ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರಮುಖ ಹಾಗೂ ನಿರ್ಣಾಯಕ ಪಾತ್ರ ನಿರ್ವಹಿಸುವ ಕಾರಣದಿಂದ ಯುವಜನತೆ ದೇಶದ ಪ್ರಗತಿ ಹಾಗೂ ಆಗುಹೋಗುಗಳನ್ನು ಅರ್ಥೈಸಿಕೊಂಡು, ರೈತರು, ಯುವ ಜನತೆಯ ಶ್ರೇಯಸ್ಸಿಗೆ ಶ್ರಮಿಸುವ ಯೋಗ್ಯ ವ್ಯಕ್ತಿಯ ಆಯ್ಕೆ ಮಾಡುವ ಜತೆಗೆ ವಿದ್ಯಾರ್ಥಿಗಳು ತಪ್ಪುಗಳನ್ನು ಖಂಡಿಸುವ ಗುಣ ಬೆಳೆಸಿಕೊಳ್ಳುವ ಮೂಲಕ ಆತ್ಮಸ್ಥೈರ್ಯ ಹಾಗೂ ಆತ್ಮವಿಶ್ವಾಸ ಹೆಚ್ಚಿಸಿಕೊಂಡು ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು ಎಂದು ಶಾಸಕ ಎಚ್.ಡಿ. ರೇವಣ್ಣ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರಮುಖ ಹಾಗೂ ನಿರ್ಣಾಯಕ ಪಾತ್ರ ನಿರ್ವಹಿಸುವ ಕಾರಣದಿಂದ ಯುವಜನತೆ ದೇಶದ ಪ್ರಗತಿ ಹಾಗೂ ಆಗುಹೋಗುಗಳನ್ನು ಅರ್ಥೈಸಿಕೊಂಡು, ರೈತರು, ಯುವ ಜನತೆಯ ಶ್ರೇಯಸ್ಸಿಗೆ ಶ್ರಮಿಸುವ ಯೋಗ್ಯ ವ್ಯಕ್ತಿಯ ಆಯ್ಕೆ ಮಾಡುವ ಜತೆಗೆ ವಿದ್ಯಾರ್ಥಿಗಳು ತಪ್ಪುಗಳನ್ನು ಖಂಡಿಸುವ ಗುಣ ಬೆಳೆಸಿಕೊಳ್ಳುವ ಮೂಲಕ ಆತ್ಮಸ್ಥೈರ್ಯ ಹಾಗೂ ಆತ್ಮವಿಶ್ವಾಸ ಹೆಚ್ಚಿಸಿಕೊಂಡು ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು ಎಂದು ಶಾಸಕ ಎಚ್.ಡಿ. ರೇವಣ್ಣ ಸಲಹೆ ನೀಡಿದರು.ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಯುವ ಸಂಸತ್ತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಕ್ಷೇತದ ಅಭಿವೃದ್ಧಿ ಹಾಗೂ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಸೌಲಭ್ಯಗಳ ಕೊರತೆ ಹಾಗೂ ಅನುಷ್ಠಾನ ಗೊಳಿಸುವಲ್ಲಿ ತೋರುತ್ತಿರುವ ತಾರತಮ್ಯ ಹಾಗೂ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ಹಾಗೂ ಉಪನ್ಯಾಸಕರು ಇಲ್ಲದೇ ಸರ್ಕಾರಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಉನ್ನತ್ತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಬೇಸರದಿಂದ ನುಡಿದರು.
ನೈಜ ವಿಧಾನಸಭಾ ಕಲಾಪದಂತೆಯೇ ಸಭಾಂಗಣವನ್ನು ಸಜ್ಜುಗೊಳಿಸಲಾಗಿತ್ತು. ಸ್ಪೀಕರ್, ಮುಖ್ಯಮಂತ್ರಿ, ಮಂತ್ರಿ, ವಿರೋಧ ಪಕ್ಷದ ನಾಯಕರು ಹಾಗೂ ವಿವಿಧ ಸಚಿವಾಲಯಗಳ ಮಂತ್ರಿಗಳ ಪಾತ್ರವನ್ನು ವಿದ್ಯಾರ್ಥಿಗಳು ಸಮರ್ಥವಾಗಿ ನಿರ್ವಹಿಸಿದರು. ನೂತನ ವಿಧಾನಸಭಾ ಸದಸ್ಯರ ಪ್ರಮಾಣ ವಚನ ಸ್ವೀಕಾರದೊಂದಿಗೆ ಆರಂಭವಾದ ಕಲಾಪ, ಶೂನ್ಯ ವೇಳೆ ಹಾಗೂ ಪ್ರಶ್ನೋತ್ತರ ವೇಳೆಯಲ್ಲಿ ಅತ್ಯಂತ ಅರ್ಥಗರ್ಭಿತ ಚರ್ಚೆಗೆ ಸಾಕ್ಷಿಯಾಯಿತು. ಶಿಕ್ಷಣ ನೀತಿ, ಗ್ರಾಮೀಣ ಭಾಗದ ಮೂಲ ಸೌಕರ್ಯ, ಯುವ ಜನತೆಯ ನಿರುದ್ಯೋಗ ಸಮಸ್ಯೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ, ಕೆರೆ ಹಾಗೂ ಜಮೀನಿಗೆ ನೀರು ಪೂರೈಕೆ ಮುಂತಾದ ಪ್ರಮುಖ ಸಾರ್ವಜನಿಕ ವಿ?ಯಗಳ ಕುರಿತು ಆಡಳಿತ ಮತ್ತು ವಿರೋಧ ಪಕ್ಷಗಳ ವಿದ್ಯಾರ್ಥಿಗಳು ಪರ-ವಿರೋಧ ತರ್ಕಬದ್ಧ ವಾದ ಮಂಡಿಸಿದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಮತ್ತು ರಾಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಯುವ ಸಂಸತ್ ಅಣಕು ಅಧಿವೇಶನವು ವಿದ್ಯಾರ್ಥಿಗಳಲ್ಲಿ ಭಾಷಣ ಕಲೆ, ಸಂವಹನ ಕೌಶಲ, ವಿಮರ್ಶಾತ್ಮಕ ಚಿಂತನೆ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಹೊಣೆಗಾರಿಕೆ, ಪ್ರಜಾಪ್ರಭುತ್ವ ವ್ಯವಸ್ಥೆ, ಸಂಸದೀಯ ಕಲಾಪಗಳು ಹಾಗೂ ನಾಯಕತ್ವ ಗುಣಗಳ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮವು ಸಹಕಾರಿಯಾಗುವ ಜತೆಗೆ ಅತ್ಯಂತ ಯಶಸ್ವಿಯಾಗಿ ಜರುಗಿತು.
ತಹಸೀಲ್ದಾರ್ ವೈ.ಎಂ. ರೇಣುಕುಮಾರ್, ಪ್ರಾಂಶುಪಾಲ ಡಾ. ಗುರುರಾಜ್, ತಾಲೂಕು ಪಂಚಾಯಿತಿ ಇಒ ಮುನಿರಾಜು, ಬಿಇಒ ಸೋಮಲಿಂಗೇಗೌಡ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಭೈರಯ್ಯ ಹಾಗೂ ಪುರಸಭೆ ಮುಖ್ಯಾಧಿಕಾರಿ ಶಿವಶಂಕರ್, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ತಾಲೂಕಿನ ವಿವಿಧ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದರು.