ವಿದ್ಯಾರ್ಥಿಗಳು ರಾಷ್ಟ್ರ ಕಟ್ಟುವ ಕೆಲಸ ಮಾಡಿ: ಕಿರಣಕುಮಾರ

| Published : Feb 11 2024, 01:46 AM IST

ಸಾರಾಂಶ

ಸಿಂಧನೂರಿನ ಸಂಕೇತ ಸ್ವತಂತ್ರ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯ ವತಿಯಿಂದ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭವನ್ನು ತಿಡಿಗೋಳ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಕೆ.ಪಿ.ದಿನೇಶ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ವಿದ್ಯಾರ್ಥಿಗಳು ರಾಷ್ಟ್ರ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕನ್ನಡಪ್ರಭ ಪತ್ರಿಕೆ ಉಪಸಂಪಾದಕ ಕಿರಣಕುಮಾರ ವಿವೇಕವಂಶಿ ಕರೆ ನೀಡಿದರು.

ಇಲ್ಲಿನ ಸತ್ಯಗಾರ್ಡನ್‌ನಲ್ಲಿ ಸಂಕೇತ ಸ್ವತಂತ್ರ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯದಿಂದ ಶನಿವಾರ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಕಷ್ಟಪಟ್ಟರೆ ಮಾತ್ರ ಮೇಲೆ ಬರಲು ಸಾಧ್ಯ. ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ, ಚಾರಿತ್ರ್ಯ ಬಹಳ ಮುಖ್ಯವಾಗಿರುತ್ತದೆ. ಮೋಜು-ಮಸ್ತಿಗಾಗಿ ಜೀವನವಲ್ಲ. ವಿಧೇಯತೆ ಮೈಗೂಡಿಸಿಕೊಂಡು ಗಂಭೀರ ಚಿಂತನೆಯಲ್ಲಿ ತೊಡಗಿಸಿಕೊಂಡರೆ ಸಾಧನೆ ಸಾಧ್ಯ ಎಂದರು.

ತಿಡಿಗೋಳ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಕೆ.ಪಿ.ದಿನೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೀಳ್ಕೊಡುಗೆ ಸಮಾರಂಭ ಎಂದರೆ ಭಾವನಾತ್ಮಕವಾದದು. ಎಲ್ಲಿಂದಲೋ ಬಂದು, ಒಂದಾಗಿ ಅನಿವಾರ್ಯವಾಗಿ ದೂರವಾಗಲೇಬೇಕು. ಜೊತೆಗಿರುವಾಗ ನೆನಪುಗಳು ಮಾತ್ರ ಸದಾ ಹಸಿರಾಗುತ್ತವೆ. ಇತ್ತೀಚೆಗೆ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಅದೇ ಸಮಯ ಪುಸ್ತಕದಲ್ಲಿ ಕಳೆದರೆ ಉಜ್ವಲವಾದ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಎಸ್.ಬಸವರಾಜ ವಹಿಸಿದ್ದರು.

ಸಂಸ್ಥೆಯ ಕಾರ್ಯದರ್ಶಿ ಎಸ್.ಅನಿಲರಾಜ್ ವಕೀಲ ಪ್ರಾಸ್ತಾವಿಕವಾಗಿ ಸಂಸ್ಥೆ ಬೆಳದು ಬಂದ ದಾರಿ ಕುರಿತು ಮಾತನಾಡಿದರು. ತಿಮ್ಮಾಪುರ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಅಮರೇಶ, ಪದವಿ ಮಹಾವಿದ್ಯಾಲಯದ ಉಪಪ್ರಾಚಾರ್ಯ ಡಾ.ವಿಶ್ವನಾಥ ಎಸ್.ಪತ್ತಾರ ಇದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃಕ ಕಾರ್ಯಕ್ರಮಗಳು ನಡೆದವು.