ಅಂಕೋಲಾ ಪುರಸಭಾ ವ್ಯಾಪ್ತಿಯ ಕೇಣಿ ಗ್ರಾಮದ ಗಾಂವಕರವಾಡದಲ್ಲಿ ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಲಾವೃತ ಪರಿಸ್ಥಿತಿ ನಿರ್ಮಾಣವಾಗಿದೆ. ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಮನೆಗಳ ಸುತ್ತಮುತ್ತ ಜಲಾವೃತವಾಗಿದೆ.
ಅಂಕೋಲಾ: ಪುರಸಭಾ ವ್ಯಾಪ್ತಿಯ ಕೇಣಿ ಗ್ರಾಮದ ಗಾಂವಕರವಾಡದಲ್ಲಿ ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಲಾವೃತ ಪರಿಸ್ಥಿತಿ ನಿರ್ಮಾಣವಾಗಿದೆ.
ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಮನೆಗಳ ಸುತ್ತಮುತ್ತ ಜಲಾವೃತವಾಗಿದೆ. ಕೇಣಿ ಹಳ್ಳ ತುಂಬಿ ಹರಿದ ಪರಿಣಾಮ ಸಾಯಿ ಮಂದಿರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಜಲಾವೃತಗೊಂಡು ರಸ್ತೆ ಸಂಪರ್ಕ ಕಡಿತಗೊಂಡಿದೆ.ಇದರಿಂದ ಸ್ಥಳೀಯ ನಿವಾಸಿಗಳು ಹಾಗೂ ಭಕ್ತರು ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸಿದ್ದಾರೆ.
ಯಾದು ನಾರಾಯಣ ಗಾಂವಕರ್, ರಂಗುನಾಥ ನಾರಾಯಣ ಗಾಂವಕರ್, ಮಹೇಶ್ ಗಾಂವಕರ್ ಸೇರಿದಂತೆ ಸುಮಾರು ಎಂಟು ಮನೆಗಳು ಹಾಗೂ ದನದ ಕೊಟ್ಟಿಗೆಗಳು ಜಲಾವೃತಗೊಂಡಿವೆ.ಮಾಹಿತಿ ತಿಳಿಯುತ್ತಿದ್ದಂತೆ ಅಂಕೋಲಾ ಪುರಸಭೆಯ ಸಮುದಾಯ ಸಂಘಟನಾಧಿಕಾರಿ ಡಿ. ಎಲ್. ರಾಥೋಡ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿ, ಸ್ಥಳೀಯರಿಂದ ಮಾಹಿತಿ ಪಡೆದರು.
ಇದೇ ವೇಳೆ ಶಾಸಕ ಸತೀಶ್ ಸೈಲ್ ದೂರವಾಣಿ ಮೂಲಕ ಡಿ. ಎಲ್. ರಾಥೋಡ್ ಅವರೊಂದಿಗೆ ಮಾತನಾಡಿ, ಪರಿಸ್ಥಿತಿಯ ಕುರಿತು ಮಾಹಿತಿ ಪಡೆದು, ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಿ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.ಪರಿಸ್ಥಿತಿ ಮತ್ತಷ್ಟು ಹದಗೆಟ್ಟಲ್ಲಿ ಗಂಜಿ ಕೇಂದ್ರ ತೆರೆಯಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಯಾವುದೇ ತುರ್ತು ಪರಿಸ್ಥಿತಿ ಎದುರಾದರೆ ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಡಿ. ಎಲ್. ರಾಥೋಡ್ ನಿವಾಸಿಗಳಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಸುದೀಪ್ ಬಂಟ ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.ಬಳಲೆಯಲ್ಲಿ ಗುಡ್ಡ ಕುಸಿತ: ಅಂಕೋಲಾ ತಾಲೂಕಿನ ಬಳಲೆ ಬೊಮ್ಮಯ್ಯ ದೇವರ ದೇಗುಲದ ಪಕ್ಕದ ಚತುಷ್ಪಥ ಹೆದ್ದಾರಿಯ ಪಕ್ಕದಲ್ಲಿ ಗುಡ್ಡ ಕುಸಿತ ಉಂಟಾಗಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಶುಕ್ರವಾರ ಬೆಳಗ್ಗೆ ಗುಡ್ಡ ಕುಸಿದಿದ್ದರಿಂದ ವಾಹನ ಸಂಚಾರ 1 ಗಂಟೆಯ ಕಾಲ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ನಂತರ ಹೆದ್ದಾರಿ ಒಂದು ಬದಿಯಿಂದ ಏಕಮುಖ ಸಂಚಾರಕ್ಕೆ ಅಂಕೋಲಾ ಪೊಲೀಸರು ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟರು.ಐಆರ್‌ಬಿ ಕಂಪನಿಯವರು 12 ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ ಮಣ್ಣು ತೆರವುಗೊಳಿಸಿ ಸಂಜೆ ವೇಳೆ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.ಸಂಚಾರ ಪಿಎಸ್‌ಐ ಸುನಿಲ್ ಹುಳ್ಳೊಳ್ಳಿ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದರು. ಗೋಕರ್ಣ ಪೊಲೀಸ್ ಠಾಣೆಯ 112 ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ಶ್ರಮಿಸಿದರು.ಶಾಲೆಗೆ ರಜೆ: ಅಂಕೋಲಾದಲ್ಲಿ ಗುರುವಾರ ತಡರಾತ್ರಿಯಿಂದಲೆ ಧಾರಾಕಾರ ಮಳೆ ಸುರಿದಿದ್ದರಿಂದ ಅಂಕೋಲಾದ ಅಂಗನವಾಡಿ ಹಾಗೂ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ತೀವ್ರ ಮಳೆಯಿಂದ ಗಂಗಾವಳಿಯ ನೀರಿನ ಮಟ್ಟವು ಹೆಚ್ಚುತ್ತಿದೆ. ಹೀಗೆ ಮಳೆ ಮುಂದುವರಿದರೆ ಕಾಳಜಿ ಕೇಂದ್ರ ತೆರೆಯಲು ತಾಲೂಕಾಡಳಿತ ಚಿಂತನೆ ನಡೆಸಿದೆ.