ಹಾಸ್ಟೆಲ್ ಬಳಿ ಬಸ್ ನಿಲುಗಡೆಗೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

| Published : Jun 22 2024, 12:49 AM IST

ಹಾಸ್ಟೆಲ್ ಬಳಿ ಬಸ್ ನಿಲುಗಡೆಗೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಣಿಬೆನ್ನೂರು ಹೊರವಲಯದ ಹಲಗೇರಿ ರಸ್ತೆಯ ಎಸ್.ಆರ್.ಕೆ ಬಡಾವಣೆ ಹತ್ತಿರದ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಕಡ್ಡಾಯವಾಗಿ ಬಸ್ ನಿಲ್ಲಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಭಾರತ ವಿದ್ಯಾರ್ಥಿ ಫೆಡರೇಷನ್ ರಾಣಿಬೆನ್ನೂರು ಹಾಸ್ಟೆಲ್ ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ದಿಢೀರ್ ಪ್ರತಿಭಟನೆ ನಡೆಸಿದರು.

ರಾಣಿಬೆನ್ನೂರು: ನಗರದ ಹೊರವಲಯದ ಹಲಗೇರಿ ರಸ್ತೆಯ ಎಸ್.ಆರ್.ಕೆ ಬಡಾವಣೆ ಹತ್ತಿರದ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಕಡ್ಡಾಯವಾಗಿ ಬಸ್ ನಿಲ್ಲಿಸಬೇಕು ಹಾಗೂ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಕಂಡಕ್ಟರ್, ಡ್ರೈವರ್ ಮೇಲೆ ಶಿಸ್ತು ಕ್ರಮ ಜರುಗಿಸಲು ಒತ್ತಾಯಿಸಿ ಶುಕ್ರವಾರ ಭಾರತ ವಿದ್ಯಾರ್ಥಿ ಫೆಡರೇಷನ್ ರಾಣಿಬೆನ್ನೂರು ಹಾಸ್ಟೆಲ್ ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ದಿಢೀರ್ ಪ್ರತಿಭಟನೆ ನಡೆಸಿದರು.ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್. ಮಾತನಾಡಿ, ಬಾಲಕಿಯರ ವಸತಿ ನಿಲಯದಿಂದ 150 ವಿದ್ಯಾರ್ಥಿನಿಯರು ನಗರದ ವಿವಿಧ ಕಾಲೇಜುಗಳಿಗೆ ಪ್ರತಿನಿತ್ಯ ತೆರಳುತ್ತಾರೆ. ಅಧಿಕೃತವಾಗಿ ಕೋರಿಕೆ ನಿಲುಗಡೆಗೆ ಅವಕಾಶವಿದ್ದು ವಿದ್ಯಾರ್ಥಿನಿಯರನ್ನು ನಗರದ ಕೇಂದ್ರ ಬಸ್ ನಿಲ್ದಾಣದಿಂದ ಹತ್ತಿಸಿಕೊಂಡು ವಸತಿ ನಿಲಯಕ್ಕೆ ನಿಲ್ಲಿಸದೆ 8 ಕಿಮೀ ದೂರದ ಹಲಗೇರಿ ಗ್ರಾಮಕ್ಕೆ ಬಿಡುತ್ತಾರೆ. ಇಲ್ಲವೇ ನಡು ರಸ್ತೆಯಲ್ಲಿ ಇಳಿಸಿ ಹೋಗುತ್ತಾರೆ. ಹೀಗಾಗಿ ಹಲಗೇರಿ ಮಾರ್ಗವಾಗಿ ತೆರಳುವ ಶಿಕಾರಿಪುರ, ರಟ್ಟಿಹಳ್ಳಿ, ಮಾಸೂರ ಹಿರೇಕೆರೂರ, ಅಂತರವಳ್ಳಿ ಸೇರಿದಂತೆ ಎಲ್ಲಾ ಬಸ್‌ಗಳು ಕಡ್ಡಾಯವಾಗಿ ನಿಲ್ಲಿಸಲು ಆದೇಶ ಹೊರಡಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ಶಾಲಾ-ಕಾಲೇಜ್ ವಿದ್ಯಾರ್ಥಿಗಳಿಂದ ಬಸ್ ನಿಲ್ದಾಣ ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದರು. ಎಸ್‌ಎಫ್‌ಐ ಮುಖಂಡರಾದ ಗೌತಮ್ ಸಾವಕ್ಕನವರ, ವೀರೇಶ ಹನುಮನಮಟ್ಟಿ, ಸಂಗೀತಾ ಲಮಾಣಿ, ದ್ರಾಕ್ಷಾಯಿಣಿ, ಅಶ್ವಿನಿ ಯು. ಟಿ., ಮಂಜುಳಾ ಬಿ., ರೂಪಾ ಎಸ್.ಬಿ., ಪ್ರತಿಭಾ ಗೊಣೆಪ್ಪನವರ, ಅಶ್ವಿನಿ ಆರ್., ದ್ಯಾಮಕ್ಕ ಚವ್ಹಣ್ಣನವರ, ಪ್ರಿಯಾ ಯು.ಟಿ. ಸೇರಿದಂತೆ ನೂರಾರು ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಗ್ರಾಮೀಣ ಪೊಲೀಸ್‌ ಠಾಣೆ ಪಿಎಸ್‌ಐ ಆರ್.ಕೆ. ನಿಂಗೆಜ್ಜರ, ಕಂಟ್ರೋಲರ್ ಉಮೇಶ್ ನಾಯಕ, ವಸತಿ ನಿಲಯದ ಮೇಲ್ವಿಚಾರಕಿ ಪ್ರಭಾವತಿ ಅಲಗಣ್ಣನವರ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.