ಪ್ರಸ್ತುತದಲ್ಲಿ ಮಣ್ಣು ಮಲೀನವಾಗುತ್ತಿದ್ದು, ಇದರ ಸಂರಕ್ಷಣೆಗೆ ಸಾವಯವ ಗೊಬ್ಬರ ಮತ್ತು ಜೈವಿಕ ಗೊಬ್ಬರಗಳ ಬಳಕೆ ಮಾಡಬೇಕು. ಇದರಿಂದ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬಹುದು ಡಾ. ರಮೇಶ್ ಬಿ.ಕೆ. ಹೇಳಿದರು.

ಬಳ್ಳಾರಿ: ಪ್ರಸ್ತುತದಲ್ಲಿ ಮಣ್ಣು ಮಲೀನವಾಗುತ್ತಿದ್ದು, ಇದರ ಸಂರಕ್ಷಣೆಗೆ ಸಾವಯವ ಗೊಬ್ಬರ ಮತ್ತು ಜೈವಿಕ ಗೊಬ್ಬರಗಳ ಬಳಕೆ ಮಾಡಬೇಕು. ಇದರಿಂದ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬಹುದು ಎಂದು ಹಗರಿ ಕೃಷಿ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕ ಡಾ. ರಮೇಶ್ ಬಿ.ಕೆ. ಹೇಳಿದರು.

ಬಳ್ಳಾರಿ ತಾಲೂಕಿನ ಹಗರಿ ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರದಲ್ಲಿ “ಆರೋಗ್ಯಕರ ನಗರಗಳಿಗೆ ಆರೋಗ್ಯಕರ ಮಣ್ಣು” ಎಂಬ ಧ್ಯೇಯವಾಕ್ಯದಡಿ ಆಯೋಜಿಸಿದ್ದ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

2014 ಡಿಸೆಂಬರ್ 5ರಂದು ಮೊದಲ ಬಾರಿಗೆ ವಿಶ್ವ ಮಣ್ಣು ದಿನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಯಿತು. ಪ್ರಪಂಚದಾದ್ಯಂತ ಜನರಿಗೆ ಮಣ್ಣಿನ ಸಂರಕ್ಷಣೆ ಹಾಗೂ ಮಣ್ಣಿನ ಗುಣ-ಧರ್ಮಗಳ ಬಗ್ಗೆ ಜಾಗೃತಿ ಮೂಡಿಸುವುದು ಮುಖ್ಯ ಉದ್ದೇಶವಾಗಿದೆ. ಮಣ್ಣಿನ ರಕ್ಷಣೆಗೆ ಕಾಳಜಿ ವಹಿಸುವಂತಾಗಬೇಕು ಎಂದು ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಪಾಲಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಸರದಲ್ಲಿ ಶೇ. 60ರಷ್ಟು ಜೀವರಾಶಿಗಳ ಯೋಗಕ್ಷೇಮಕ್ಕೆ ಮಣ್ಣು ಪ್ರಮುಖ ಅಡಿಪಾಯವಾಗಿದೆ. ಮಣ್ಣು ಹಾಗೂ ಮಣ್ಣಿನ ಆರೋಗ್ಯವನ್ನು ಸಂರಕ್ಷಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.

ಮಣ್ಣು ಒಂದು ಪ್ರಮುಖ ಸಂಪನ್ಮೂಲವಾಗಿದೆ. ಇದು ಆಹಾರ ಉತ್ಪಾದನೆ, ನೀರು ಶುದ್ಧೀಕರಣ ಮತ್ತು ಉಷ್ಣತೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯಕರ ನಗರ ನಿರ್ಮಾಣಕ್ಕೆ ಮಣ್ಣಿನ ಸಂರಕ್ಷಣೆ ಬಹು ಮುಖ್ಯವಾಗಿದ್ದು, ಸುಸ್ಥಿರ ಭವಿಷ್ಯಕ್ಕಾಗಿ ಮಣ್ಣಿನ ಸಂರಕ್ಷಣೆ ಅಷ್ಟೇ ಮುಖ್ಯವಾಗಿದೆ ಎಂದರು.

ಆಹಾರ ಉತ್ಪಾದನೆ, ಉತ್ಪಾದಕತೆಗೆ ಮತ್ತು ಸುಸ್ಥಿರ ಭವಿಷ್ಯವನ್ನು ಕಾಪಾಡಿಕೊಳ್ಳಲು ಮಣ್ಣು ಮತ್ತು ಮಣ್ಣಿನ ಆರೋಗ್ಯ ಸುರಕ್ಷೆ ಮಾಡುವುದು ಅಗತ್ಯವಾಗಿದೆ ಎಂದು ಮಣ್ಣಿನ ಸಂರಕ್ಷಣೆಯ ಕುರಿತು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ಮಣ್ಣು ವಿಜ್ಞಾನಿ ಡಾ. ರವಿ ಎಸ್. ಅವರು ವಿವರಿಸಿದರು.

ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಗಿರೀಶ್ ಮಾತನಾಡಿ, ಮಿತಿ ಮೀರಿದ ರಾಸಾಯನಿಕಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಂದುತ್ತಿದೆ. ರೈತರು ಸಾವಯವ ಕೃಷಿಯ ಕಡೆ ಒತ್ತು ನೀಡಿ ಮಣ್ಣಿನ ಆರೋಗ್ಯ ಕಾಪಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಹಗರಿ ಕೃಷಿ ಮಹಾವಿದ್ಯಾಲಯದ ಬೋಧಕ ಸಿಬ್ಬಂದಿ ಡಾ. ಗೋವಿಂದಪ್ಪ ಎಂ.ಆರ್., ಡಾ. ಮಂಜುನಾಥ್, ಡಾ. ಬಸವರಾಜ್, ಡಾ. ನಾಗೇಶ್ ಬಸಪ್ಪ, ಡಾ. ಆನಂದ್ ಹಾಗೂ ಡಾ. ಜಾನವಿ ಸೇರಿದಂತೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿ ಡಾ. ರಾಜೇಶ್ವರಿ ಮತ್ತು ಕೃಷಿ ವಿಸ್ತರಣಾ ವಿಜ್ಞಾನಿ ಡಾ. ನವೀನ್ ಕುಮಾರ್ ಪಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.