ಸಾರಾಂಶ
ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು: ನ್ಯಾ. ದಾಸರಿ ಕ್ರಾಂತಿ ಕಿರಣ್ ಕರೆ
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟೀಯ ಕಾನೂನು ಸೇವಾ ದಿನ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಕಾಲೇಜು ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ದಾಸರಾಗದೆ ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕು ಎಂದು ಸಿವಿಲ್ ನ್ಯಾಯಾಧೀಶ ದಾಸರಿ ಕ್ರಾಂತಿ ಕಿರಣ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಗುರುವಾರ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೆ.ಎಂ.ಎಫ್.ಸಿ. ನ್ಯಾಯಾಲಯ, ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘದ ಆಶ್ರಯದಲ್ಲಿ ರಾಷ್ಟೀಯ ಕಾನೂನು ಸೇವಾ ದಿನ ಅಂಗವಾಗಿ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ, ಸರ್ಕಾರ ಕಾನೂನು ಸಾಕ್ಷರತಾ ಕಾರ್ಯಕ್ರಮದಡಿ ಕಾನೂನು ಸೇವಾ ಸಮಿತಿ ಮೂಲಕ ಇಂದು ಬಡವರಿಗೆ, ನೊಂದವರಿಗೆ ಉಚಿತ ಕಾನೂನು ಸಲಹೆ ನೀಡುವ ಮೂಲಕ ನ್ಯಾಯ ದೊರಕಿಸಿ ಕೊಡುವ ಕಾರ್ಯ ಮಾಡುತ್ತಿದೆ. ಕೆಲವರು ಹಣವಿದ್ದರೆ ಮಾತ್ರ ನ್ಯಾಯಾಲಯದ ಮೊರೆ ಹೋಗಬೇಕು. ಇಲ್ಲವಾದಲ್ಲಿ ನಮಗೆ ನ್ಯಾಯ ದೊರಕುವುದಿಲ್ಲ ಎಂಬ ತಪ್ಪು ಭಾವನೆ ಇಟ್ಟುಕೊಂಡಿದ್ದಾರೆ. ಆದರೆ, ಕಾನೂನು ಸೇವಾ ಸಮಿತಿಗೆ ನೊಂದವರು, ಬಡವರ ಜಮೀನಿನ ಪ್ರಕರಣ, ಕೌಟುಂಬಿಕ ಕಲಹ ಪ್ರಕರಣ ಸೇರಿದಂತೆ ಯಾವುದೇ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯ ದೊರಕಿಸಿಕೊಡುವಂತೆ ಅರ್ಜಿ ಹಾಕಿದರೆ ಉಚಿತವಾಗಿ ವಕೀಲರನ್ನು ನೇಮಿಸಿ ನ್ಯಾಯವನ್ನು ಒದಗಿಸಿ ಕೊಡಲಾಗುತ್ತದೆ ಎಂದರು. ವಕೀಲ ಎಚ್.ಎ.ಸಾಜು ಮಾದಕ ದ್ರವ್ಯ ನಿಷೇಧ ಕಾಯ್ದೆ ಬಗ್ಗೆ ಉಪನ್ಯಾಸ ನೀಡಿ, ಮಾದಕ ವಸ್ತುಗಳನ್ನು ಮಾರಾಟ ಮಾಡುವ ಜಾಲ ಕಾಲೇಜಿನ ವಿದ್ಯಾರ್ಥಿಗಳನ್ನೇ ಗುರಿಯನ್ನಾಗಿಸಿಕೊಂಡಿದೆ. ವಿದ್ಯಾರ್ಥಿ ಗಳು, ಯುವ ಜನಾಂಗದವರು ಇಂತಹ ವ್ಯಸನದ ಮುಕ್ತರಾಗಬೇಕು. ಮಾದಕ ವಸ್ತುಗಳ ಸೇವನೆಯಿಂದ ಮಾನಸಿಕ, ದೈಹಿಕವಾಗಿ ಖಿನ್ನತೆಗೆ ಒಳಪಡುವುದಲ್ಲದೆ ಸಮಾಜ ಘಾತುಕ ಕೃತ್ಯಕ್ಕೆ ಮುಂದಾಗುತ್ತಾರೆ ಎಂದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಸಂತೋಷ್‌ಕುಮಾರ್ ಮಾತನಾಡಿ, ಕಾನೂನು ಎಲ್ಲರಿಗೂ ಒಂದೇ. ಅದಕ್ಕಾಗಿ ಮೊದಲು ಕಾನೂನಿನ ಬಗ್ಗೆ ಅರಿವು ಹೊಂದಬೇಕು. ಕಾನೂನಿನ ಬಗ್ಗೆ ಅರಿವಿಲ್ಲ ಎಂದು ಅಪರಾಧ ಎಸಗಿದರೆ ಅದಕ್ಕೆ ಕ್ಷಮೆ ಇಲ್ಲ. ಸರ್ಕಾರದಿಂದ ಕಾನೂನು ಅರಿವಿನ ಬಗ್ಗೆ ಸಾಕಷ್ಟು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು. ಪಿಎಸ್‌ಐ ಗುರುಸಜ್ಜನ್ ಮಾತನಾಡಿ, ಒಮ್ಮೆ ಮಾದಕ ವ್ಯಸನಕ್ಕೆ ದಾಸರಾದರೆ ಅದರಿಂದ ಹೊರ ಬರಲು ಕಷ್ಟ. ಮಾದಕ ವಸ್ತುಗಳನ್ನು ಸೇವನೆ ಮಾಡುವುದು ಅಪರಾಧ. ವಿದ್ಯಾರ್ಥಿಗಳು ಕಾನೂನು ಅರಿತು ನಿಮ್ಮ ಕುಟುಂಬದವರಿಗೂ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಧನಂಜಯ್ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸರ್ಕಾರಿ ಅಭಿಯೋಜಕ ಗದಿಗಪ್ಪ ನೇಕಾರ್, ಉಪನ್ಯಾಸಕ ಡಾ.ಮಂಜುನಾಥ್, ಉಪನ್ಯಾಸಕಿ ಬಿ.ಟಿ.ರೂಪ ಇದ್ದರು. ರಾಷ್ಟೀಯ ಕಾನೂನು ಸೇವಾ ದಿನದ ಅಂಗವಾಗಿ ಪಟ್ಟಣ ಪಂಚಾಯಿತಿ, ದೀಪ್ತಿ ಪ್ರೌಢ ಶಾಲೆಗಳಲ್ಲಿ ಸಹ ಕಾನೂನು ಅರಿವು ಕಾರ್ಯಕ್ರಮ ನಡೆಸಲಾಯಿತು.