ಕನ್ನಡಪ್ರಭ ವಾರ್ತೆ ಚಳ್ಳಕೆರೆ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಅವಧಿಯಲ್ಲಿ ಹೆಚ್ಚು ಅಧ್ಯಯನದ ಕಡೆಗೆ ಆಸಕ್ತಿ ವಹಿಸಿ ಶೈಕ್ಷಣಿಕವಾಗಿ ಸಾಧನೆಗೆ ಮುಂದಾಗಬೇಕು ಎಂದು ಚಿತ್ರದುರ್ಗ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ.ಶಿವಕುಮಾರ್ ದಂಡಿನ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಪೊಲೀಸ್ ಇಲಾಖೆ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಕುರಿತ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾದಕ ವಸ್ತುಗಳನ್ನು ಬಳಸಬಾರದು. ವಿದ್ಯಾರ್ಥಿ ಜೀವನದಲ್ಲಿ ಓದಿನ ಕಡೆಗೆ ಆಸಕ್ತರಾಗಬೇಕು. ಉತ್ತಮ ಸ್ನೇಹಿತರ ಸಂಪಾದನೆ ಮಾಡಬೇಕು. ಉತ್ತಮರ ಸಂಗ ಉತ್ತಮ ಮಾರ್ಗದ ಕಡೆಗೆ ಕೊಂಡೊಯ್ಯಲಿದೆ. ಕೆಟ್ಟವರ ಸಹವಾಸ ಮಾಡಿ ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಕಿವಿ ಮಾತು ಹೇಳಿದರು.

ಮಾದಕ ವಸ್ತುಗಳ ಸೇವನೆ ಕಾನೂನು ಪ್ರಕಾರ ಅಪರಾಧ. ಮಾರಾಟ ಮಾಡುವುದೂ ಸೇರಿದಂತೆ ಸೇವಿಸುವುದೂ ಕೂಡ ಅಪರಾಧವಾಗಿದೆ. ಇದಲ್ಲದೇ ಆರೋಗ್ಯ ಹಾಳಾಗುವುದರಿಂದ ಯಾವುದೇ ಮಾದಕ ವಸ್ತುಗಳ ಬಳಕೆ ಮಾಡಬಾರದು. ಹೆಣ್ಣುಮಕ್ಕಳನ್ನು ಚುಡಾಯಿಸುವುದೂ ಕೂಡ ಅಪರಾಧ. ಮಾದಕ ವಸ್ತು ಸೇವನೆಯಿಂದ ಮನುಷ್ಯನ ಮಾನಸಿಕ ಸ್ಥಿತಿ ಅಸಮತೋಲನದಿಂದ ಕೂಡಿರುತ್ತದೆ ಎಂದರು.


ಬದಲಾದ ಕಾಲಘಟ್ಟದಲ್ಲಿ ಪ್ರತಿಯೊಬ್ಬರೂ ಮೊಬೈಲ್ ಬಳಕೆ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಕೂಡ ಬಳಸುವುದರಿಂದ ಎಚ್ಚರಿಕೆ ಅಗತ್ಯ. ಸೈಬರ್ ಕ್ರೈಂ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವ ಕೆಲಸ ನಿರಂತರವಾಗಿ ಮಾಡುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.

ಮಹಿಳೆಯರ ಸುರಕ್ಷತೆ ಬಗ್ಗೆ ಸಮಾಜದ ಎಲ್ಲರೂ ಪೋಲೀಸರೊಂದಿಗೆ ಕೈಗೊಡಿಸಬೇಕು. ಜನರೊಂದಿಗೆ ಪೋಲೀಸರ ಸಹಕಾರ ಇದ್ದಾಗ ಸಮಾಜದ ಅನಿಷ್ಟಗಳ ತಡೆಗಟ್ಟಲು ಸುಲಭವಾಗುತ್ತದೆ ಎಂದರು.

ಡಿವೈಎಸ್‌ಪಿ ಸತ್ಯನಾರಾಯಣರಾವ್ ಮಾತನಾಡಿ, ಇಲಾಖೆ ಎಲ್ಲಾ ಹಂತದಲ್ಲೂ ಎಲ್ಲವನ್ನೂ ಗಮನಿಸಿರುತ್ತದೆ. ಯಾವುದೇ ತಪ್ಪು ಮಾಡಿದವರು ಪೋಲೀಸರಿಗೆ ಒಂದಲ್ಲ ಒಂದು ದಿನ ಸಿಕ್ಕಿ ಹಾಕಿಕೊಳ್ಳುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಹೇಳಿದರು.

ವೃತ್ತ ನಿರೀಕ್ಷಕ ಕೆ.ಕುಮಾರ್ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ರಾಜಣ್ಣ ಮತ್ತಿತರರು ಇದ್ದರು.