ದೇಶದ ಪ್ರತಿಯೊಬ್ಬ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸಾರ್ವಜನಿಕ ಸೇವೆಯ ಮೂಲಕ ಅಭಿವೃದ್ಧಿಗೊಳಿಸುವುದೇ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಮುಖ್ಯ ಉದ್ದೇಶವಾಗಿದೆ.
ಮುಂಡರಗಿ: ವಿದ್ಯಾರ್ಥಿಗಳಿಗೆ ಗ್ರಾಮೀಣ ಬದುಕಿನ ನೈಜ ಚಿತ್ರಣವನ್ನು ಪರಿಚಯಿಸುವ ಕಾರ್ಯವನ್ನು ರಾಷ್ಟ್ರೀಯ ಸೇವಾ ಯೋಜನಾ ಶಿಬಿರ ಮಾಡಲಿದೆ. ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ವಿದ್ಯಾರ್ಥಿಗಳು ರಾಷ್ಟ್ರಪ್ರೇಮ ಮತ್ತು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಡಾ. ಅನ್ನದಾನೀಶ್ವರ ಸ್ವಾಮೀಜಿ ತಿಳಿಸಿದರು.ಶನಿವಾರ ಸಂಜೆ ಶ್ರೀ ಜ.ಅ.ವಿ. ಸಮಿತಿಯ ಕೆ.ಆರ್. ಬೆಲ್ಲದ ಮಹಾವಿದ್ಯಾಲಯವು ದತ್ತು ಗ್ರಾಮ ನಾಗರಹಳ್ಳಿಯಲ್ಲಿ ಕವಿವಿ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಜಿಪಂ, ತಾಪಂ, ಗ್ರಾಪಂ ಹೆಸರೂರ ಇವುಗಳ ಆಶ್ರಯದಲ್ಲಿ ಜರುಗಿದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ದೇಶದ ಪ್ರತಿಯೊಬ್ಬ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸಾರ್ವಜನಿಕ ಸೇವೆಯ ಮೂಲಕ ಅಭಿವೃದ್ಧಿಗೊಳಿಸುವುದೇ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಮುಖ್ಯ ಉದ್ದೇಶವಾಗಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಸಮಿತಿಯ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ ಮಾತನಾಡಿ, ಎನ್ಎಸ್ಎಸ್ ಶಿಬಿರ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮವನ್ನು ಕಲಿಸುವ ಮೂಲಕ ಮನಸ್ಸನ್ನು ಗಟ್ಟಿಗೊಳಿಸುತ್ತದೆ. ಸಂಘಟನಾ ಮನೋಭಾವ ಬೆಳೆಸುತ್ತದೆ ಎಂದರು. ಕಾಲೇಜು ಮೇಲ್ವಿಚಾರಣಾ ಸಮಿತಿ ಕಾರ್ಯಾಧ್ಯಕ್ಷ ಪ್ರೊ. ಆರ್.ಎಲ್. ಪೊಲೀಸಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕೃಷಿ ಪಂಡಿತ ಈಶ್ವರಪ್ಪ ಹಂಚಿನಾಳ, ಜ.ಅ.ಪ.ಪೂ. ಕಾಲೇಜಿನ ಕಾರ್ಯಾಧ್ಯಕ್ಷ ಕರಬಸಪ್ಪ ಹಂಚಿನಾಳ, ಎಂ.ಎಸ್. ಡಂಬಳ ಶಾಲೆಯ ಕಾರ್ಯಾಧ್ಯಕ್ಷ ಎಂ.ಎಸ್. ಶಿವಶೆಟ್ಟಿ, ಕ.ರಾ. ಬೆಲ್ಲದ ಕಾಲೇಜಿನ ಉಪಕಾರ್ಯಾಧ್ಯಕ್ಷ ವೀರನಗೌಡ ಗುಡದಪ್ಪನವರ, ಗ್ರಾಪಂ ಅಧ್ಯಕ್ಷ ರಾಮವ್ವ ಗುಡಿಮನಿ, ಪ್ರಾ. ಸಂತೋಷ ಹಿರೇಮಠ, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಡಾ. ಕುಮಾರ ಜೆ., ಹನುಮರಡ್ಡಿ ಮಾದನೂರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಡಾ. ಮನೋಜ ಕೋಪರ್ಡೆ ಸ್ವಾಗತಿಸಿದರು. ಡಾ. ವನಜಾಕ್ಷಿ ಭರಮಗೌಡರ್ ನಿರೂಪಿಸಿ, ಡಾ. ಸಚಿನ್ ಉಪ್ಪಾರ ವಂದಿಸಿದರು.