ವಿದ್ಯಾರ್ಥಿಗಳು ಸಾಧನೆಯ ಕನಸು ಕಾಣಬೇಕು: ಬಿಇಒ ರಾಜೇಗೌಡ

| Published : Oct 28 2024, 12:46 AM IST

ಸಾರಾಂಶ

ವಿದ್ಯಾರ್ಥಿಗಳು ಗುರಿ ಸಾಧಿಸುವ ಕನಸನ್ನು ಹೊಂದಿದ್ದರೆ ಮಾತ್ರ ಯಶಸ್ಸು ಲಭಿಸುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳೆಲ್ಲರೂ ಗುರಿ ಸಾಧಿಸುವ ಛಲವನ್ನು ಹೊಂದಿರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ರಾಜೇಗೌಡ ಹೇಳಿದರು. ಬೇಲೂರಿನಲ್ಲಿ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಭಾ ಕಾರಂಜಿ, ಕಲೋತ್ಸವ

ಬೇಲೂರು: ವಿದ್ಯಾರ್ಥಿಗಳು ಗುರಿ ಸಾಧಿಸುವ ಕನಸನ್ನು ಹೊಂದಿದ್ದರೆ ಮಾತ್ರ ಯಶಸ್ಸು ಲಭಿಸುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳೆಲ್ಲರೂ ಗುರಿ ಸಾಧಿಸುವ ಛಲವನ್ನು ಹೊಂದಿರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ರಾಜೇಗೌಡ ಹೇಳಿದರು.

ತಾಲೂಕಿನ ಅರೇಹಳ್ಳಿಯ ಮಲ್ನಾಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜನೆ ಮಾಡಲಾಗಿದ್ದ 2024-25ನೇ ಸಾಲಿನ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಗುರು ಹಿರಿಯರಿಗೆ ಗೌರವ ಕೊಡಬೇಕು. ಗುಡಿಗಳಲ್ಲಿ ಕಾಣದ ದೇವರನ್ನು ಪೂಜಿಸುವುದಕ್ಕಿಂತ ಮನೆಗಳಲ್ಲಿ ಎದುರಿಗೆ ಕಾಣುವ ತಂದೆ ತಾಯಿಗಳೇ ನಿಜವಾದ ದೇವರು ಎಂದು ಅರಿತುಕೊಳ್ಳಬೇಕು ಎಂದು ಹೇಳಿದರು.

ಉತ್ತಮ ಅಂಕ, ನಡವಳಿಕೆ ಪೋಷಕರನ್ನು ಖುಷಿಪಡಿಸುತ್ತದೆ. ಇಂತಹ ಮೌಲ್ಯಗಳ ಜತೆಗೆ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಜ್ಞಾನ ಮತ್ತಷ್ಟು ವೃದ್ಧಿಸುತ್ತದೆ ಎಂದು ಕಿವಿಮಾತು ಹೇಳಿದರು.

ಮಲ್ನಾಡ್ ಶಾಲೆಯ ಮಾಜಿ ಕಾರ್ಯದರ್ಶಿ ಮೊಹಮ್ಮದ್ ಆಲಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಹಲವಾರು ಪ್ರತಿಭೆಗಳಿರುತ್ತವೆ. ಇಂತಹ ಪ್ರತಿಭೆಗಳನ್ನು ಹೊರಹಾಕಲು ಇಂತಹ ವೇದಿಕೆಯನ್ನು ಸೂಕ್ತವಾಗಿ ಬಳಸಿಕೊಂಡು ಯಶಸ್ವಿಯಾಗಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.

ಶಿಕ್ಷಣ ಸಂಯೋಜನಾಧಿಕಾರಿ ಎಚ್.ಜಿ ಶಿವಮರಿಯಪ್ಪ ಮಾತನಾಡಿ, ಹಲವಾರು ವರ್ಷಗಳ ಹಿಂದೆ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸುವ ಕಾರ್ಯಕ್ರಮವನ್ನು ಸರ್ಕಾರ ಪ್ರಾರಂಭಿಸಿತು. ಕಳೆದ ಸಾಲಿಗೆ ಹೋಲಿಸಿಕೊಂಡರೆ ಈ ಸಾಲಿನಲ್ಲಿ 23 ವಿಭಾಗಗಳಲ್ಲಿ ಸ್ಪರ್ಧಿಸಲು ಅವಕಾಶವಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಮಲ್ನಾಡ್ ಶಾಲೆಯ ಮುಖ್ಯ ಶಿಕ್ಷಕಿ ಶಬಾನಾ ಆಲಿ, ಗ್ರಾಪಂ ಅಧ್ಯಕ್ಷ ಸಂಕಪ್ಪ, ಶಿಕ್ಷಣ ಸಂಯೋಜನಾಧಿಕಾರಿಗಳಾದ ಜಗದೀಶ ಕೆ.ವಿ., ಕುಮಾರ್ ಕೆ.ಬಿ., ನಾಗಮ್ಮ, ಸಿಆರ್‍ಪಿ ಶೈಲಜಾ, ಕ್ರೀಡಾ ತರಬೇತುದಾರ ಜುಲ್ಫಿ ಸೇರಿದಂತೆ ಹಲವರು ಹಾಜರಿದ್ದರು.