ವಿದ್ಯುತ್ ದೀಪಾಲಂಕಾರ, ದೇಶಿ, ಸ್ವದೇಶಿ ತಳಿಯ ಸಸಿಗಳ ಹಚ್ಚಿ ಸುಂದರ ಉದ್ಯಾನ ನಿರ್ಮಿಸಲಾಗುವುದು.

ಕನಕಗಿರಿ: ತುಂಗಭದ್ರ ನದಿ ನೀರಿನಿಂದ ತುಂಬಿ ತುಳುಕುತ್ತಿರುವ ಲಕ್ಷ್ಮೀದೇವಿ ಕೆರೆಯನ್ನು ಪ್ರವಾಸೋದ್ಯಮಕ್ಕೆ ಕೇಂದ್ರ ಸರ್ಕಾರದ 2.0 ಅಡಿಯಲ್ಲಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ಪಪಂ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಹೇಳಿದರು.

ಅವರು ಮಂಗಳವಾರ ಪಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಲಕ್ಷ್ಮೀದೇವಿ ಕೆರೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬಂದರೂ ಪಟ್ಟಣಕ್ಕೆ ಸಮೀಪವಿರುವುದರಿಂದ ಜನರಿಗೆ ಅನುಕೂಲವಾಗುವ ಮತ್ತು ಕೆರೆಯ ಸೌಂದರ್ಯ ವೀಕ್ಷಿಸಲು ಬೊಟ್ ವ್ಯವಸ್ಥೆ, ವಿದ್ಯುತ್ ದೀಪಾಲಂಕಾರ, ದೇಶಿ, ಸ್ವದೇಶಿ ತಳಿಯ ಸಸಿಗಳ ಹಚ್ಚಿ ಸುಂದರ ಉದ್ಯಾನ ನಿರ್ಮಿಸಲಾಗುವುದು. ಪ್ರವಾಸೋದ್ಯಮದ ಹಿತದೃಷ್ಟಿಯಿಂದ ಮಾಡಲಾಗುವ ಕಾಮಗಾರಿಗೆ ಕೇಂದ್ರ ಸರ್ಕಾರದಿಂದ ಅನುದಾನ ಬರಲಿದೆ ಎಂದರು.

ಇನ್ನೂ ಕಲಿಕೇರಿ ರಸ್ತೆಯಲ್ಲಿ ಬಡ ಹಾಗೂ ಹಿಂದುಳಿದ ಫಲಾನುಭವಿಗಳ ವಾಸಿಸುವುದಕ್ಕಾಗಿ ಪಟ್ಟಣ ಪಂಚಾಯತಿಯಿಂದ ಬಡಾವಣೆ ಸಿದ್ಧಪಡಿಸಲಾಗಿದೆ. ಈ ಲೇಔಟ್ ನಲ್ಲಿ 171ನಿವೇಶನಗಳ ಪೈಕಿ 40 ನಿವೇಶಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಿ ಹಕ್ಕುಪತ್ರ ವಿತರಿಸಲಾಗಿದೆ. ಉಳಿದ 131 ನಿವೇಶನ ಕಾಯಂ ಪೌರ ಕಾರ್ಮಿಕರಿಗೆ, ಬಡವರಿಗೆ, ಸೂರು ಇಲ್ಲದವರಿಗೆ, ನಿರ್ಗತಿಕರಿಗೆ ನೀಡಲು ಆಶ್ರಯ ಸಮಿತಿ ಅಧ್ಯಕ್ಷರಿಗೆ ಪತ್ರ ಬರೆಯಲಾಗುವುದು ಎಂದರು.

ವಾಲ್ಮೀಕಿ, ಅಂಬೇಡ್ಕರ್, ಕನಕ ಭವನ ನಿರ್ಮಾಣಕ್ಕೆ ಸಿಎ ನಿವೇಶ ಗುರುತಿಸುವುದು, ಮೌಲಾನಾ ಆಜಾದ್ ಶಾಲೆಗೆ ನಾಗರಿಕ ಸೌಲಭ್ಯದ ಜಾಗೆ ಗುರುತಿಸುವುದು, ತ್ರಿವೇಣಿ ಸಂಗಮ ಶುಚಿಗೊಳಿಸುವುದು, ಪಂಚಾಯತಿ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳ ಬಾಡಿಗೆಗೆ ನೀಡುವುದು, ಪಟ್ಟಣದ ವಿವಿಧ ವಾರ್ಡ್ ಗಳಲ್ಲಿನ ಗಲೀಜು ಪ್ರದೇಶಗಳಲ್ಲಿ ಮರಂ ಹಾಕಿಸುವುದು, ಶವಗಾರ ವಾಹನ ಖರೀದಿಸುವುದು, ₹31 ಲಕ್ಷ ಬಾಕಿ ಉಳಿದಿರುವ ನೀರಿನ ಕರ ಹಾಗೂ ಮನೆ, ನಿವೇಶಗಳ ಕರವಸೂಲಿ ಮಾಡುವುದು ಸೇರಿದಂತೆ ನಾನಾ ವಿಷಯಗಳ ಕುರಿತು ಚರ್ಚಿಸಲಾಯಿತು.

ಶವ ಸಂಸ್ಕಾರಕ್ಕೆ ಜೆಸಿಬಿ ಬಾಡಿ: ಪಟ್ಟಣದಲ್ಲಿ ಕಾರ್ಮಿಕರ ಸಮಸ್ಯೆ ಉಂಟಾಗಿದ್ದರಿಂದ ಪಂಚಾಯತಿಯಿಂದ ಶವ ಸಂಸ್ಕಾರಕ್ಕೆ ಜೆಸಿಬಿ ಬಾಡಿಗೆ ನೀಡಲು ನಿರ್ಧರಿಸಲಾಯಿತು. ಶವ ಹೂಳಲು ತೆಗೆಯಲಾಗುವ ಕುಣಿಗೆ ಸಾವಿರ ನಿಗದಿಪಡಿಸಿದ್ದು, ಇದನ್ನು ಎಲ್ಲ ಸಮುದಾಯಗಳಿಗೂ ಸದುಪಯೋಗಪಡಿಸಿಕೊಳ್ಳುವಂತೆ ಪಂಚಾಯತಿ ಆಡಳಿತ ಮಂಡಳಿ ಮನವಿ ಮಾಡಿದೆ.

ಲೇಔಟ್ ದಂಧೆಯಲ್ಲಿ ಲಕ್ಷಗಟ್ಟಲೆ ಹಣ ಗುಳಂ: ಆರೋಪ: ಪಟ್ಟಣದ ಗಂಗಾವತಿ ರಸ್ತೆಗೆ ಹೊಂದಿಕೊಂಡಿರುವ ಲೇಔಟಿಗೆ ಸಂಬಂಧಿಸಿದಂತೆ ರಸ್ತೆ ಇಲ್ಲದ ಲೇಔಟಿಗೆ ಪಪಂ ಜೆಇ, ಮುಖ್ಯಾಧಿಕಾರಿಗಳು ಲಕ್ಷಗಟ್ಟಲೇ ಹಣ ಗುಳಂ ಎನಿಸಿದ್ದಾರೆ. ಈ ಲೇಔಟಿಗೆ ಆರು ರಸ್ತೆಗಳಿವೆ ಎಂದು ದಾಖಲೆಯಲ್ಲಿ ತೋರಿಸಲಾಗಿದೆ. ಆದರೆ, ಒಂದೂ ರಸ್ತೆಯೂ ಇಲ್ಲ. ರಸ್ತೆ ಇಲ್ಲದ ಕಡೆಗಳಲ್ಲಿ ರಸ್ತೆ ಮಾಡಿಟ್ಟಿದು, ಲೇಔಟ್‌ನ ರಸ್ತೆ ಎಂದು ಬಿಂಬಿಸಲಾಗುತ್ತಿದೆ. ಇದು ಕಾನೂನು ಬಾಹಿರವಾಗಿದ್ದು, ಅನಧೀಕೃತ ಈ ಬಡಾವಣೆಗೆ ಪಂಚಾಯತಿಯಿಂದ ನಾಗರಿಕ ಸೌಲಭ್ಯ ನೀಡಬಾರದು. ಈ ರೀತಿಯ ಅನಧಿಕೃತ ಬಡಾವಣೆಗಳು ಪಟ್ಟಣದಲ್ಲಿ ನಾಯಿ ಕೊಡೆಯಂತೆ ಎದ್ದಿವೆ. ಈ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳಿಗೆ ದೂರು ಸಲ್ಲಿಸುತ್ತೇನೆ ಎಂದು 8ನೇ ವಾರ್ಡ್‌ನ ಸದಸ್ಯ ಶೇಷಪ್ಪ ಪೂಜಾರ ಸಭೆಯಲ್ಲಿ ಕೆಂಡಾಮಂಡಲರಾದರು.

ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿಂಗ ನಾಯಕ, ಸದಸ್ಯರಾದ ಶರಣೇಗೌಡ, ಅನಿಲ ಬಿಜ್ಜಳ, ಸಂಗಪ್ಪ ಸಜ್ಜನ, ರಾಜಸಾಬ್‌ ನಂದಾಪೂರ, ಹನುಮಂತ ಬಸರಿಗಿಡದ, ಅಭಿಷೇಕ ಕಲುಬಾಗಿಲಮಠ, ಬಸಮ್ಮ ಕುರುಗೋಡು, ನಂದಿನಿ ರಾಮಾಂಜನೇಯರೆಡ್ಡಿ, ತನುಶ್ರೀ ರಾಮಚಂದ್ರ, ಶೈನಾಜಾಬೇಗಂ ಗುಡಿಹಿಂದಲ, ಹುಸೇನಬೀ ಸಂತ್ರಾಸ್, ಜೆಇ ಮಂಜುನಾಥ, ಜೆಸ್ಕಾಂ ಅಧಿಕಾರಿ ಸಿದ್ದನಗೌಡ ಇತರರಿದ್ದರು.