ವಿದ್ಯಾರ್ಥಿಗಳು ಸಾಹಿತ್ಯ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು: ಚಿಂತಕ ಡಾ.ಎಚ್.ಜಯಪ್ರಕಾಶ್ ಶೆಟ್ಟಿ.

| Published : May 03 2025, 12:15 AM IST

ವಿದ್ಯಾರ್ಥಿಗಳು ಸಾಹಿತ್ಯ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು: ಚಿಂತಕ ಡಾ.ಎಚ್.ಜಯಪ್ರಕಾಶ್ ಶೆಟ್ಟಿ.
Share this Article
  • FB
  • TW
  • Linkdin
  • Email

ಸಾರಾಂಶ

ಶೃಂಗೇರಿ , ವಿದ್ಯಾರ್ಥಿ ಜೀವನವೆಂದರೆ ಕೇವಲ ಪಠ್ಯ ಕಲಿಕೆ, ಓದುವಿಕೆ, ಫಲಿತಾಂಶಕ್ಕೆ ಸೀಮಿತವಾಗಿರಬಾರದು. ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಭದ್ರ ಬುನಾದಿಯಾಗುವಂತಿರಬೇಕು. ವಿದ್ಯಾರ್ಥಿಗಳು ತಮ್ಮ ಕಲಿಕೆ ಜೊತೆ ಸಾಹಿತ್ಯ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಖ್ಯಾತ ಚಿಂತಕ ಡಾ.ಎಚ್.ಜಯಪ್ರಕಾಶ್ ಶೆಟ್ಟಿ ಹೇಳಿದರು.

ಮೆಣಸೆ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಭಾಷೆ ಕುರಿತ ವಿಶೇಷ ಉಪನ್ಯಾಸ

ಕನ್ನಡಪ್ರಭ ವಾರ್ತೆ, ಶೃಂಗೇರಿ

ವಿದ್ಯಾರ್ಥಿ ಜೀವನವೆಂದರೆ ಕೇವಲ ಪಠ್ಯ ಕಲಿಕೆ, ಓದುವಿಕೆ, ಫಲಿತಾಂಶಕ್ಕೆ ಸೀಮಿತವಾಗಿರಬಾರದು. ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಭದ್ರ ಬುನಾದಿಯಾಗುವಂತಿರಬೇಕು. ವಿದ್ಯಾರ್ಥಿಗಳು ತಮ್ಮ ಕಲಿಕೆ ಜೊತೆ ಸಾಹಿತ್ಯ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಖ್ಯಾತ ಚಿಂತಕ ಡಾ.ಎಚ್.ಜಯಪ್ರಕಾಶ್ ಶೆಟ್ಟಿ ಹೇಳಿದರು.

ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಚಿಕ್ಕಮಗಳೂರಿನ ಚಕೋರ ಸಾಹಿತ್ಯ ವಿಚಾರ ವೇದಿಕೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕನ್ನಡ ಭಾಷೆ ಕುರಿತ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು. ಸಾಹಿತ್ಯ ನಮ್ಮ ಭಾವಗಳನ್ನು ರಸವತ್ತಾಗಿ ಅಭಿವ್ಯಕ್ತಿಸುವ ಸಾಧನವಾಗಿದೆ. ನಮ್ಮ ಕನ್ನಡ ಭಾಷೆ ಸುಮಾರು 2000 ವರ್ಷಗಳ ಭವ್ಯ ಇತಿಹಾಸ, ಪರಂಪರೆ ಹೊಂದಿದ ಶ್ರೀಮಂತ ಭಾಷೆಯಾಗಿದೆ. ಕನ್ನಡ ಭಾಷೆ ಅಧ್ಯಯನ ಇನ್ನಷ್ಟು ನಡೆಯುವಂತಾಗಬೇಕು ಎಂದರು.

ಉಡುಪಿಯ ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಸೌಮ್ಯಲತಾ ಹಳಗನ್ನಡ ಪಠ್ಯಗಳ ಓದು ಹೇಗೆ ಮತ್ತು ಯಾಕೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಹಳಗನ್ನಡ ಸಾಹಿತ್ಯ ಸಂಪತ್ತಿನ ರಾಶಿ. ಓದಲು ಕಷ್ಟವಾಗಿ ಕಂಡರೂ ಅರ್ಥೈಸಿಕೊಂಡರೆ ಬಹಳ ಸುಲಭ. ಅಗಾದವಾದ ಜ್ಞಾನ ಭಂಡಾರ ಕೂಡ ಆಗಿದೆ. ಪಂಪನಿಂದ ಚಂಪಾವರೆಗಿನ ಸಾಹಿತ್ಯ ಸಂಪತ್ತಿನ ರಾಶಿ ಹಳೆಗನ್ನಡದಲ್ಲಿದೆ ಎಂದರು.

ಕಲಿಯುವ ಆಸಕ್ತಿ, ಹಂಬಲವಿದ್ದರೆ ಯಾವುದೂ ಕಷ್ಟವಲ್ಲ.ಆದರೆ ಇತ್ತೀಚಿನ ದಿನಗಳಲ್ಲಿ ನಾವು ಹಳಗನ್ನಡ ಕಲಿಕೆಯಿಂದ ವಿಮುಖರಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಹಳಗನ್ನಡ ಸಾಹಿತ್ಯದ ಪರಿಚಯ ವಿದ್ಯಾರ್ಥಿಗಳಿಗೆ ಹೆಚ್ಚಾಗಿ ಭೋದಿಸುವ ಅನಿವಾರ್ಯತೆಯಿದೆ. ಕನ್ನಡ ಸಾಹಿತ್ಯದ ಮೂಲ ಹಳಗನ್ನಡದ ಅಧ್ಯಯನಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದೆ. ಪಂಪ, ಪೊನ್ನ,ರನ್ನ,ಜನ್ನ,ಕುಮಾರವ್ಯಾಸ ರಂತಹ ಕನ್ನಡ ಕವಿಗಳು ಹಳಗನ್ನಡದಲ್ಲಿ ಅದ್ಭುತ,ಅಗಾದ ಸಾಹಿತ್ಯ ರಾಶಿಯನ್ನೇ ನೀಡಿದರು ಎಂದು ತಿಳಿಸಿದರು.

ಕಷ್ಟವೆಂಬ ಕಾರಣದಿಂದ ಹಳಗನ್ನಡವನ್ನು ನಿರ್ಲಕ್ಷ್ಯ ಮಾಡಬಾರದು. ಜ್ಞಾನ, ತಿಳುವಳಿಕೆ ಹೆಚ್ಚಿಸಿಕೊಳ್ಳಲು ಪೂರಕವಾಗಿದೆ. ವಿದ್ಯಾರ್ಥಿಗಳಿಗೆ ಹಳಗನ್ನಡ ಓದುವ, ಕಲಿಕೆಯ ಕ್ರಮಗಳನ್ನು ಹೇಳಿಕೊಡಬೇಕಿದೆ. ಹಳಗನ್ನಡ ಸಾಹಿತ್ಯ, ಕಾವ್ಯ ಪರಂಪರೆ ಬೆಳೆಸುವ ಕೆಲಸ ನಡೆಯಬೇಕಿದೆ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಭಾರತೀ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡ ಭಾಷೆಗೆ ಶತಶತಮಾನಗಳ ಪ್ರಾಚೀನತೆ, ಇತಿಹಾಸವಿದೆ. ಹಳಗನ್ನಡ ಕಲಿಕೆಗೆ ಕನ್ನಡದ ವಿದ್ಯಾರ್ಥಿಗಳು ಹೆಚ್ಚಿನ ಮಹತ್ವ ನೀಡಬೇಕು. ಇಂತಹ ಕಾರ್ಯಾಗಾರ, ಕಾರ್ಯಕ್ರಮಗಳ ಸದ್ಭಳಕೆ ಮಾಡಿಕೊಳ್ಳಬೇಕು. ಕನ್ನಡ ಸಾಹಿತ್ಯ ಕೃತಿ, ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಂಡರೆ ನಮ್ಮ ಜ್ಞಾನಾಭಿವೃದ್ಧಿ ಜೊತೆಗೆ ಕನ್ನಡ ಭಾಷೆ, ಸಾಹಿತ್ಯದ ಅಭಿವೃದ್ಧಿಯೂ ಆಗುತ್ತದೆ ಎಂದರು.

ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಡಾ.ಆಶಾ.ಬಿ.ಜಿ, ರಾಜ್ಯಶಾಸ್ತ್ರ ವಿಭಾಗದ ಆಶಾ ಬಾರ್ಕೂರು, ಕನ್ನಡ ವಿಭಾಗದ ಮುಖ್ಯಸ್ಥರಾದ ಚಾಣಕ್ಯರಾಜ್, ಚಕೋರ ಸಾಹಿತ್ಯ ವೇದಿಕೆ ಗಗನ್., ಚೈತ್ರ ಮತ್ತಿತರರು ಉಪಸ್ಥಿತರಿದ್ದರು.

2 ಶ್ರೀ ಚಿತ್ರ 1-

ಶೃಂಗೇರಿ ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕನ್ನಡ ಭಾಷೆ ಕುರಿತ ವಿಶೇಷ ಉಪನ್ಯಾಸದಲ್ಲಿ ಚಿಂತಕ ಡಾ.ಎಚ್.ಜಯಪ್ರಕಾಶ್ ಶೆಟ್ಟಿ ಮಾತನಾಡಿದರು.