ಇಂದಿನ ಸ್ಪರ್ಧಾತ್ಮಕ ವೃತ್ತಿಪರ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಹಂತದಿಂದಲೇ ಸಂಶೋಧನಾ ಮನೋಭಾವ, ಪರಿಣಾಮಕಾರಿ ಸಂವಹನ ಕೌಶಲ್ಯ ಹಾಗೂ ವೃತ್ತಿಪರ ನೈತಿಕತೆಯನ್ನು ಬೆಳೆಸಿಕೊಳ್ಳಬೇಕು ವಿಷ್ಣುದತ್ತ ಮೋರೆ ಹೇಳಿದರು.

ಕನ್ನಡಪ್ರಭ ವಾರ್ತೆ ಸುರಪುರ

ಇಂದಿನ ಸ್ಪರ್ಧಾತ್ಮಕ ವೃತ್ತಿಪರ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಹಂತದಿಂದಲೇ ಸಂಶೋಧನಾ ಮನೋಭಾವ, ಪರಿಣಾಮಕಾರಿ ಸಂವಹನ ಕೌಶಲ್ಯ ಹಾಗೂ ವೃತ್ತಿಪರ ನೈತಿಕತೆಯನ್ನು ಬೆಳೆಸಿಕೊಳ್ಳಬೇಕು ವಿಷ್ಣುದತ್ತ ಮೋರೆ ಹೇಳಿದರು.

ನಗರ ಸಮೀಪದ ವೀರಪ್ಪ ನಿಷ್ಠಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶೈಕ್ಷಣಿಕ ಶಿಕ್ಷಣ ಮತ್ತು ಪ್ರಸ್ತುತ ಕೈಗಾರಿಕಾ ರಂಗದ ನಡುವಿನ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ‘ಜಾಗತಿಕ ತಂತ್ರಜ್ಞಾನ, ಉದ್ಯೋಗ ಮಾರುಕಟ್ಟೆ’ ಕುರಿತ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ನಿರಂತರ ಕಲಿಕೆ, ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮನೋಭಾವ ಹಾಗೂ ಕೌಶಲ್ಯಗಳ ನಿರಂತರ ಅಭಿವೃದ್ಧಿಯು ವಿದ್ಯಾರ್ಥಿಗಳ ಭವಿಷ್ಯದ ವೃತ್ತಿಜೀವನಕ್ಕೆ ಭದ್ರ ಬುನಾದಿಯಾಗಲಿವೆ ಎಂದು ತಿಳಿಸಿದರು.

ಎನ್‌ಐಟಿ ರೂರ್ಕೆಲಾ ಸಂಸ್ಥೆಯ ಹಿರಿಯ ಹಳೆಯ ವಿದ್ಯಾರ್ಥಿ ಪವನ ಪೂಜಾರಿ ಅವರು, ಕೃತಕ ಬುದ್ಧಿಮತ್ತೆ (ಎಐ) ಹಾಗೂ ಮೆಷಿನ್ ಲರ್ನಿಂಗ್ (ಎಂಎಲ್) ತಂತ್ರಜ್ಞಾನಗಳು ಪ್ರಸುತ್ತ ಜಾಗತಿಕ ಮಾರುಕಟ್ಟೆಯಲ್ಲಿ ಉಂಟುಮಾಡುತ್ತಿರುವ ಮಹತ್ವದ ಬದಲಾವಣೆ ವಿವರಿಸಿದರು. ವಿಪ್ರೋ, ಬ್ರೋಕೇಡ್ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯಲ್ಲಿ ಪಡೆದ ತಮ್ಮ ವೃತಿಪರ ಮತ್ತು ಸಂಶೋಧನಾ ಹಾಗೂ ನೆಟ್‌ವರ್ಕ್ ಮೂಲಸೌಕರ್ಯ, ಕ್ಲೌಡ್ ವ್ಯವಸ್ಥೆಗಳು ಮತ್ತು ಅಲ್ಗಾರಿದಮಿಕ್ ಟ್ರೇಡಿಂಗ್ ಕ್ಷೇತ್ರಗಳಲ್ಲಿ ತಮ್ಮ ಅನುಭವಗಳ ಕುರಿತು ಹಂಚಿಕೊಂಡರು.

ಕಾಲೇಜಿನ ಜಂಟಿ ಕಾರ್ಯದರ್ಶಿ ದೊಡ್ಡಪ್ಪ ಎಸ್. ನಿಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ಥಳೀಯ ಭಾಗದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಜಾಗತಿಕ ಬೆಳವಣಿಗೆಗಳು ಮತ್ತು ಉದ್ಯೋಗ ಕ್ಷೇತ್ರದ ನಿರೀಕ್ಷೆಗಳನ್ನು ಪರಿಚಯಿಸುವ ಇಂತಹ ಕಾರ್ಯಕ್ರಮಗಳು ಮಹತ್ವದ್ದಾಗಿವೆ ಎಂದರು.

ಇಂತಹ ಸಂವಾದಗಳು ವಿದ್ಯಾರ್ಥಿಗಳಲ್ಲಿ ಹೊಸ ಆಲೋಚನೆಗಳನ್ನು ಮೂಡಿಸುವುದರ ಜೊತೆಗೆ, ಭವಿಷ್ಯದ ವೃತ್ತಿಜೀವನಕ್ಕೆ ಅಗತ್ಯವಾದ ಜ್ಞಾನ, ಕೌಶಲ್ಯ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು ಅನುಕೂಲವಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಶರಣಬಸಪ್ಪ ಸಾಲಿ, ಆಡಳಿತ ಮಂಡಳಿಯ ಸದಸ್ಯರು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಎಂಜಿನಿಯರಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ.ಪ್ರಭಾಕರ ಪಾಟೀಲ್ ಬೂದಗುಂಪಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಶೈಕ್ಷಣಿಕ ಜ್ಞಾನಕ್ಕೆ ಉದ್ಯಮದ ಅನುಭವನ್ನು ಜೋಡಿಸಿದ ಈ ಸಂವಾದ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಜಾಗತಿಕ ಬೆಳವಣಿಗೆಗಳ ಕುರಿತು ಅರಿವು ಮೂಡಿಸುವುದರ ಜತೆಗೆ, ಭವಿಷ್ಯದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಅಗತ್ಯವಾದ ಕೌಶಲ್ಯಗಳನ್ನು ಬೆಳಿಸಿಕೊಳ್ಳಲು ಪ್ರೇರಣೆ ನೀಡಿತು.