ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎಸ್. ಮಾತನಾಡಿ, ಅಧ್ಯಯನ, ಜ್ಞಾನ ಸುಲಭ ಸಾಧ್ಯವಿಲ್ಲ. ಸತತ ಪರಿಶ್ರಮದಿಂದ ಮಾತ್ರ ನಾವು ಅಂದುಕೊಂಡಿದ್ದೆಲ್ಲವನ್ನೂ ಸಾಧಿಸಬಹುದು ಎಂದರು.
ಯಲ್ಲಾಪುರ: ಮಕ್ಕಳಿಗೆ ಸರಿಯಾದ ಸಂಸ್ಕಾರ ಕೊಟ್ಟಾಗ ಮಾತ್ರ ಮಕ್ಕಳು ಸನ್ಮಾರ್ಗದಲ್ಲಿ ನಡೆದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಈ ಕಾರ್ಯದಲ್ಲಿ ಪಾಲಕರ ಮತ್ತು ಶಿಕ್ಷಕರ ಹೊಣೆಗಾರಿಕೆ ಹೆಚ್ಚಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಪಟ್ಟಣದ ಕಾಳಮ್ಮ ನಗರದಲ್ಲಿರುವ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಪರಿಷತ್ತು, ಎನ್ಎಸ್ಎಸ್ ಘಟಕ, ರೆಡ್‌ಕ್ರಾಸ್ ಸೇರಿದಂತೆ ವಿವಿಧ ವೇದಿಕೆಗಳನ್ನು ಉದ್ಘಾಟಿಸಿ, ಮಾತನಾಡಿದರು.ಶಿಕ್ಷಣದ ಜತೆಗೆ ವಿದ್ಯಾರ್ಥಿಗಳು ತಮ್ಮ ಪ್ರತಿಭೆ, ಕೌಶಲ್ಯ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ನಿಮ್ಮ ಕಾಲೇಜಿಗೆ ಸುಂದರವಾದ ₹೫ ಕೋಟಿ ವೆಚ್ಚದಲ್ಲಿ ಸುಸಜ್ಜಿತ ಆಡಿಟೋರಿಯಂ ನಿರ್ಮಾಣ ಆಗುತ್ತಿದ್ದು, ಕೆಲಸ ದಿನಗಳಲ್ಲಿ ಉದ್ಘಾಟನೆಗೊಳ್ಳಲಿದೆ. ಬಹುಶಃ ಜಿಲ್ಲೆಯ ಬೇರೆಡೆ ಇಂತಹ ಆಡಿಟೋರಿಯಂ ಕಾಲೇಜುಗಳಿಗೆ ಇಲ್ಲ. ಅದನ್ನು ಸಮರ್ಥವಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದರು.
ಅಪರಾಧ ನಡೆದ ೪೮ ಗಂಟೆಗಳೊಳಗೆ ಅಪರಾಧಿಗಳನ್ನು ಹೆಡೆಮುರಿ ಕಟ್ಟಿ ಜಿಲ್ಲೆಯಲ್ಲಿ ಶಾಂತಿ ನೆಲೆಸುವಂತೆ ಮಾಡುವಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಯಶಸ್ವಿಯಾಗಿದ್ದಾರೆ. ಅಂತವರನ್ನು ಕರೆದು ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಿರುವುದು ಶ್ಲಾಘನೀಯ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎಸ್. ಮಾತನಾಡಿ, ಅಧ್ಯಯನ, ಜ್ಞಾನ ಸುಲಭ ಸಾಧ್ಯವಿಲ್ಲ. ಸತತ ಪರಿಶ್ರಮದಿಂದ ಮಾತ್ರ ನಾವು ಅಂದುಕೊಂಡಿದ್ದೆಲ್ಲವನ್ನೂ ಸಾಧಿಸಬಹುದು. ಬದುಕಿನಲ್ಲಿ ಗುಣಾತ್ಮಕ ಭಾವ ಇದ್ದರೆ ಮಾತ್ರ ಉತ್ತಮ ವ್ಯಕ್ತಿತ್ವ ಮತ್ತು ಜೀವನದಲ್ಲಿ ಬರುವ ಸವಾಲನ್ನು ಎದುರಿಸಿದಾಗ ಮಾತ್ರ ಶ್ರೇಷ್ಠ ಜೀವನ ನಿರ್ವಹಿಸಬಹುದು ಎಂದರು.
ಪ್ರಾಚಾರ್ಯ ಡಾ. ಆರ್.ಡಿ. ಜನಾರ್ದನ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಮುಖರಾದ ವಿಜಯ ಮಿರಾಶಿ, ಸುನಂದಾ ದಾಸ, ಶ್ರೀರಂಗ ಕಟ್ಟಿ, ಪ್ರೇಮಾ ನಾಯ್ಕ, ರಾಜೇಂದ್ರ ಬದ್ದಿ ಇತರರಿದ್ದರು. ಸಿಂದೂರ ಮತ್ತು ದೀಪಿಕಾ ಸ್ವಾಗತ ನೃತ್ಯ ಮಾಡಿದರು. ರೋಹಿಣಿ ಮತ್ತು ವೈಷ್ಣವಿ ಪ್ರಾರ್ಥಿಸಿದರು. ಪ್ರಾಧ್ಯಾಪಕ ಡಾ. ಓಂಪ್ರಕಾಶ ಸ್ವಾಗತಿಸಿದರು. ಸಹನಾ ನಿರ್ವಹಿಸಿದರು. ಕೀರ್ತನ ವಂದಿಸಿದರು.