ಸಾರಾಂಶ
ಶೃಂಗೇರಿ: ಮನುಷ್ಯನಿಗೆ ಬದುಕಲು ನೀರು, ಗಾಳಿ,ಆಹಾರ ಹೇಗೆ ಅವಶ್ಯವೋ ಹಾಗೆಯೇ ನಾಗರಿಕ ಸಮಾಜದಲ್ಲಿ ದಿನನಿತ್ಯದ ಬದುಕಿನಲ್ಲಿ ಕಾನೂನುಗಳು ಪ್ರಚಲಿತವಾಗಿದ್ದು, ಪ್ರತಿಯೊಬ್ಬರೂ ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳು ಕಾನೂನಿನ ಅರಿವು ಮೂಡಿಸಿಕೊಳ್ಳಬೇಕು ಎಂದು ಶೃಂಗೇರಿ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ ಆರ್.ಎಸ್.ಜೀತು ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಜೆಸಿಬಿಎಂ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾನೂನು ಮಾಹಿತಿ ಹಾಗೂ ವಿದ್ಯಾರ್ಥಿ ಗಳೊಂದಿಗೆ ಸಂವಾದದಲ್ಲಿ ಮಾತನಾಡಿದರು. ಮನೆಯಲ್ಲಿ ಮಕ್ಕಳು ಜಗಳವಾಡಿಕೊಳ್ಳುತ್ತಾರೆ. ಜಗಳ ಮಾಡಿ ಪೊಲೀಸ್ ಠಾಣೆಗೋ ಅಥವಾ ನ್ಯಾಯಾಲಯಕ್ಕೆ ಹೋಗುವುದಿಲ್ಲ. ಬದಲಾಗಿ ಪೋಷಕರು, ಹಿರಿಯರಲ್ಲಿ ದೂರು ಕೊಡುತ್ತಾರೆ. ಅವರು ಇತ್ಯರ್ಥ ಪಡಿಸುತ್ತಾರೆ. ಅದೇ ರೀತಿ ರಾಜಿಗೆ ಬರಬಹುದಾದಂತಹ ಪ್ರಕರಣಗಳನ್ನು ಮದ್ಯಸ್ಥಿಕೆ ಸಂದಾನದ ಮೂಲಕ ಬಗೆಹರಿಸಲಾಗುತ್ತದೆ.ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೇ ಸಾಕಷ್ಟು ಪ್ರಕರಣಗಳು ಬಾಕಿ ಉಳಿದಿವೆ. ಅಂತಹ ಪ್ರಕರಣಗಳನ್ನು ಲೋಕ್ ಅದಾಲತ್, ಮದ್ಯಾಸ್ಥಿಕೆ,ರಾಜಿ ಸಂದಾನಗಳ ಮೂಲಕ ಬಗೆಹರಿಸಲಾಗುತ್ತಿದೆ. ಎಷ್ಟೋ ಜನರು ಕಾನೂನಿನ ಜ್ಞಾನವಿಲ್ಲದೇ ಕಚೇರಿ ,ನ್ಯಾಯಾಲಯಗಳಿಗೆ ಓಡಾಟ ನಡೆಸುತ್ತಾರೆ. ಪ್ರತಿಯೊಬ್ಬರಿಗೂ ಕಾನೂನಿನ ಜ್ಞಾನ ಸಿಗಬೇಕು ಎಂಬ ಉದ್ದೇಶದಿಂದ ಕಾನೂನು ಸೇವಾ ಪ್ರಾಧಿಕಾರ ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿದೆ.
ವಿದ್ಯಾರ್ಥಿಗಳು ಸಿವಿಲ್ ಹಾಗೂ ಕ್ರಿಮಿನಲ್ ಕಾನೂನುಗಳ ಬಗ್ಗೆ, ನಮ್ಮಸಂವಿಧಾನ, ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತ, ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು ಪ್ರತಿಯೊಬ್ಬರೂ ಪೊಲೀಸ್ ಕಾನೂನು, ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕು. ಮೋಟಾರು ವಾಹನ ಕಾಯ್ದೆ, ರಸ್ತೆ ಸುರಕ್ಷಾ ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕು. ಅಪರಾಧ ಪ್ರಕರಣಗಗಳನ್ನು ಸಾಧ್ಯವಾದಷ್ಟು ತಡೆಗಟ್ಟಬಹುದು ಎಂದರು.ನ್ಯಾಯಾಧೀಶರ ನೇಮಕ, ಅರ್ಹತೆ, ನ್ಯಾಯಾಂಗದ ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಕಾರ್ಯಕ್ರಮದಲ್ಲಿ ಜೆಸಿಬಿಎಂ ಕಾಲೇಜಿನ ಉಪನ್ಯಾಸಕ ಸಂತೋಷ್ ಕುಮಾರ್, ಸಹಾಯಕ ಸರ್ಕಾರಿ ಅಭಿಯೋಜಕಿ ಹರಿಣಾಕ್ಷಿ, ವಕೀಲರ ಸಂಘದ ಅಧ್ಯಕ್ಷ ಮಹೇಶ್, ವಕೀಲರು, ಮತ್ತಿತರರು ಉಪಸ್ಥಿತರಿದ್ದರು. ಶಿರಸ್ತೇದಾರ್ ಅನಂತ್ ಸ್ವಾಗತಿಸಿ ನಿರೂಪಿಸಿದರು. ವಕೀಲ ಪ್ರದೀಪ್ ವಂದಿಸಿದರು.
5 ಶ್ರೀ ಚಿತ್ರ 1-ಶೃಂಗೇರಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಜೆಸಿಬಿಎಂ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾನೂನು ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು.