ಹನುಮಸಾಗರ: ವಿದ್ಯಾರ್ಥಿ ಜೀವನ ವ್ಯಕ್ತಿಯ ಭವಿಷ್ಯ ರೂಪಿಸುವ ಅತ್ಯಂತ ಮಹತ್ವದ ಘಟ್ಟವಾಗಿದ್ದು, ಈ ಹಂತದಲ್ಲಿ ಕಾನೂನು ಬಗ್ಗೆ ಅರಿವು ಹೊಂದುವುದು ಅತ್ಯಗತ್ಯ. ಕಾನೂನು ಉಲ್ಲಂಘಿಸುವ ಯಾವುದೇ ಕೃತ್ಯದಲ್ಲಿ ತೊಡಗಿದರೆ ಅದು ವಿದ್ಯಾರ್ಥಿಗಳ ಶಿಕ್ಷಣ, ಉದ್ಯೋಗ ಹಾಗೂ ಭವಿಷ್ಯದ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಂಜುನಾಥ ಆರ್. ಹೇಳಿದರು.

ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಬಾಲಕಿಯರ ಪ್ರೌಢಶಾಲೆಯಲ್ಲಿ ಶುಕ್ರವಾರ ತಾಲೂಕು ಕಾನೂನು ಸೇವೆಗಳ ಸಮಿತಿ,ಪಪಂ ಹಾಗೂ ಪೊಲೀಸ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾದಕ ದ್ರವ್ಯ ಸೇವನೆಯಿಂದಾಗುವ ದುಷ್ಪರಿಣಾಮ ಹಾಗೂ ಪೋಕ್ಸೊ ಕಾಯ್ದೆ ಕುರಿತು ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಯುವಜನರು ಸಾಮಾಜಿಕ ಜಾಲತಾಣಗಳನ್ನು ಅತಿಯಾಗಿ ಬಳಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯ ಹಾಗೂ ಕೆಟ್ಟ ವಿಷಯ ಎರಡೂ ಇರುತ್ತವೆ. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ, ಜ್ಞಾನಾರ್ಜನೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿರುವ ಮಾಹಿತಿಯನ್ನಷ್ಟೇ ಬಳಸಬೇಕು. ಪೋಷಕರು ನೀಡಿರುವ ಮೊಬೈಲ್‌ನ್ನು ದುರುಪಯೋಗಪಡಿಸಿಕೊಳ್ಳದೇ ಸಮಯದ ಸದ್ಭಳಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ ಮಾತನಾಡಿ, ಮಹಿಳೆಯರು ಸಮಾಜದ ಶಕ್ತಿಯಾಗಿದ್ದು, ಸಂಸ್ಕೃತಿ, ಸಂಪ್ರದಾಯ ಹಾಗೂ ನೈತಿಕ ಮೌಲ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪಿಎಸ್‌ಐ ಧನುಂಜಯ ಎಂ. ಪೋಕ್ಸೊ ಕಾಯ್ದೆಯ ಮಹತ್ವ, ಮಕ್ಕಳ ಸುರಕ್ಷತೆ ಹಾಗೂ ಕಾನೂನು ಉಲ್ಲಂಘನೆಯಿಂದ ಎದುರಾಗುವ ಶಿಕ್ಷೆಗಳ ಕುರಿತು ಮಾಹಿತಿ ನೀಡಿದರು. ಆರೋಗ್ಯ ಇಲಾಖೆಯ ಕೌನ್ಸಿಲರ್ ಖಾದರಬಾಷಾ ಮಾಗಿ ಮಾದಕ ದ್ರವ್ಯಗಳ ಸೇವನೆಯಿಂದ ಉಂಟಾಗುವ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದರು.


ಕಾರ್ಯಕ್ರಮದಲ್ಲಿ ಪಪಂ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ, ನ್ಯಾಯವಾದಿ ಎಚ್.ಆರ್.ನಾಯಕ, ಪರಸಪ್ಪ ಗುಜಮಾಗಡಿ, ವಿಜಯಮಹಾಂತೇಶ ಕುಷ್ಟಗಿ, ಲಿಂಗರಾಜ ಅಗಸಿಮುಂದಿನ, ಶಿವಕುಮಾರ ಚಿನಿವಾಲರ, ಎಚ್.ಬಿ.ಕುರಿ, ಎಸ್.ಎನ್. ನಾಯಕ, ಉಪಪ್ರಾಂಶುಪಾಲ ಮಹಾಂತಯ್ಯ ಸೊಪ್ಪಿಮಠ ಹಾಗೂ ವಿವಿಧ ಶಾಲೆಗಳ ಮುಖ್ಯಶಿಕ್ಷಕ ಶರಣಪ್ಪ ಗುಳೇದ, ಎಚ್.ಎಚ್.ಇಳಕಲ್, ಎಚ್.ಜಿ. ಕಳಕಾಪುರ, ವಸಂತ ರಾಜೂರ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು. ಪರಸಪ್ಪ ಪರಸಾಪುರ ಮತ್ತು ಚಂದ್ರಶೇಖರ ಗುಳೇದ ನಿರ್ವಹಿಸಿದರು.