ಸಾರಾಂಶ
ವಿದ್ಯಾರ್ಥಿಗಳು ಪ್ರಜ್ಞಾವಂತರಾಗಬೇಕು. ಅಂಬೇಡ್ಕರ್ ಅವರಂತೆ ಜ್ಞಾನವಂತರಾಗಬೇಕು. ನಿಮ್ಮ ಗುರಿಯನ್ನು ನೀವು ತಲುಪಬೇಕು. ಅದರ ಜೊತೆಗೆ ಸಂಸ್ಕಾರವನ್ನು ಹೇಳಿಕೊಡಬೇಕಾಗಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ವಿದ್ಯಾರ್ಥಿನಿಯರು ಬಂದ ದಾರಿ ಮರೆಯದೇ ಹಿರಿಯರನ್ನು ಆದರ್ಶವನ್ನು ಇರಿಸಿಕೊಂಡು ಸಾಧನೆ ಮಾಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ. ರಂಗೇಗೌಡ ತಿಳಿಸಿದರು.ನಗರದ ವಿ.ವಿ. ಮೊಹಲ್ಲಾದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ನಡೆದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ನಮಗೆ ಕೊಟ್ಟ ಸಂತೋಷ ಈಗ ಇಲ್ಲವಾಗಿದೆ. ಈಗೆಲ್ಲಾ ಯಾಂತ್ರಿಕ ಜೀವನವಾಗಿದೆ ಎಂದರು.
ನಿಮ್ಮ ತಂದೆ- ತಾಯಿಯರು ನಿಮ್ಮ ಮೇಲೆ ಬಹಳ ಕನಸುಗಳನ್ನು ಹೊತ್ತು ಓದಲು ಕಳಿಸಿದ್ದಾರೆ. ನೀವು ಚೆನ್ನಾಗಿ ಓದಿ ಆದರ್ಶ ಮಕ್ಕಳಾಗಬೇಕು. ಒಳ್ಳೆಯ ಸಂಸ್ಕೃತಿಯನ್ನು ಕಲಿಯಬೇಕು. ಹೆಣ್ಣು ಮಕ್ಕಳಿಗೆ ಶ್ರದ್ಧೆ ಶಕ್ತಿ ಹೆಚ್ಚಾಗಿದೆ. ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಿರಿ. ನಾವೆಲ್ಲಾ ಬಾಬಾ ಸಾಹೇಬರ ವಂಶಸ್ಥರು. ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಿಮ್ಮ ತಂದೆ ತಾಯಿಯರ ಕನಸನ್ನು ನನಸು ಮಾಡಿ ಎಂದು ಅವರು ಕಿವಿಮಾತು ಹೇಳಿದರು.ಸಾಹಿತಿ ಜಯಪ್ಪ ಹೊನ್ನಾಳಿ ಮಾತನಾಡಿ, ವಿದ್ಯಾರ್ಥಿಗಳು ಪ್ರಜ್ಞಾವಂತರಾಗಬೇಕು. ಅಂಬೇಡ್ಕರ್ ಅವರಂತೆ ಜ್ಞಾನವಂತರಾಗಬೇಕು. ನಿಮ್ಮ ಗುರಿಯನ್ನು ನೀವು ತಲುಪಬೇಕು. ಅದರ ಜೊತೆಗೆ ಸಂಸ್ಕಾರವನ್ನು ಹೇಳಿಕೊಡಬೇಕಾಗಿದೆ. ನಿಮ್ಮ ಪ್ರತಿಭೆಯನ್ನು ಜಾಗೃತಿಗೊಳಿಸಿಕೊಳ್ಳಿರಿ. ಅಂಬೇಡ್ಕರ್ ಅವರನ್ನು ಮಾದರಿಯಾಗಿಟ್ಟುಕೊಂಡು ಚೆನ್ನಾಗಿ ಓದಿ ಸಾಧನೆ ಮಾಡಿ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜನಾರ್ಧನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಿಬ್ಬಯ್ಯ, ದೀಪಾ ಮಲ್ಲಿಕಾರ್ಜುನ, ಮುರಳೀಧರ್, ಸುಷ್ಮಾ ಕುಮಾರ್, ರಮೇಶ್, ಬಸವರಾಜು, ಶಿವಮಲ್ಲಯ್ಯ, ಚಿಕ್ಕೀರಯ್ಯ, ಪ್ರದೀಪ್, ಮಹೇಶ್, ವಾರ್ಡನ್ ಗಾಯತ್ರಿ, ರುಕ್ಮಿಣಿ, ಶೈಲಶ್ರೀ ಇದ್ದರು. ನಂತರ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.