ಜಿಲ್ಲೆಯ ಪಿಯುಸಿ ಫಲಿತಾಂಶದಲ್ಲಿ ಈ ಬಾರಿಯೂ ಬಾಲಕಿಯರೆ ಮೇಲುಗೈ ಸಾಧಿಸಿದ್ದಾರೆ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಬಾಲಕಿಯರೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಗದಗ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಈ ಬಾರಿಯೂ ಜಿಲ್ಲೆ ಮತ್ತೊಮ್ಮೆ ಕಳಪೆ ಸಾಧನೆ ಮಾಡಿದ್ದು, ಕಳೆದ ವರ್ಷ ಅಲ್ಪ ಏರಿಕೆ ಕಂಡಿದ್ದ ಫಲಿತಾಂಶ ಈ ವರ್ಷ ಮತ್ತೊಮ್ಮೆ ಮುಗ್ಗರಿಸಿದೆ. ಇದೆಲ್ಲದರ ಮಧ್ಯೆಯೂ ಕೆಲ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಜಿಲ್ಲಾ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.

ಜಿಲ್ಲೆಯ ಪಿಯುಸಿ ಫಲಿತಾಂಶದಲ್ಲಿ ಈ ಬಾರಿಯೂ ಬಾಲಕಿಯರೆ ಮೇಲುಗೈ ಸಾಧಿಸಿದ್ದಾರೆ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಬಾಲಕಿಯರೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಕಲಾ ವಿಭಾಗ: ಕಲಾವಿ ವಿಭಾಗದಲ್ಲಿ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಎಸ್ಎ ಪಿಯು ಕಾಲೇಜಿನ ವಿದ್ಯಾರ್ಥಿನಿ ಹುಲಿಗೆಮ್ಮ 589 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಲಕ್ಷ್ಮೇಶ್ವರ ಎಸ್ಎಂಜಿವಿಜಿ ಕಾಲೇಜಿನ ರೋಹಿಣಿ ಬೆಟಗೇರಿ 584 ಅಂಕ ಪಡೆದು ದ್ವಿತೀಯ, ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದ ಎಂ.ಬಿ. ಪಾಟೀಲ ಪಪೂ ಕಾಲೇಜಿನ ಮಂಜುಳಾ ಹುಳಕಣ್ಣವರ 582 ಅಂಕ ಪಡೆದು ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ವಿಭಾಗ: ವಿಜ್ಞಾನ ವಿಭಾಗದಲ್ಲಿ ಗದಗ ನಗರದ ಸರ್ಕಾರಿ ಪಿಯು ಕಾಲೇಜಿನ ಸಮೃದ್ಧಿ ಸಿದ್ಧಲಿಂಗ 591(ಶೇ.98.4) ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅದೇ ರೀತಿ ಸನ್ಮಾರ್ಗ ಪಿಯು ಕಾಲೇಜಿನ ಕಿರಣ ಹಿರೇಮಠ 590 ಅಂಕ ಪಡೆದು ದ್ವಿತೀಯ, ಮಲ್ಲಸಮುದ್ರದ ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನ ರೇಖಾ ಕಣ್ಣೂರ 587 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗ: ವಾಣಿಜ್ಯ ವಿಭಾಗದಲ್ಲಿ ಮುಂಡರಗಿ ಜೆಎ ಕಾಲೇಜಿನ ಪದ್ಮಪ್ರಿಯಾ ಶೆಟ್ಟರ್ 590, ಗದಗ ತಾಲೂಕಿನ ಬಳಗಾನೂರ ಗ್ರಾಮದ ಚಿಕೇನಕೊಪ್ಪ ಶರಣರ ಕಾಲೇಜಿನ ಗೀತಾ ಹೂಗಾರ 590 ಅಂಕ(ಶೇ. 98.3)ಪಡೆದು ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ. ಗದಗ ಎಎಸ್ಎಸ್ ಕಾಲೇಜಿನ ವಿನೀತ ಬಂಡಾ, ಪ್ರಿಯಾಂಕ ಎಚ್. ಮತ್ತು ಆದಿತ್ಯ ರಾಯಬಾಗಿ 589 ಅಂಕ ಪಡೆಯುವ ಮೂಲಕ ಮೂವರು ದ್ವಿತೀಯ ಸ್ಥಾನ ಪಡೆದಿದ್ದಾರೆ.ಡಿಡಿಪಿಯುಗೆ ಡಿಸಿ ನೋಟಿಸ್

ಜಿಲ್ಲೆಯ ಪಿಯುಸಿ ಫಲಿತಾಂಶ ಕುರಿತು ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿದ ಡಿಡಿಪಿಯು ಎಸ್.ಬಿ. ಮಸನಾಯಕ ಅವರಿಗೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಶುಕ್ರವಾರ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. ಪಿಯು ಫಲಿತಾಂಶ ಗುರುವಾರ ಮಧ್ಯಾಹ್ನ 3.30ಕ್ಕೆ ಪ್ರಕಟವಾದರೂ ರಾತ್ರಿ 8 ಗಂಟೆ ವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಲಿಲ್ಲ. ಮಾಧ್ಯಮದವರು ಮಾಹಿತಿ ಕೇಳಿದ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರಿದ್ದರು. ಜತೆಗೆ ಜಿಲ್ಲೆಯೂ ಫಲಿತಾಂಶದಲ್ಲಿ 30ನೇ ಸ್ಥಾನಕ್ಕೆ ಕುಸಿದಿದ್ದರೂ, 25ನೇ ಸ್ಥಾನ ಪಡೆದಿದೆ ಎಂದು ತಪ್ಪು ಮಾಹಿತಿ ನೀಡಿದ್ದರು. ಫಲಿತಾಂಶದ ಬಗ್ಗೆ ಮಾಹಿತಿ ಕೇಳಿದ್ದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಿಬ್ಬಂದಿಗೂ ಮಾಹಿತಿ ನೀಡದೇ ನಿರ್ಲಕ್ಷ್ಯ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಎಸ್.ಬಿ. ಮಸನಾಯಕ, ಕರ್ತವ್ಯಲೋಪ ಎಸಗಿದ್ದು ಕಂಡು ಜಿಲ್ಲಾಧಿಕಾರಿಗಳು ನೋಟಿಸ್ ನೀಡಿದ್ದಾರೆ.