ಸಂಭ್ರಮದಿಂದ ಪರೀಕ್ಷಾ ಕೇಂದ್ರಕ್ಕೆ ಧಾವಿಸಿದ ವಿದ್ಯಾರ್ಥಿಗಳು

| Published : Mar 26 2024, 01:19 AM IST

ಸಂಭ್ರಮದಿಂದ ಪರೀಕ್ಷಾ ಕೇಂದ್ರಕ್ಕೆ ಧಾವಿಸಿದ ವಿದ್ಯಾರ್ಥಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ 20,641 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದರು. ಈ ಪೈಕಿ 20,347 ವಿದ್ಯಾರ್ಥಿಗಳು ಹಾಜರಾಗಿದ್ದು, 294 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.

ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಸೋಮವಾರ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರಥಮ ಭಾಷೆ ವಿಷಯದ ಪರೀಕ್ಷೆಗೆ 294 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

ಜಿಲ್ಲೆಯಲ್ಲಿ 20,641 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದರು. ಈ ಪೈಕಿ 20,347 ವಿದ್ಯಾರ್ಥಿಗಳು ಹಾಜರಾಗಿದ್ದು, 294 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಜಿಲ್ಲೆಯ 65 ಪರೀಕ್ಷಾ ಕೇಂದ್ರಗಳಲ್ಲಿ 20,641 ಬಾಲಕ, ಬಾಲಕಿಯರು ಪ್ರಥಮ ಭಾಷೆ ಪರೀಕ್ಷೆಗೆ ನೋಂದಣಿಯಾಗಿದ್ದು, ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ 18 ಪರೀಕ್ಷಾ ಕೇಂದ್ರಗಳಲ್ಲಿ 5836 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಹಗರಿಬೊಮ್ಮನಹಳ್ಳಿ 10 ಕೇಂದ್ರಗಳಲ್ಲಿ 2782 ವಿದ್ಯಾರ್ಥಿಗಳು, ಹೂವಿನಹಡಗಲಿ 9 ಕೇಂದ್ರಗಳಲ್ಲಿ 2941 ವಿದ್ಯಾರ್ಥಿಗಳು, ಹರಪನಹಳ್ಳಿ 13 ಕೇಂದ್ರಗಳಲ್ಲಿ 4133 ವಿದ್ಯಾರ್ಥಿಗಳು ಮತ್ತು ಕೂಡ್ಲಿಗಿಯಲ್ಲಿ 15 ಕೇಂದ್ರಗಳಲ್ಲಿ 4655 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಪರೀಕ್ಷೆ ಸುಗಮವಾಗಿ ನಡೆಸಲು 65 ಮುಖ್ಯ ಅಧೀಕ್ಷಕರು, 22 ಉಪ ಅಧೀಕ್ಷಕರು ಮತ್ತು 65 ಪ್ರಶ್ನೆ ಪತ್ರಿಕೆ ಪಾಲಕರನ್ನು ನಿಯೋಜಿಸಲಾಗಿತ್ತು. ಒಟ್ಟು 22 ಮಾರ್ಗಾಧಿಕಾರಿಗಳನ್ನೂ ನೇಮಿಸಲಾಗಿತ್ತು. ಹೊಸಪೇಟೆಯಲ್ಲಿ 6, ಹಗರಿಬೊಮ್ಮನಹಳ್ಳಿಯಲ್ಲಿ 4, ಹೂವಿನಹಡಗಲಿಯಲ್ಲಿ 3, ಹರಪನಹಳ್ಳಿ 4, ಕೂಡ್ಲಿಗಿಯಲ್ಲಿ ಐವರನ್ನು ನಿಯೋಜಿಸಲಾಗಿತ್ತು.

ಎಸ್ಸೆಸ್ಸೆಲ್ಸಿ ಪರೀಕ್ಷೆಯು 919 ಕೊಠಡಿಗಳಲ್ಲಿ ನಡೆದಿದೆ. ಎಲ್ಲ ಕೊಠಡಿಗೂ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಪರೀಕ್ಷಾ ಕೇಂದ್ರದ ಕಾರಿಡಾರ್‌ನಲ್ಲೂ ಸಿಸಿಟಿವಿ ಅಳವಡಿಸಲಾಗಿತ್ತು.

ಜಿಪಂ ಸಿಇಒ ಭೇಟಿ: ನಗರದ ಪರೀಕ್ಷಾ ಕೇಂದ್ರಗಳಿಗೆ ಜಿಪಂ ಸಿಇಒ ಸದಾಶಿವಪ್ರಭು ಬಿ. ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ 10ನೇ ಸ್ಥಾನದಲ್ಲಿ ಇದ್ದೇವು. ಈ ಬಾರಿ ನಾವು ಇನ್ನು ಹೆಚ್ಚಿನ ಸಾಧನೆ ಮಾಡುವ ನಿರೀಕ್ಷೆ ಇದೆ. ನಕಲಿಗೆ ಅವಕಾಶ ಇಲ್ಲದಂತೆ ನಿಗಾ ಇಡಲಾಗಿದೆ. ಪ್ರತಿಭಾವಂತರಿಗೆ ಅನ್ಯಾಯ ಆಗದ ಹಾಗೆ ನೋಡಿಕೊಳ್ಳಲಾಗುತ್ತದೆ ಎಂದರು.

ಪಾಲಕರಲ್ಲಿ ತಳಮಳ: ಜಿಲ್ಲೆಯ ಪರೀಕ್ಷಾ ಕೇಂದ್ರಗಳ ಎದುರು ಬೆಳಿಗ್ಗೆ ಮಕ್ಕಳೊಂದಿಗೆ ಆಗಮಿಸಿದ್ದ ಪಾಲಕರಲ್ಲಿ ತಳಮಳ ಶುರುವಾಗಿತ್ತು. ಮಕ್ಕಳನ್ನು ಪರೀಕ್ಷಾ ಕೇಂದ್ರಗಳಲ್ಲಿ ಬಿಟ್ಟು, ನೋಂದಣಿ ಸಂಖ್ಯೆ ಸರಿಯಾಗಿದೆ ಎಂಬುದನ್ನು ಪಾಲಕರು ಖಾತರಿಪಡಿಸಿಕೊಂಡರು. ಎಸ್ಸೆಸ್ಸೆಲ್ಸಿ ಬಾಲಕ, ಬಾಲಕಿಯರು ಕೂಡ ತಮ್ಮ ತಂದೆ-ತಾಯಿಗಳ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡು ಪರೀಕ್ಷೆ ಬರೆಯಲು ತೆರಳಿದರು.

ಪರೀಕ್ಷೆ ಚೆನ್ನಾಗಿ ಬರೆಯಿರಿ ಎಂದು ಪಾಲಕರು ಹಾರೈಸುತ್ತಿದ್ದು, ಕಂಡು ಬಂದಿತು. ಇನ್ನೂ ಪರೀಕ್ಷೆ ಮುಗಿದ ಬಳಿಕ ಪಾಲಕರೇ ಆಗಮಿಸಿ ಮಕ್ಕಳನ್ನು ಕರೆದುಕೊಂಡು ತೆರಳುತ್ತಿದ್ದು ಕಂಡು ಬಂದಿತು. ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.