ವಿದ್ಯಾರ್ಥಿಗಳು ಸಮಾಜಮುಖಿಗಳಾಗಲಿ : ಎಸ್.ನಾಗಣ್ಣ

| Published : Sep 03 2024, 01:32 AM IST

ಸಾರಾಂಶ

ಪರಿಪೂರ್ಣತೆ ಬರುವುದು ತಪ್ಪುಗಳನ್ನು ಸರಿಪಡಿಸಿಕೊಂಡು ಸಾಗಿದಾಗ. ಅವಲಂಬಿತ ಜೀವನವನ್ನು ನಡೆಸುತ್ತಿರುವ ಭಾರತೀಯರಲ್ಲಿ ಸೃಜನಶೀಲತೆ ಮಾಯವಾಗಿದೆ. ದೇಶದ ಜನಸಂಖ್ಯೆ 150 ಕೋಟಿ ಸಮೀಪಿಸುತ್ತಿರುವಾಗ ಜನಸಂಖ್ಯೆಯ ಶೇ.50ಕ್ಕೂ ಹೆಚ್ಚಿರುವ ಯುವಸಮೂಹವು ಭವಿಷ್ಯದ ಭಾರತವನ್ನು ಕಟ್ಟಬೇಕು.

ತುಮಕೂರು: ವಿದ್ಯಾರ್ಥಿಗಳು ಅಂತರ್ಮುಖಿಗಳಾಗದೆ ಸಮಾಜಮುಖಿಗಳಾಗಬೇಕು. ಸಮಾಜಕ್ಕೆ ತೆರೆದುಕೊಳ್ಳದೆ ಹೋದಾಗ ಅಭಿವ್ಯಕ್ತಿ ಕುಸಿಯುತ್ತದೆ ಎಂದು ಪತ್ರಕರ್ತ ಎಸ್.ನಾಗಣ್ಣ ಹೇಳಿದರು.

ತುಮಕೂರು ವಿವಿ ವಾಣಿಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗವು ಸೋಮವಾರ ಆಯೋಜಿಸಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಪರಿಪೂರ್ಣತೆ ಬರುವುದು ತಪ್ಪುಗಳನ್ನು ಸರಿಪಡಿಸಿಕೊಂಡು ಸಾಗಿದಾಗ. ಅವಲಂಬಿತ ಜೀವನವನ್ನು ನಡೆಸುತ್ತಿರುವ ಭಾರತೀಯರಲ್ಲಿ ಸೃಜನಶೀಲತೆ ಮಾಯವಾಗಿದೆ. ದೇಶದ ಜನಸಂಖ್ಯೆ 150 ಕೋಟಿ ಸಮೀಪಿಸುತ್ತಿರುವಾಗ ಜನಸಂಖ್ಯೆಯ ಶೇ.50ಕ್ಕೂ ಹೆಚ್ಚಿರುವ ಯುವಸಮೂಹವು ಭವಿಷ್ಯದ ಭಾರತವನ್ನು ಕಟ್ಟಬೇಕು ಎಂದರು.

ಪಾಶ್ಚಿಮಾತ್ಯ ದೇಶಗಳಲ್ಲಿ ದುಡಿಯುವವರ ಸಂಖ್ಯೆ ಕಡಿಮೆಯಾಗಿರುವ ಕಾರಣ, ಅವರಿಗಾಗಿ ದುಡಿಯುವವರನ್ನುಇತರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದಾರೆ. ಭಾರತ ದುಡಿಯುವ ಮಂದಿಯನ್ನು ರಫ್ತು ಮಾಡುವ ದೇಶವಾಗಿದೆ. ಆನ್ವಯಿಕ, ಪ್ರಯೋಗಶೀಲ, ಕ್ರಿಯಾಶೀಲ ಶಿಕ್ಷಣ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.

ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಮಾನವೀಯ ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳುವುದೇ ಉನ್ನತ ಶಿಕ್ಷಣದ ಗುರಿ. ತರಗತಿಗಳಲ್ಲಿ ಕಲಿತ ಪಾಠವನ್ನು ಪ್ರಾಯೋಗಿಕವಾಗಿ ಅನ್ವಯಿಸಿಕೊಳ್ಳಬೇಕು ಎಂದು ಹೇಳಿದರು.

ಕುಲ ಸಚಿವೆ ನಾಹಿದಾ ಜಮ್‌ಜಮ್, ವಿವಿ ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಅಧ್ಯಕ್ಷ ಪ್ರೊ.ಬಿ.ಶೇಖರ್, ಪ್ರಾಧ್ಯಾಪಕ ಪ್ರೊ.ಪಿ.ಪರಮಶಿವಯ್ಯ, ಪ್ರೊ.ಜಿ.ಸುದರ್ಶನರೆಡ್ಡಿ, ಉಪನ್ಯಾಸಕ ವಿಜಯ್‌.ಎನ್, ರಕ್ಷಿತ ಉಪಸ್ಥಿತರಿದ್ದರು.