ಆಧುನಿಕ ಯುಗದಲ್ಲಿ ಹಲವು ಪರಿವರ್ತನೆಗಳು ಆಗಿ ಓದುವ ಅಭ್ಯಾಸ ಕಡಿಮೆ ಆಗುತ್ತಿದೆ. ನಾವು ಪುಸ್ತಕವನ್ನು ನೋಡುತ್ತಿಲ್ಲ. ಗ್ರಂಥಾಲಯದ ಬಳಕೆ ಕಡಿಮೆ ಆಗಿದೆ. ಜೀವನಕ್ಕೆ ಅಂಕ ಅಷ್ಟೆ ಮುಖ್ಯ ಅಲ್ಲ. ಸಾಮಾಜಿಕವಾಗಿ ಬೆಳೆಯಲು ಸಿದ್ಧತೆಯನ್ನು ಮಾಡಿಕೊಳ್ಳಬೇಕು.

ಹೊನ್ನಾವರ: ವಿದ್ಯಾರ್ಥಿಗಳು ದಿನಪತ್ರಿಕೆಗಳನ್ನು ಓದುವ ಗುಣವನ್ನು ಬೆಳೆಸಿಕೊಳ್ಳಬೇಕು. ಓದು ಈಗಿನ ಯುಗಕ್ಕೆ ತಕ್ಕಂತೆ ಇರಬೇಕು. ಹೀಗಾಗಿ ಕನ್ನಡಪ್ರಭ ಪತ್ರಿಕೆಯ ಯುವ ಆವೃತ್ತಿ ಹೊಸ ಮೈಲಿಗಲ್ಲನ್ನು ಸಾಧಿಸಲಿದೆ. ಯುವ ಆವೃತ್ತಿಯು ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ ಎಂದು ಮುಗ್ವಾ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಐ.ವಿ. ನಾಯ್ಕ ತಿಳಿಸಿದರು.

ತಾಲೂಕಿನ ಕವಲಕ್ಕಿಯ ಶ್ರೀ ಸುಬ್ರಹ್ಮಣ್ಯ ಪ್ರೌಢಶಾಲೆಯಲ್ಲಿ ಶುಕ್ರವಾರ ಜರುಗಿದ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಆಧುನಿಕ ಯುಗದಲ್ಲಿ ಹಲವು ಪರಿವರ್ತನೆಗಳು ಆಗಿ ಓದುವ ಅಭ್ಯಾಸ ಕಡಿಮೆ ಆಗುತ್ತಿದೆ. ನಾವು ಪುಸ್ತಕವನ್ನು ನೋಡುತ್ತಿಲ್ಲ. ಗ್ರಂಥಾಲಯದ ಬಳಕೆ ಕಡಿಮೆ ಆಗಿದೆ. ಜೀವನಕ್ಕೆ ಅಂಕ ಅಷ್ಟೆ ಮುಖ್ಯ ಅಲ್ಲ. ಸಾಮಾಜಿಕವಾಗಿ ಬೆಳೆಯಲು ಸಿದ್ಧತೆಯನ್ನು ಮಾಡಿಕೊಳ್ಳಬೇಕು ಎಂದರು.

ವ್ಯಾಪಾರಸ್ಥರಾದ ಲಕ್ಷ್ಮೀಕಾಂತ ಹೆಗಡೆ ಮಾತನಾಡಿ, ಶಾಲೆಯ ಚಟುವಟಿಕೆಯ ಜತೆ ಪತ್ರಿಕೆಗಳನ್ನು ಓದುವ ಪ್ರವೃತ್ತಿ ಹೆಚ್ಚಳವಾಗಬೇಕು. ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುವಂತೆ ಕನ್ನಡಪ್ರಭ ಯುವ ಆವೃತ್ತಿ ಉತ್ತಮವಾಗಿ ಬರುತ್ತಿದೆ ಎಂದರು.

ತಾಲೂಕು ಕನ್ನಡಪ್ರಭ ವರದಿಗಾರ ಪ್ರಸಾದ ಹೆಗಡೆ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್‌ ದಾಸರಾಗಬಾರದು. ಸ್ಫರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸಾಧನೆಯನ್ನು ಮಾಡಲು ಪೈಪೋಟಿ ಇದೆ. ಪೈಪೋಟಿಯಲ್ಲಿ ಯಶಸ್ಸು ಗಳಿಸಲು ಕನ್ನಡಪ್ರಭ ಯುವ ಆವೃತ್ತಿ ಹೆಚ್ಚು ನೆರವಾಗಲಿದೆ ಎದರು.

ಕನ್ನಡಪ್ರಭ ಪ್ರಸರಣ ವಿಭಾಗದ ಎಂ.ಎಂ. ಕೊಟಗುಣಶಿ ಮಾತನಾಡಿ, ವಿದ್ಯಾರ್ಥಿಗಳು ಶ್ರದ್ಧೆಯನ್ನು ಬೆಳೆಸಿಕೊಳ್ಳಿ. ಶ್ರದ್ಧೆಯಿಂದ ಮಾಡಿದ ಕೆಲಸಗಳು ಯಶಸ್ಸನ್ನು ತರುತ್ತದೆ. ಪ್ರಾಮಾಣಿಕವಾಗಿ ಪ್ರಯತ್ನವನ್ನು ಮಾಡಿ. ಯುವ ಆವೃತ್ತಿಯನ್ನು ಪ್ರತಿನಿತ್ಯ ಓದಿ. ಅದರಲ್ಲಿನ ವಿಷಯಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಿ ಎಂದರು.ಇದೇ ವೇಳೆ ಕನ್ನಡಪ್ರಭ ವತಿಯಿಂದ ಮುಗ್ವಾ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ಐ.ವಿ. ನಾಯ್ಕ ಹಾಗೂ ವ್ಯಾಪಾರಸ್ಥರಾದ ಲಕ್ಷ್ಮೀಕಾಂತ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಶ್ರೀ ಸುಬ್ರಹ್ಮಣ್ಯ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಯು.ಜಿ. ತಿಮ್ಮಪ್ಪ ಸ್ವಾಗತಿಸಿದರು. ಶಿಕ್ಷಕಿ ಶೋಭಾ ಹೆಗಡೆ ನಿರೂಪಿಸಿದರು. ಈ ವೇಳೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.