ಸಾರಾಂಶ
ಹುಬ್ಬಳ್ಳಿ: ನಿರುದ್ಯೋಗ ಸಮಸ್ಯೆ ಯಾವುದೇ ರಾಜ್ಯ, ದೇಶದ ಸಮಸ್ಯೆಯಲ್ಲ. ಇದು ಇಂದು ಜಾಗತಿಕ ಸಮಸ್ಯೆಯಾಗಿದ್ದು, ಪರೀಕ್ಷೆಯಲ್ಲಿ ಹೆಚ್ಚು ಗಳಿಸಿದಾಕ್ಷಣ ಉದ್ಯೋಗ ದೊರೆಯುವುದಿಲ್ಲ. ಔದ್ಯೋಗಿಕ ಕ್ಷೇತ್ರಕ್ಕೆ ಬೇಕಾದ ಅಗತ್ಯ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ವಿಪ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ಇಲ್ಲಿನ ಕೆಎಲ್.ಇ ಸೊಸೈಟಿಯ ಪಿ.ಸಿ. ಜಾಬಿನ್ ಕಾಲೇಜು ಆವರಣದಲ್ಲಿ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ, ಉದ್ಯೋಗ ಮಾಹಿತಿ ಹಾಗೂ ತರಬೇತಿ ಕೇಂದ್ರ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಕಳೆದ ಹತ್ತು ವರ್ಷಗಳಿಂದ ಉದ್ಯೋಗ ಮೇಳ ಆಯೋಜಿಸಿಕೊಂಡು ಬರಲಾಗುತ್ತಿದೆ. ಸಾಮಾನ್ಯವಾಗಿ ಎಲ್ಲ ಪದವೀಧರರು ಪದವಿ ಶಿಕ್ಷಣ ಪೂರೈಸಿದ ಬಳಿಕ ತಮ್ಮ ಸ್ವ ವಿವರಗಳ ಮಾಹಿತಿ ತಯಾರಿಸಿಕೊಂಡು ಬೇರೆ ಬೇರೆ ಊರುಗಳಿಗೆ ಉದ್ಯೋಗಕ್ಕಾಗಿ ಅಲೆಯುತ್ತಾರೆ. ಇದು ಅತ್ಯಂತ ಕಷ್ಟಕರ ಕೆಲಸ. ಈ ನಿಟ್ಟಿನಲ್ಲಿ ಪದವೀಧರರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಹೇಳಿದರು.
ಹೊಸ ಉದ್ಯಮ ಸ್ಥಾಪನೆಯಾಗಲಿ: ಇಲಾಖೆವಾರು ನಿವೃತ್ತಿ ಬಳಿಕ ಹೊಸ ನೇಮಕಾತಿಗಳನ್ನು ಯಾವುದೇ ಸರ್ಕಾರಗಳಾಗಲಿ ಮಾಡಬೇಕು. ಆದರೆ, ಸರ್ಕಾರಗಳು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿಲ್ಲ. ರಾಜ್ಯದಲ್ಲಿ ೨.೫೬ ಲಕ್ಷ ಹುದ್ದೆಗಳು ಖಾಲಿ ಇರುವುದು ದುರ್ದೈವದ ಸಂಗತಿ. ಯುವಕರು ಸರ್ಕಾರಿ ನೌಕರಿ ಬೇಕು ಎಂಬ ಮನೋಭಾವನೆಯಿಂದ ಹೊರಬಂದು ಸ್ವಯಂ ಉದ್ಯೋಗ ಸ್ಥಾಪನೆಗೆ ಮುಂದಾಗಬೇಕು. ಉದ್ಯೋಗ ಸ್ಥಾಪನೆ ಸರ್ಕಾರ ನೀಡುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಉದ್ಯೋಗಕ್ಕಾಗಿ ಯುವಕರು ಬಹಳಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳು ಉದ್ಯೋಗ ಮೇಳ ಆಯೋಜಿಸುತ್ತ ಬಂದಿವೆ ಎಂದರು.
ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಎಲ್ಲ ಪದವೀಧರರು ಉತ್ತಮ ರೀತಿಯಲ್ಲಿ ಸಂದರ್ಶನ ನೀಡಿ ಉದ್ಯೋಗ ಪಡೆದುಕೊಳ್ಳಬೇಕು ಎಂದು ಹಾರೈಸಿದರು.ಕೆಎಲ್‌ಇ ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಕೆನರಾ ಬ್ಯಾಂಕ್ ಪ್ರಾದೇಶಿಕ ಮುಖ್ಯಸ್ಥ ಸಮೀರ ಸಜಲ್, ಕೈಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಮಾತನಾಡಿದರು.
ರೋಟರಿ ಕ್ಲಬ್ ಅಧ್ಯಕ್ಷ ಬಾಪುಗೌಡ ಪಾಟೀಲ, ಕಾರ್ಯದರ್ಶಿ ಎ.ವಿ. ಸಂಕನೂರ, ಕಾಲೇಜಿನ ಪಾಚಾರ್ಯೆ ಡಾ. ಸಂಧ್ಯಾ ಕುಲಕರ್ಣಿ, ಕೈಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಇತರರು ಇದ್ದರು.