₹4 ಕೋಟಿ ಹಣ ಕುಡಿವ ನೀರಿಗಾಗಿ ಹಾಗೂ ನೀರಿನ ಮೂಲಗಳ ರಿಪೇರಿಗಾಗಿ ಕಾಯ್ದಿರಿಸಲಾಗಿದೆ. ಜಿಲ್ಲೆಯಲ್ಲಿ 47% ಮಾತ್ರ ಬಿತ್ತನೆ ಕಾರ್ಯ

ಕುಕನೂರು: ತಾಲೂಕಾಡಳಿತದ ಪ್ರಜಾಸೌಧ ಕಟ್ಟಡ ಗುಣಮಟ್ಟದಿಂದ ಕೂಡಿರಲಿ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಗುತ್ತಿಗೆದಾರರಿಗೆ ಸೂಚಿಸಿದರು.

ಪಟ್ಟಣದ ಗುದ್ನೇಪ್ಪನಮಠದ ಮುಜರಾಯಿ ಇಲಾಖೆ ಜಾಗದಲ್ಲಿ ಗುತ್ತಿಗೆ ಆಧಾರದ ಮೇಲೆ ಶುಕ್ರವಾರ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ₹18 ಕೋಟಿ 53 ಲಕ್ಷ ವೆಚ್ಚದಲ್ಲಿ 16.30 ಎಕರೆ ಜಾಗದಲ್ಲಿ ತಾಲೂಕು ಪ್ರಜಾಸೌಧ ನಿರ್ಮಾಣ ಮಾಡಲಾಗುತ್ತಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು. ಇದು ಮುಜರಾಯಿ ಇಲಾಖೆಯ ಜಾಗವನ್ನು ಗುತ್ತಿಗೆ ಆಧಾರದ ಮೇಲೆ ತಾಲೂಕಾಡಳಿತ ಕಚೇರಿ, ಕೋರ್ಟ, ಬುದ್ದ, ಬಸವ, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಪಡೆಯಲಾಗಿದೆ. ಆ ಹಣ ದೇವಸ್ಥಾನದ ಖಾತೆಗೆ ಸೇರುತ್ತದೆ. ಮುಂದಿನ ದಿನದಲ್ಲೂ ಸಹ ದೇವಸ್ಥಾನ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತೇವೆ ಎಂದರು.

ಬರ ಸಮೀಕ್ಷೆ:ಜಿಲ್ಲೆಯಲ್ಲಿ ಬರ ಆವರಿಸಿರುವ ಕುರಿತು ಈಗಾಗಲೇ ಮುನ್ನೆಚ್ಚರಿಗೆ ಕ್ರಮ ತೆಗೆದುಕೊಳ್ಳಲಾಗಿದ್ದು, ₹4 ಕೋಟಿ ಹಣ ಕುಡಿವ ನೀರಿಗಾಗಿ ಹಾಗೂ ನೀರಿನ ಮೂಲಗಳ ರಿಪೇರಿಗಾಗಿ ಕಾಯ್ದಿರಿಸಲಾಗಿದೆ. ಜಿಲ್ಲೆಯಲ್ಲಿ 47% ಮಾತ್ರ ಬಿತ್ತನೆ ಕಾರ್ಯ ಆಗಿದ್ದು, ಬೆಳೆಗಳಿಗೆ ರೈತರು ವಿಮೆ ಭರಿಸಬೇಕು. ವಿಮೆಯಲ್ಲಿ ಮಧ್ಯ ಹಂಗಾಮಿಗೆ ಬೆಳೆ ವಿಮೆಯಾಗಿ 25% ಮಂಜೂರು ಮಾಡಿಸಲಾಗುವುದು. ಮಳೆ ಪ್ರಮಾಣ ಕಡಿಮೆ ಇದ್ದು, ಸೂಪರ್ ಎಲೊನೋ ಪ್ರಯುಕ್ತ ಮುಂದಿನ ಅಗಸ್ಟ್, ಸೆಪ್ಟಂಬರ್, ನವಂಬರ್ ತಿಂಗಳಿನಲ್ಲೂ ಸಹ ಮಳೆಯ ಪ್ರಮಾಣ ಕಡಿಮೆ ಇದೆ ಎಂದರು.

ಪವರ್ ಟ್ರಾನ್ಸಿಮಿಷನ್ ಲೈನ್ ಗೆ ಜಿಲ್ಲಾಧಿಕಾರಿ ಆಗಿ ನಾನು ಭೂಮಿ ಕೊಡಿಸಬೇಕು. ಆದರೆ ಸೋಲಾರ್, ವಿಂಡ್ ಪವರ್ ಅವರಿಗೆ ರೈತರು ಹಾಗೂ ಆಯಾ ಕಂಪನಿಗಳಿಗೆ ಭೂಮಿ ವಿಚಾರ ಮಾತ್ರ ಇರುತ್ತದೆ. ಚಂಡೂರು, ಬೆಣಕಲ್ ಬಳಿ 770 ಕೆವಿ ವಿದ್ಯುತ್ ಸ್ಥಾವರ ಘಟಕಕ್ಕೆ ಸ್ಥಳೀಯ ಶಾಸಕರು ಭೂಮಿ ನೀಡಬೇಡಿ ಎಂದು ಪತ್ರ ಬರೆದಿದ್ದರು. ನಾನು ಸಹ ಅದನ್ನು ಇಂಧನ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಸದ್ಯ ಈಗ ರೈತರು ನಾವು ಭೂಮಿ ಕೊಡುತ್ತೇವೆ ಎಂದು ಬಂದಿದ್ದಾರೆ. ಸದ್ಯ ಇಂಧನ ಇಲಾಖೆಗೆ ಮೇಲೆ ಭೂಮಿ ಖರೀದಿ ಹೊಣೆಗಾರಿಕೆ ಇದೆ ಎಂದರು.

ಪ್ರಜಾಸೌಧ ನಿರ್ಮಾಣ ಆಗುವ ಸ್ಥಳಕ್ಕೆ ಆಗಮಿಸಲು ಸೂಕ್ತ ರಸ್ತೆ ನಿರ್ಮಿಸಿ ಎಂದು ಸೂಚಿಸಿದರು. ಶಾಸಕರು, ಸಂಸದರು ಪ್ರಜಾಸೌಧ ಭೂಮಿ ಪೂಜೆಗೆ ಇಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ನಾನು ಸಹ ಇದೆ ಮೊದಲು ಜನಪ್ರತಿನಿಧಿಗಳು ಇಲ್ಲದೆ ಭೂಮಿ ಪೂಜೆ ಮಾಡಿದ್ದು ಎಂದು ತಿಳಿಸಿದರು. ಗುದ್ನೇಪ್ಪನಮಠದ ಭೂಮಿ ಬಗ್ಗೆ ಕೋರ್ಟಿನಲ್ಲಿ ವಿವಾದ ಇದೆ ಎಂಬ ಪ್ರಶ್ನೆಗೆ ಈಗಾಗಲೇ ಕೋರ್ಟ ಕಟ್ಟಡ ನಿರ್ಮಾಣದ ಪರ ಆದೇಶ ಮಾಡಿದೆ. ಸದ್ಯ ಅರ್ಜಿದಾರರು ನಮ್ಮ ಭೂಮಿ ಎಲ್ಲಿದೆ ಎಂದು ಕೋರ್ಟಿನ ಮೊರೆ ಹೋಗಿದ್ದಾರೆ. ವಿವಾದ ರಹಿತವಾದ ಜಾಗದಲ್ಲಿ ಬಂದು ಭೂಮಿ ಪೂಜೆ ಮಾಡಿದ್ದೇನೆ ಎಂದರು.

ತಹಸೀಲ್ದಾರ ಬಸವರಾಜ ಬೆಣ್ಣೆ ಶಿರೂರು, ತಾಪಂ ಇಒ ಬೆಟದೇಶ ಮಾಳೆಕೊಪ್ಪ, ಪಿಡಬ್ಲೂಡಿ ಅಧಿಕಾರಿ ಮಲ್ಲಿಕಾರ್ಜುನ, ಪಂಚಾಯತ್ ರಾಜ್ಯ ಇಲಾಖೆ ಅಧಿಕಾರಿ ರಾಜಶೇಖರ ಮಳಿಮಠ, ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಸಂಗಮೇಶ ಗುತ್ತಿ, ಪಪಂ ಮುಖ್ಯಾಧಿಕಾರಿ ನಾಗೇಶ, ಪಪಂ ಸದಸ್ಯ ರಾಮಣ್ಣ ಬಂಕದಮನಿ, ನಾರಾಯಣಪ್ಪ ಹರಪನ್ಹಳ್ಳಿ, ಹನುಮಂತಗೌಡ ಚಂಡೂರು, ಸಿದ್ದಯ್ಯ ಕಳ್ಳಿಮಠ, ಶರಣಪ್ಪ ಗಾಂಜಿ, ಮಂಜುನಾಥ ಸೋಂಪೂರು, ಮಲ್ಲಿಕಾರ್ಜುನ ಜಕ್ಕಲಿ, ಮಂಜುನಾಥ ಯಡಿಯಾಪೂರ, ಉದಯ ರಾಯರಡ್ಡಿವೀರಯ್ಯ ತೋಂಟದಾರ್ಯಮಠ, ಅಶೋಕ ತೋಟದ ಪರಶುರಾಮ ಸಕ್ರಣ್ಣನವರ್, ಮಹಾಂತೇಶ ಜಂಗ್ಲಿ ಇತರರಿದ್ದರು.