಿದರು.

ಆನಂತರ ಮಾತನಾಡಿದ ಅವರು, ಕೊಡಗಿನ ಪೊನ್ನಂಪೇಟೆ, ಶಿವಮೊಗ್ಗ ಮತ್ತು ಶಿರಸಿಯ ಅರಣ್ಯ ಕಾಲೇಜುಗಳ ವಿದ್ಯಾರ್ಥಿಗಳು ಹಲವು ಬೇಡಿಕೆ ಈಡೇರಿಸುವಂತೆ ತರಗತಿ ಬಹಿಷ್ಕರಿಸಿ, ಪ್ರತಿಭಟನೆ ನಡೆಸುತ್ತಿದ್ದಾರೆ. 

ಅರಣ್ಯ ಪದವಿ ಮುಗಿಸಿದ ನಂತರ ನೇರ ನೇಮಕಾತಿ ಮಾಡಿಕೊಳ್ಳಬೇಕಾಗಿದೆ. ಆದರೆ ವಿಜಯಭಾಸ್ಕರ ವರದಿ ರದ್ದು ಮಾಡಬೇಕೆಂಬ ಬೇಡಿಕೆ ಸಲ್ಲಿಸಿದ್ದಾರೆ. 

ನಿಜ ಮತ್ತು ನ್ಯಾಯವಾದ ಬೇಡಿಕೆ. ಗಂಭೀರವಾಗಿ ಪರಿಗಣಿಸಿ ಫೆ. ೧೨ರಿಂದ ಪ್ರಾರಂಭವಾಗುವ ಪರಿಷತ್‌ ಅಧಿವೇಶನದಲ್ಲಿ ಸರ್ಕಾರವನ್ನು ಗಮನಸೆಳೆಯುತ್ತೇನೆ. 

ಅಲ್ಲದೇ ಅರಣ್ಯ ಸಚಿವರ ಜತೆಗೂ ಚರ್ಚಿಸುತ್ತೇನೆ ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.ವಿದ್ಯಾರ್ಥಿ ಯಶಸ್ ಟಿ.ಎನ್. ಮಾತನಾಡಿ, ಹಲವು ವರ್ಷಗಳಿಂದ ಅರಣ್ಯ ಪದವೀಧರ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದು, ಅರಣ್ಯ ಇಲಾಖೆಯಲ್ಲಿನ ಡಿವೈಆರ್‌ಎಫ್‌ಒ, ಆರ್‌ಎಫ್‌ಒ ಮತ್ತು ಎಸಿಎಫ್ ಹುದ್ದೆಗಳಿಗೆ ನಮಗೆ ಅವಕಾಶ ನೀಡಬೇಕು. 

ಕೃಷಿ, ತೋಟಗಾರಿಕೆ, ಮೀನುಗಾರಿಕೆ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಯಲ್ಲಿಯಂತೆ ಅರಣ್ಯ ಶಾಸ್ತ್ರ ಪದವೀಧರ ವಿದ್ಯಾರ್ಥಿಗಳಿಗೆ ಗರಿಷ್ಠ ಅವಕಾಶ ನೀಡಬೇಕು. ಕಳೆದ ನಾಲ್ಕೈದು ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳು ನಿರುದ್ಯೋಗಿಗಳಾಗುತ್ತಿದ್ದಾರೆ. 

ಅವರಿಗೆ ಸರ್ಕಾರ ನ್ಯಾಯ ನೀಡಬೇಕು ಒತ್ತಾಯಿಸಿದರು.ಅರಣ್ಯ ಕಾಲೇಜಿನ ಡೀನ್ ವಾಸುದೇವ ಮಾತನಾಡಿ, ಅರಣ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆಯಲ್ಲಿ ನೇರ ನೇಮಕಾತಿ ಕಡಿಮೆಗೊಳಿಸಿರುವುದರಿಂದ ಉದ್ಯೋಗ ಸಂಬಂಧ ದೊಡ್ಡ ಆಘಾತವಾಗಿದೆ. 

ಇದನ್ನು ಸರ್ಕಾರ ಕೈ ಬಿಡಬೇಕು. ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಲು ಸರ್ಕಾರ ಪ್ರಯತ್ನಿಸಬೇಕು ಎಂದು ವಿನಂತಿಸಿದರು.ಪ್ರತಿಭಟನೆಯಲ್ಲಿ ವೈಷ್ಣವಿ ಪಾಟೀಲ, ವಿನಾಯಕ ಎಸ್. ಶಿವಾನಂದ ಕಾನಟಿ, ಶಕೀಲ ಅಹಮ್ಮದ್, ನಮೃತಾ ಕೊಳ್ಳಿ, ಸುಜಾತಾ, ವಂದನಾ ಚಿಕ್ಕಮಠ, ನಯನಾ, ಗೌರಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.