ನಾನು ಕೂಡ ಅನುತ್ತೀರ್ಣನಾಗಿಯೇ ನಂತರ ಮತ್ತೆ ಪರೀಕ್ಷೆ ಬರೆದು ಉತ್ತೀರ್ಣನಾಗಿರುವೆ. ಕೇವಲ ವಿದ್ಯಾರ್ಥಿಗಳು ಓದುವ ವಿಷಯಗಳನ್ನೇ ಮುಖ್ಯವಾಗಿರಿಸಿಕೊಳ್ಳಬಾರದು. ಪ್ರಾಪಂಚಿಕ ಜ್ಞಾನವನ್ನು ಅರಿಯಬೇಕು. ನಿಮ್ಮ ತಂದೆ-ತಾಯಂದಿರು ನಂಬಿಕೆಯಿಟ್ಟು ಇಷ್ಟು ದೊಡ್ಡವರಾಗಿ ಮಾಡಿದ್ದಾರೆ. ಅವರ ವಿಶ್ವಾಸಕ್ಕೆ ಎಂದಿಗೂ ದ್ರೋಹ ಮಾಡದೆ ಅವರ ಕನಸನ್ನು ನನಸು ಮಾಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಪರೀಕ್ಷೆಯಲ್ಲಿ ಅನುತ್ತೀರ್ಣದ ಅಥವಾ ಸಣ್ಣಪುಟ್ಟ ವಿಷಯಗಳಲ್ಲಿ ಜಿಗುಪ್ಸೆಗೊಳಗಾದ ಬಹುತೇಕ ವಿದ್ಯಾರ್ಥಿಗಳು ಆತ್ಮಹತ್ಯೆಯಂತಹ ತಪ್ಪು ನಿರ್ಧಾರಗಳಿಗೆ ಮುಂದಾಗುತ್ತಾರೆ. ಪ್ರತಿಯೊಬ್ಬರು ಇಂತಹ ಸಮಸ್ಯೆ ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಉಪಾಧ್ಯಕ್ಷ ಭಾಸ್ಕರ್‌ರಾವ್ ಸಲಹೆ ನೀಡಿದರು.

ನಗರದ ಎಸ್.ಬಿ.ಸಮುದಾಯ ಭವನದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ (ಮಂಡ್ಯ ಜಿಲ್ಲಾ ಶಾಖೆ)ಯಿಂದ ನಡೆದ ಮೂರು ದಿನದ ಮೈಸೂರು ವಿಭಾಗ ಮಟ್ಟದ ಕಾಲೇಜು ವಿದ್ಯಾರ್ಥಿಗಳ ತರಬೇತಿ ಶಿಬಿರದ ಸಮಾರೋಪದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ನಾನು ಕೂಡ ಅನುತ್ತೀರ್ಣನಾಗಿಯೇ ನಂತರ ಮತ್ತೆ ಪರೀಕ್ಷೆ ಬರೆದು ಉತ್ತೀರ್ಣನಾಗಿರುವೆ. ಕೇವಲ ವಿದ್ಯಾರ್ಥಿಗಳು ಓದುವ ವಿಷಯಗಳನ್ನೇ ಮುಖ್ಯವಾಗಿರಿಸಿಕೊಳ್ಳಬಾರದು. ಪ್ರಾಪಂಚಿಕ ಜ್ಞಾನವನ್ನು ಅರಿಯಬೇಕು. ನಿಮ್ಮ ತಂದೆ-ತಾಯಂದಿರು ನಂಬಿಕೆಯಿಟ್ಟು ಇಷ್ಟು ದೊಡ್ಡವರಾಗಿ ಮಾಡಿದ್ದಾರೆ. ಅವರ ವಿಶ್ವಾಸಕ್ಕೆ ಎಂದಿಗೂ ದ್ರೋಹ ಮಾಡದೆ ಅವರ ಕನಸನ್ನು ನನಸು ಮಾಡಬೇಕೆಂದರು.

ನೆಲ್ಸನ್ ಮಂಡೆಲಾ, ನಂದನ್ ನಿಲೇಕಣಿ, ಬರಾಕ್ ಒಬಾಮಾ, ನಾರಾಯಣಮೂರ್ತಿ, ಜಯಪ್ರಕಾಶ್ ನಾರಾಯಣ್, ಮಹಾತ್ಮ ಗಾಂಧೀಜಿ ಸೇರಿದಂತೆ ಸಾಧಕರ ಜೀವನ ಚರಿತ್ರೆ ಓದಿದರೆ, ಅವರು ನಡೆದು ಬಂದ ದಾರಿ ಗೊತ್ತಾಗುತ್ತದೆ. ಯಾರಿಗೂ ಸಾಧನೆ ತಕ್ಷಣಕ್ಕೆ ಸಿಗುವುದಿಲ್ಲ, ಸತತ ಪ್ರಯತ್ನದಿಂದ ಮಾತ್ರ ಎದ್ದು ನಿಲ್ಲಬಹುದು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ರಾಜಕೀಯ ಜ್ಞಾನ ಬೆಳೆಸಿಕೊಳ್ಳಬೇಕು. ಎಲ್ಲಿ ಅವಕಾಶ ಸಿಗುತ್ತದೋ ಅವುಗಳನ್ನು ಬಳಸಿಕೊಳ್ಳುವ ಕಡೆ ಗಮನ ಹರಿಸಬೇಕು. ಗ್ರಾಪಂನಿಂದ ಜಿಪಂ ಹಾಗೂ ಶಾಸಕರಾಗುವ ಕಡೆಗೂ ನೀವು ಕನಸನ್ನು ಇಟ್ಟುಕೊಳ್ಳಬೇಕು. ಸಂಘ ಸಂಸ್ಥೆಗಳಲ್ಲಿ ಸೇವೆ ಮಾಡುವುದಕ್ಕೆ ತೊಡಗಿಸಿಕೊಳ್ಳಬೇಕು. ಕೇವಲ ಸಣ್ಣ ಉದ್ಯೋಗ ತೆಗೆದುಕೊಂಡು ಸುಮ್ಮನಿರದೆ ಕೆಎಎಸ್, ಐಎಎಸ್ ಹಾಗೂ ಐಪಿಎಸ್ ಹುದ್ದೆಗಳನ್ನು ತೆಗೆದುಕೊಳ್ಳುವ ಗುರಿಯೊಂದಿಗೆ ಮುನ್ನುಗ್ಗುವ ಅಭ್ಯಾಸ ಇಟ್ಟುಕೊಳ್ಳಿ ಎಂದು ಕರೆ ನೀಡಿದರು.

ಮೈಸೂರು, ಮಂಡ್ಯ, ಹಾಸನ, ಕೊಡಗು, ಚಾಮರಾಜನಗರ, ಚಿಕ್ಕಮಂಗಳೂರು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಂದ ಸುಮಾರು 136 ವಿದ್ಯಾರ್ಥಿಗಳು ಹಾಗೂ 17 ಮಂದಿ ಕಾರ್ಯಕ್ರಮಾಧಿಕಾರಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ. ಮೀರಾ ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಉಮಾಕಾಂತ್, ಯುವ ರೆಡ್‌ಕ್ರಾಸ್ ಸಂಯೋಜಕ ಡಿ.ಜಿ.ಆನಂದ್, ಸಂಚಾಲಕರಾದ ರಂಗಸ್ವಾಮಿ, ಕೆ.ಟಿ.ಹನುಮಂತು, ಮಂಗಲ ಎಂ.ಯೋಗೀಶ್, ಭವಾನಿ ಶಂಕರ್, ಷಡಕ್ಷರಿ ಭಾಗವಹಿಸಿದ್ದರು.