ವಿದ್ಯಾರ್ಥಿಗಳು ಆರೋಗ್ಯ ಕಾಳಜಿ ಹೊಂದಬೇಕು- ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ತಾಪಸ್ಕರ

| Published : Feb 23 2024, 01:48 AM IST

ವಿದ್ಯಾರ್ಥಿಗಳು ಆರೋಗ್ಯ ಕಾಳಜಿ ಹೊಂದಬೇಕು- ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ತಾಪಸ್ಕರ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸಾರ ಎಷ್ಟು ಮುಖ್ಯವೋ ಆರೋಗ್ಯ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಅನಾರೋಗ್ಯ ಆವರಿಸಿದ ಬದುಕು ಇದ್ದು ಸತ್ತಂತೆ. ವಿದ್ಯಾರ್ಥಿಗಳು ಆರೋಗ್ಯ ಕಾಪಾಡಿಕೊಳ್ಳುವ ಕಡೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ತಾಪಸ್ಕರ ಹೇಳಿದರು.

ಶಿರಹಟ್ಟಿ: ಸಂಸಾರ ಎಷ್ಟು ಮುಖ್ಯವೋ ಆರೋಗ್ಯ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಅನಾರೋಗ್ಯ ಆವರಿಸಿದ ಬದುಕು ಇದ್ದು ಸತ್ತಂತೆ. ವಿದ್ಯಾರ್ಥಿಗಳು ಆರೋಗ್ಯ ಕಾಪಾಡಿಕೊಳ್ಳುವ ಕಡೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ತಾಪಸ್ಕರ ಹೇಳಿದರು.

ಗುರುವಾರ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ, ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ ಮತ್ತು ಕೆಎಂಎಫ್ ಸಂಸ್ಥೆ ಇವರ ಸಹಭಾಗಿತ್ವದಲ್ಲಿ ಮಧ್ಯಾಹ್ನದ ಉಪಾಹಾರ ಯೋಜನೆಯಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ೧ರಿಂದ ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಟಿಕ ಆಹಾರ ಸಾಯಿ ಶ್ಯೂರ್ ರಾಗಿ ಹೆಲ್ತ್‌ ಮಿಕ್ಸ್ ವಿತರಣೆ ತಾಲೂಕು ಮಟ್ಟದ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.

ವಿದ್ಯಾರ್ಥಿಗಳ ಆರೋಗ್ಯಕರ ಬೆಳವಣಿಗೆಗೆ ಸರ್ಕಾರ ಮತ್ತು ಶಿಕ್ಷಣ ಇಲಾಖೆಯು ಸಾಯಿ ಶೂರ್ ರಾಗಿ ಹೆಲ್ತ್‌ ಮಿಕ್ಸ ವಿತರಣೆ ಆರಂಭಿಸಿದೆ. ಇಂದಿನ ಮಕ್ಕಳು ದುಶ್ಚಟಗಳಿಗೆ ಬಲಿಯಾಗಿ ಅಪೌಷ್ಟಿಕತೆಗೆ ತುತ್ತಾಗುತ್ತಿದ್ದಾರೆ. ಇಂತಹ ಮಕ್ಕಳಲ್ಲಿ ಕಡಿಮೆ ಬುದ್ಧಿಶಕ್ತಿ, ಕುರುಡುತನ, ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡು ಶಾರೀರಿಕ ಬೆಳವಣಿಗೆ ಕುಂಠಿತವಾಗುತ್ತಿರುವುದನ್ನು ಕಾಣುತ್ತಿದ್ದೇವೆ ಎಂದರು.

ಹೀಗಾಗಿ ಸರ್ಕಾರ ಮಕ್ಕಳಲ್ಲಿನ ಅಪೌಷ್ಟಿಕತೆ ದೂರ ಮಾಡಲು ವಿಶೇಷ ಆಹಾರ ನೀಡಲಾರಂಭಿಸಿದೆ. ಜೋಳ ತಿಂದವನು ತೋಳವಾದ, ಅಕ್ಕಿ ತಿಂದವನು ಹಕ್ಕಿಯಾದ, ರಾಗಿ ತಿಂದವನು ನಿರೋಗಿ ಆದ ಎಂಬಂತೆ ಇಂದಿನ ಮಕ್ಕಳು ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಮನೆಯಲ್ಲಿ ತಂದೆ ತಾಯಂದಿರು ಕೂಡ ಮಕ್ಕಳ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು ಎಂದು ಹೇಳಿದರು.

ಸಿರಿಧಾನ್ಯ ಸೇವನೆಯೊಂದಿಗೆ ಪೂರ್ವಜರು ದೀರ್ಘಾಯುಷ್ಯದ ಬದುಕು ಕಂಡಿದ್ದಾರೆ. ಉತ್ತಮ ಆರೋಗ್ಯಕ್ಕಾಗಿ ಜೋಳ, ರಾಗಿ, ನವಣೆ, ಸಜ್ಜೆ ಮುಂತಾದ ಸಿರಿಧಾನ್ಯಗಳನ್ನು ಮನೆಯಲ್ಲಿ ಬಳಸಬೇಕು. ಸಿರಿಧಾನ್ಯಗಳಲ್ಲಿ ಕ್ಯಾಲ್ಸಿಯಂ, ವಿಟಮಿನ್, ಪೋಷಕಾಂಶಗಳಿವೆ. ಇದನ್ನು ಸೇವಿಸುವುದರಿಂದ ವಿವಿಧ ಕಾಯಿಲೆಗಳನ್ನು ಹತೋಟಿಯಲ್ಲಿ ಇರಿಸಬಹುದು ಎಂದು ತಿಳಿಸಿದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಚ್.ಎಸ್. ರಾಮನಗೌಡ್ರ ಮಾತನಾಡಿ, ಜೀವನದಲ್ಲಿ ಏನೆಲ್ಲ ಗಳಿಸಬಹುದು, ಕೊಂಡುಕೊಳ್ಳಬಹುದು. ಆದರೆ ಆರೋಗ್ಯ ಗಳಿಸಲಾರದ ಸಂಪತ್ತು. ಬೇರೆಲ್ಲಿಯೂ ಸಿಗುವ ವಸ್ತು ಅಲ್ಲ. ಇದು ದೇವರು ಕೊಟ್ಟ ಭಾಗ್ಯ. ಹೀಗಾಗಿ ಆರೋಗ್ಯ ರಕ್ಷಿಸಿಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಸಲಹೆ ನೀಡಿದರು.

ಸದೃಢವಾದ ಆರೋಗ್ಯ ಇದ್ದಲ್ಲಿ ಸದೃಢವಾದ ಮನಸ್ಸು ಇರುತ್ತದೆ ಎನ್ನುವಂತೆ ಆರೋಗ್ಯ ಇದ್ದರೆ ಎಲ್ಲವನ್ನು ಅನುಭವಿಸಬಹುದು. ಆರೋಗ್ಯ ಕೆಟ್ಟರೆ ಏನನ್ನು ಮಾಡಲಾಗದು. ಕಾರಣ ಕ್ಷಣಿಕ ಸುಖಕ್ಕಿಂತ ತಾಯಂದಿರು ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಬೇಕು ಎಂದು ಕರೆ ನೀಡಿದರು.

ರಾಗಿ ತಿಂದವನು ನಿರೋಗಿ ಅನ್ನೋ ಮಾತು ಹಿಂದಿನಿಂದಲೂ ಬಂದಿದೆ. ಯಾಕೆಂದರೆ ರಾಗಿಯಲ್ಲಿ ಅಷ್ಟೊಂದು ಆರೋಗ್ಯಕಾರಿ ಅಂಶಗಳನ್ನು ಕಾಣಬಹುದಾಗಿದೆ. ಹತ್ತಾರು ರೋಗಗಳನ್ನು ನಿಯಂತ್ರಿಸುವ ಶಕ್ತಿ ರಾಗಿಯಲ್ಲಿದೆ. ರಾಗಿ ಸೇವನೆಯಿಂದ ರಿಲ್ಯಾಕ್ಸ್ ಮೂಡುತ್ತದೆ ಎಂದು ತಿಳಿಸಿದರು.

ನಿರ್ಮಲಾ ಶಿಗ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿ.ಎಸ್. ಭಜಂತ್ರಿ, ಬಿ.ಬಿ. ಕಳಸಾಪೂರ, ಎಂ.ಎ. ಬುಕಿಟಗಾರ, ಸಹದೇವ ಜಾಧವ, ವಿರೇಶ ಬಣಕಾರ, ಲಲಿತಾ ಮಾಳೆ, ಹರೀಶ, ಹುಚ್ಚಯ್ಯನಮಠ, ಗಣಪತಿ ಈರಕ್ಕನವರ, ಮುಖ್ಯೋಪಾಧ್ಯಾಯ ಪರಸಪ್ಪ ಬಂತಿ, ಕಾಶಪ್ಪ ಸ್ವಾಮಿ, ಡಿ.ಸಿ. ಕಾಳಪ್ಪನವರ, ಜಿ.ಎಫ್. ಡೊಂಬರ, ಬ್ಯಾಳಿ, ಮಕಾನದಾರ ಸೇರಿ ಅನೇಕರು ಇದ್ದರು.