ತಿಪಟೂರಿನ ಲೆಕ್ಕಪರಿಶೋಧಕರಾದ ಮಧುಕುಮಾರ್ ಎಂ.ಜೆ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ೧೫೦೦೦ ರು. ನಗದು ಬಹುಮಾನ ವಿತರಿಸಿ ಸ್ಫೂರ್ತಿದಾಯಕ ಮಾತುಗಳನ್ನಾಡಿದರು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಉಪ ಪ್ರಾಂಶುಪಾಲ ಉಮೇಶ್ ಗೌಡ ನಡೆಸಿಕೊಟ್ಟರು.

ಕನ್ನಡಪ್ರಭವಾರ್ತೆ ತಿಪಟೂರು

ತಿಪಟೂರು ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ತನ್ನದೇ ಆದ ಇತಿಹಾಸವಿದ್ದು ಅದನ್ನು ಉಳಿಸಿ ಬೆಳೆಸುವ ಗುರುತರ ಜವಾಬ್ದಾರಿ ವಿದ್ಯಾರ್ಥಿಗಳಾದ ತಮ್ಮೆಲ್ಲರದ್ದು ಎಂದು ಶಾಸಕ ಕೆ. ಷಡಕ್ಷರಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ೨೦೨೫-೨೬ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಪ್ರತಿಭಾ ಸಿರಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಜೀವನ ಮಾರ್ಗಗಳನ್ನು ಕಂಡುಕೊಳ್ಳಬೇಕು. ನಾನು ಶಿಕ್ಷಣ, ಆರೋಗ್ಯ, ನೀರಾವರಿ, ವಿದ್ಯುತ್ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಿ ಶಾಲಾ-ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಶ್ರಮಿಸುತ್ತಿದ್ದೇನೆ ಎಂದು ತಿಳಿಸಿದರು.

ಖ್ಯಾತ ವಿಮರ್ಶಕರಾದ ಡಾ.ಎಚ್. ಸತ್ಯನಾರಾಯಣ ಸಮಾರೋಪ ಭಾಷಣದಲ್ಲಿ, ವಿದ್ಯೆಗೆ ಬಡತನ ಶಾಪವಲ್ಲ ವರ ಎಂದು ವಿವಿಧ ಗಣ್ಯರ ಜೀವನ ಕಥೆಗಳನ್ನು ಹೇಳಿದರು. ಶಿಕ್ಷಣ ಎಂದರೆ ಕೇವಲ ಅಂಕಗಳಿಕೆ ಅಲ್ಲ. ಪಠ್ಯೇತರ ಚಟುವಟಿಕೆ ನೃತ್ಯ, ಗಾಯನ, ನಾಟಕ, ಜನಪದ ಕಲೆ ಹಾಗೂ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರ ಮೂಲಕ ಪರಿಪೂರ್ಣ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕೆಂದು ಹೇಳಿದರು.

ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಅರಿವಳಿಕೆ ತಜ್ಞ ಡಾ. ಶರತ್ ಟಿ.ಆರ್ ವಿದ್ಯಾರ್ಥಿ ಜೀವನದಲ್ಲಿ ಬಾಯ್ಸ್ ಕಾಲೇಜಿನಲ್ಲಿ ಓದುತ್ತಿದ್ದಾಗ ಹಾಸ್ಟೆಲ್ ಸೌಲಭ್ಯ ಕಲ್ಪಿಸಿದ ಶಾಸಕರ ಸಹಾಯ ಹಸ್ತ ಸ್ಮರಿಸಿ ವಿದ್ಯಾರ್ಥಿಗಳು ಕೀಳರಿಮೆ ತೊರೆದು ಆತ್ಮ ವಿಶ್ವಾಸ ಹಾಗೂ ಪರಿಶ್ರಮದಿಂದ ಯಶಸ್ಸು ಪಡೆಯಬಹುದು ಎಂದರು.

ತಿಪಟೂರಿನ ಲೆಕ್ಕಪರಿಶೋಧಕರಾದ ಮಧುಕುಮಾರ್ ಎಂ.ಜೆ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ೧೫೦೦೦ ರು. ನಗದು ಬಹುಮಾನ ವಿತರಿಸಿ ಸ್ಫೂರ್ತಿದಾಯಕ ಮಾತುಗಳನ್ನಾಡಿದರು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಉಪ ಪ್ರಾಂಶುಪಾಲ ಉಮೇಶ್ ಗೌಡ ನಡೆಸಿಕೊಟ್ಟರು.

ಪ್ರಾಂಶುಪಾಲ ಎಂ.ಡಿ. ಶಿವಕುಮಾರ್ ಪ್ರಾಸ್ತಾವಿವಾಗಿ ಮಾತನಾಡಿದರು. ಪೂರ್ಣಿಮಾ ಮತ್ತು ತನುಶ್ರೀ ಅವರು ಕಾಲೇಜಿನ ವಾರ್ಷಿಕ ವರದಿ ಓದಿದರು. ದೈಹಿಕ ಶಿಕ್ಷಣ ಉಪನ್ಯಾಸಕ ಷಡಕ್ಷರಿ ಕ್ರೀಡಾ ವರದಿ ವಾಚಿಸಿದರು.