ರಾಣಿಬೆನ್ನೂರು: ವಿದ್ಯಾರ್ಥಿಗಳು ನಿರಂತರ ಅಧ್ಯಯನದಲ್ಲಿ ತೊಡಗಿಕೊಳ್ಳುವ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ ಹೇಳಿದರು.
ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಅರಳಿ ಶಿದ್ಲಿಂಗಪ್ಪ ಬಸಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಸಕ್ತ ಸಾಲಿನ ಪಠ್ಯೇತರ ಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಬದುಕು ತುಂಬಾ ವೇಗವಾಗಿ ಹೋಗುತ್ತಿದೆ. ಅದಕ್ಕೆ ತಕ್ಕನಾಗಿ ನಾವು ನಮ್ಮನ್ನು ಅಣಿಗೊಳಿಸಿಕೊಳ್ಳಬೇಕಾದ ಅಗತ್ಯವಿದೆ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿಯನ್ನು ರೂಢಿಸಿಕೊಂಡಲ್ಲಿ ಮಾತ್ರ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ. ಪದವಿಯ ನಂತರ ಉದ್ಯೋಗದಲ್ಲಿ ಕೀಳರಿಮೆ ಬೆಳೆಸಿಕೊಳ್ಳಬೇಡಿ, ವೃತ್ತಿಗೆ ಗೌರವ ಕೊಡುವುದರೊಂದಿಗೆ ಉದ್ಯೋಗದಲ್ಲಿ ತೊಡಗಿಕೊಳ್ಳಿ ಎಂದರು.
ಹಲಗೇರಿ ಹಾಲಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾ. ಬಿ.ಎಚ್. ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಕನಸು ಕಾಣಬೇಕು ಹಾಗೂ ಗುರಿ ಇರಿಸಿಕೊಳ್ಳಬೇಕು. ಉತ್ತಮ ವಿದ್ಯಾರ್ಥಿ ಆಗುವ ಮೂಲಕ ಮನೆಗೆ ಹಾಗೂ ಸಮಾಜಕ್ಕೆ ಒಳ್ಳೆಯ ಮಗನಾಗಿ ಎಲ್ಲರ ಪ್ರೀತಿಯನ್ನು ಗಳಿಸುವಂತಾಗಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾ. ಪ್ರೊ. ಎಸ್. ಪಿ ಗೌಡರ ಮಾತನಾಡಿ, ವಿದ್ಯಾರ್ಥಿಗಳು ಪಠ್ಯೇದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಇಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಕಾಲೇಜುಗಳಲ್ಲಿಯೇ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ವಿದ್ಯಾರ್ಥಿಗಳು ಕ್ರೀಡೆ, ಯೋಗಾಸನ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಉತ್ತಮವಾಗಿ ತೊಡಗಿಕೊಳ್ಳುವ ಮೂಲಕ ಅಂತರ್ ವಿಶ್ವವಿದ್ಯಾಲಯ ಸ್ಪರ್ಧೆಗಳಲ್ಲಿ ಭಾಗವಹಿಸಿ, ಬಹುಮಾನ ಪಡೆದುಕೊಂಡಿದ್ದಾರೆ ಎಂದರು.
ಸಾಂಸ್ಕೃತಿಕ ವೇದಿಕೆ ಸಂಚಾಲಕ ರವಿ.ಎಂ., ಗ್ರಾಪಂ ಅಧ್ಯಕ್ಷೆ ಸುನಂದಾ ವಗ್ಗರಣಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರುಗಳಾದ ಶಂಕರಗೌಡ ಕುಸಗೂರ, ಮಾದೇವಪ್ಪ ನಾರಜ್ಜಿ, ಚನ್ನಬಸಪ್ಪ ನಾಡಿಗೇರ, ಸೋಮಪ್ಪ ಕೊಟ್ಟದ ಶಿವಾನಂದ ವಗ್ಗರಣೆ, ಐಕ್ಯುಎಸಿ ಸಂಚಾಲಕ ಬಸವರಾಜ ಹುಗ್ಗಿ, ಬಿ.ಕೆ. ಮಂಜುನಾಥ, ಅಂಬಿಕಾ ಹೊಸಮನಿ, ನಾಗರಾಜ ಗೋಡಿಹಾಳ, ಸತೀಶ ಎಂ., ಗಂಗವ್ವ ದಾನಪ್ಪನವರ, ಶೋಭಾ ನಂದಿಹಳ್ಳಿ, ಶಂಕರ ಹರಿಜನ, ವೀರೇಶ ಷಡಕ್ಷರಿಮಠ, ಮೀನಾಕ್ಷಿ ಪೂಜಾರ, ಚಂದ್ರನಾಯಕ, ಕುಮಾರ ಕರಿಯಜ್ಜಿ, ಸಾವಿತ್ರಮ್ಮ, ಮೇಘನಾ ಮಾಂಗ್, ಶಿವಾನಂದ ಕೆ., ಶಿವಶಂಕರ ಅಂಗಡಿ, ಕೆ.ಬಿ. ರೇವಣಸಿದ್ದಪ್ಪ, ಸತೀಶ್ ನಾಯಕ್, ರವಿಕುಮಾರ ಎಸ್. ಯು. ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.